ಸೋಮವಾರಪೇಟೆ, ಜು.6: ಪಟ್ಟಣದಿಂದ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಕರ್ಕಳ್ಳಿ ಬಳಗುಂದ ಗ್ರಾಮವನ್ನು ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿದ್ದರೂ ಪಟ್ಟಣಕ್ಕೆ ಆಗಮಿಸುವ ಜನತೆ ಕೊರೊನಾ ಆತಂಕವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ.ಕಂಟೈನ್‍ಮೆಂಟ್ ಏರಿಯಾ ಹಿನ್ನೆಲೆ ಸೋಮವಾರ ನಡೆಯುವ ಸಂತೆಯನ್ನು ತಾಲೂಕು ತಹಶೀಲ್ದಾರ್ ರದ್ದುಗೊಳಿಸಿ ಆದೇಶ ನೀಡಿದ್ದರೂ ಸಹ ಇಂದು ಜವಾಬ್ದಾರಿ ಮರೆತ ಕೆಲ ವರ್ತಕರು ಸಂತೆಯಲ್ಲಿ ಅಂಗಡಿ ತೆರೆದು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.ಆರ್‍ಎಂಸಿ ಆವರಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ರದ್ದುಗೊಳಿಸಲಾಗಿ ದ್ದರಿಂದ ಗೇಟ್‍ಗೆ ಬೀಗ ಜಡಿಯಲಾಗಿದೆ. ಈ ಹಿನ್ನೆಲೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೈಟೆಕ್ ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೇ 50ಕ್ಕೂ ಅಧಿಕ ವರ್ತಕರು ಅಂಗಡಿಗಳನ್ನು ತೆರೆದಿದ್ದರು. ತರಕಾರಿ, ದಿನಸಿ, ದಿನಬಳಕೆಯ ವಸ್ತುಗಳ ಮಾರಾಟಕ್ಕೆ ತೆರೆದುಕೊಂಡಿದ್ದ ಸಂತೆಯಲ್ಲಿ ನೂರಾರು ಮಂದಿ ಗುಂಪುಗೂಡಿ ಖರೀದಿಯಲ್ಲಿ ತೊಡಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಮತ್ತು ಸಿಬ್ಬಂದಿಗಳು ಸಂತೆಗೆ ಆಗಮಿಸಿ, ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.ಇವರುಗಳ ಸೂಚನೆಗೆ ಬೆಲೆ ನೀಡದ ವರ್ತಕರು, ಅಂಗಡಿಗಳನ್ನು ಮುಚ್ಚಲು ಮೀನಾಮೇಷ ಎಣಿಸಿದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಎಎಸ್‍ಐ ರಘು ಹಾಗೂ ಸಿಬ್ಬಂದಿಗಳು ಲಾಠಿ ಬೀಸಲು ಮುಂದಾದರು. ಲಾಠಿಯ ಬೆದರಿಕೆಗೆ ಸಂತೆಯೊಳಗಿದ್ದ ಸಾರ್ವಜನಿಕರು ಚೆಲ್ಲಾಪಿಲ್ಲಿಯಾಗಿ ಓಡಿದರು.

ವರ್ತಕರಿಗೆ ಎಚ್ಚರಿಕೆ ನೀಡಿದ ಪೊಲೀಸರು, ‘ಕೊರೊನಾ ವೈರಸ್‍ನಿಂದ ಜನ ಸಾಯುತ್ತಿದ್ದಾರೆ. ಸಂತೆಗಳನ್ನೂ ರದ್ದುಪಡಿಸಲಾಗಿದೆ. ಆದರೂ ಸಹ ಸ್ವಲ್ಪವೂ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದೀರಾ’ ಎಂದು ಎಚ್ಚರಿಸುತ್ತಾ ಕೆಲ ವರ್ತಕರಿಗೆ ಲಾಠಿ ರುಚಿ ತೋರಿಸಲು ಮುಂದಾದರು.

ಬೆಳಗ್ಗಿನಿಂದ ವಹಿವಾಟು ನಡೆದ ಸಂತೆ 11.30ರ ವೇಳೆಗೆ ಸ್ತಬ್ಧಗೊಂಡಿತು. ಸಂತೆಯೊಳಗೆ ಆಗಮಿಸುತ್ತಿದ್ದ ಸಾರ್ವಜನಿಕರನ್ನು ಪ.ಪಂ. ಹಾಗೂ ಗೃಹರಕ್ಷಕ ಸಿಬ್ಬಂದಿಗಳು ತಡೆದು ವಾಪಸ್ ಕಳುಹಿಸಿದರು.

ವರ್ತಕರಿಗೆ ದಂಡ: ತಹಶೀಲ್ದಾರ್ ಆದೇಶ ಮೀರಿ ಸಂತೆಯಲ್ಲಿ ವಹಿವಾಟು ನಡೆಸಿದ ಕೆಲ ವರ್ತಕರಿಗೆ ಪಟ್ಟಣ ಪಂಚಾಯಿತಿಯಿಂದ ದಂಡ ವಿಧಿಸಲಾಯಿತು. ತಹಶೀಲ್ದಾರ್‍ರ ಮುಂದಿನ ಆದೇಶದವರೆಗೆ ಸಂತೆ ನಡೆಸಲು ಅನುಮತಿ ಇಲ್ಲ. ಒಂದು ವೇಳೆ ಆದೇಶ ಮೀರಿ ಸಂತೆಗೆ

(ಮೊದಲ ಪುಟದಿಂದ) ಆಗಮಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವದಾಗಿ ಮುಖ್ಯಾಧಿಕಾರಿ ನಾಚಪ್ಪ ಎಚ್ಚರಿಸಿದರು.

ಸಾಮಾಜಿಕ ಅಂತರಕ್ಕೆ ಎಳ್ಳುನೀರು: ಸಂತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ಜನಜಾತ್ರೆ ಕಂಡುಬಂತು. ಎಲ್ಲೆಂದರಲ್ಲಿ ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟ ನಡೆಯಿತು. ಸಾರ್ವಜನಿಕರು ಸಾಮಾಜಿಕ ಅಂತರಕ್ಕೆ ಎಳ್ಳುನೀರು ಬಿಟ್ಟು, ಗುಂಪಿನಲ್ಲಿ ವಸ್ತುಗಳನ್ನು ಖರೀದಿಸಿದರು. ಹಲವಷ್ಟು ಮಂದಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದುದು ಕಂಡುಬಂತು.

ಅಂಗಡಿಗಳಲ್ಲೂ ಅಂತರವಿಲ್ಲ: ಇನ್ನು ಪಟ್ಟಣದಲ್ಲಿರುವ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಸಂತೆ ದಿನದಂದು ಭರ್ಜರಿ ವ್ಯಾಪಾರ ನಡೆದರೂ ಸಾಮಾಜಿಕ ಅಂತರ ಇರಲಿಲ್ಲ. ದಿನಸಿ ಸೇರಿದಂತೆ ತರಕಾರಿ ಅಂಗಡಿಗಳಲ್ಲಿ ಜನರು ನೂಕುನುಗ್ಗಲಿನೊಂದಿಗೆ ವಹಿವಾಟು ನಡೆಸಿದರು. ಪಟ್ಟಣದ ಹಲವು ರಸ್ತೆಗಳ ಬದಿಯಲ್ಲಿ ತರಕಾರಿ, ದಿನೋಪ ಯೋಗಿ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದರಿಂದ ವಾಹನಗಳ ಸಂಚಾರಕ್ಕೂ ತೊಡಕುಂಟಾಯಿತು.

ಮಳೆಗಾಲವಾದ್ದರಿಂದ ನಾಲ್ಕು ಚಕ್ರದ ವಾಹನಗಳ ಮೂಲಕವೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಟ್ಟಣಕ್ಕೆ ಆಗಮಿಸುತ್ತಿದ್ದು, ಪಟ್ಟಣದಲ್ಲಿ ವಾಹನಗಳ ನಿಲುಗಡೆ ಅವ್ಯವಸ್ಥೆ ಗೋಚರಿಸಿತು.

ಸದ್ಯಕ್ಕೆ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿರುವದರಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲೂ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಪತ್ರಿಕಾಭವನದ ಮುಂಭಾಗ, ಶಾಸಕರ ಕಚೇರಿ ಆವರಣ ಸೇರಿದಂತೆ ಕ್ಲಬ್‍ರಸ್ತೆ, ಮಡಿಕೇರಿ ರಸ್ತೆ, ತ್ಯಾಗರಾಜ ರಸ್ತೆ, ಮುಖ್ಯರಸ್ತೆಗಳಲ್ಲೂ ವಾಹನಗಳ ನಿಲುಗಡೆಯಾಗುತ್ತಿದ್ದು, ಸ್ಥಳಾವಕಾಶದ ಕೊರತೆ ಹಿನ್ನೆಲೆ ಸಂಚಾರ ವ್ಯವಸ್ಥೆ ಹದಗೆಡುತ್ತಿದೆ.

ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳ ನಿಲುಗಡೆಯಾಗುತ್ತಿದ್ದು, ಸಮರ್ಪಕ ವ್ಯವಸ್ಥೆಗಾಗಿ ಗೃಹ ರಕ್ಷಕದಳದ ಸಿಬ್ಬಂದಿ ಪರದಾಡುವಂತಾಯಿತು.

ಕಂಟೈನ್‍ಮೆಂಟ್ ಏರಿಯಾ ಹತ್ತಿರದಲ್ಲೇ ಇರುವ ಹಿನ್ನೆಲೆ ಸಂತೆಯನ್ನು ರದ್ದುಗೊಳಿಸಿದ್ದರೂ, ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೇ ಸಂತೆಯಲ್ಲಿ ಮಾರಾಟಕ್ಕೆ ಮುಂದಾದ ವರ್ತಕರ ವಿರುದ್ಧ ಪ್ರಜ್ಞಾವಂತರು ಅಸಮಾಧಾನ ಹೊರಹಾಕುತ್ತಿದ್ದರು. ಪಾಲಿಬೆಟ್ಟ ವರ್ತಕರಿಂದ ಬೆಂಬಲ

ಪಾಲಿಬೆಟ್ಟ: ಪಾಲಿಬೆಟ್ಟ ಸುತ್ತಮುತ್ತ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡಿ ರುವ ಮುಂಜಾಗ್ರತಾ ಕ್ರಮಕ್ಕೆ ವರ್ತಕರು ಅರ್ಧ ದಿನ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ಆದರೆ ಮದ್ಯದಂಗಡಿಗಳು ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರಕ್ಕೆ ಸ್ಪಂದಿಸದೇ ಬಾರ್ ತೆರೆದು ವ್ಯಾಪಾರ ಮಾಡುತ್ತಿರುವ ಬಗ್ಗೆ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ವಾಹನ ಚಾಲಕರು, ವರ್ತಕರು ಸೇರಿದಂತೆ ಎಲ್ಲರೂ ಸಹಕಾರ ನೀಡುತ್ತಿರುವ ಸಂದರ್ಭ ದಲ್ಲಿ ಮದ್ಯದಂಗಡಿಗಳು ವ್ಯಾಪಾರ ಮಾಡುತ್ತಿರುವುದು ಸರಿಯಲ್ಲ. ವೈರಸ್ ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮ ಹಾಗೂ ಗ್ರಾಮದ ಹಿತ ದೃಷ್ಟಿಯಿಂದ ಬಾರ್ ಮುಚ್ಚಬೇಕೆಂದು ಒತ್ತಾಯಿಸಿದರು.

ಮದ್ಯದಂಗಡಿಗಳು ತೆರೆದಿರುವು ದರಿಂದ ಹೊರ ಜಿಲ್ಲೆಯ ವ್ಯಕ್ತಿಗಳು ಮದ್ಯ ಖರೀದಿಗೆ ಬರುತ್ತಿದ್ದು ಇದರಿಂದ ಗ್ರಾಮದಲ್ಲಿ ಸಮಸ್ಯೆ ಯಾಗುತ್ತಿದ್ದು ಜಿಲ್ಲಾಡಳಿತ ಬಾರ್ ಮುಚ್ಚಿಸದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭ ವರ್ತಕರಾದ ಅಬುಬಕ್ಕರ್, ದಯಾನಂದ ರೈ, ರಾಜಪ್ಪ, ವಿಜೇಶ್, ಅನೀಲ್, ಮುನೀರ್ ಸೇರಿದಂತೆ ಮತ್ತಿತರರು ಇದ್ದರು.

ಹುದಿಕೇರಿಯಲ್ಲಿ ರದ್ದು

ಗೋಣಿಕೊಪ್ಪ ವರದಿ: ಕೊರೊನಾ ನಿಯಂತ್ರಣಕ್ಕೆ ಹುದಿಕೇರಿ ಮತ್ತು ಟಿ. ಶೆಟ್ಟಿಗೇರಿಯಲ್ಲಿ ಸಂತೆ ರದ್ದು ಪಡಿಸಿದ್ದರಿಂದ ವ್ಯಾಪಾರಿಗಳು ಅತ್ತ ಬರಲಿಲ್ಲ. ಜನರ ಓಡಾಡ ಕೂಡ ಕಡಿಮೆ ಇತ್ತು.

ಸೋಮವಾರ ನಡೆಯುತ್ತಿದ್ದ ಸಂತೆಯನ್ನು ರದ್ದು ಪಡಿಸಿ ಸ್ಥಳೀಯ ಆಡಳಿತದ ಕ್ರಮಕ್ಕೆ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು. ಹುದಿಕೇರಿಯಲ್ಲೂ ಕೂಡ ಸಂತೆ ನಡೆಯಲಿಲ್ಲ.

- ವಿಜಯ್, ಪುತ್ತಂ, ಸುದ್ದಿಪುತ್ರ