*ಸಿದ್ದಾಪುರ, ಜು. 6: ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಜಿಲ್ಲೆಯ ವಿವಿಧೆಡೆ ಸೀಲ್ ಡೌನ್ ಮೂಲಕ ಕೆಲವು ಬಡಾವಣೆಗಳಲ್ಲಿ ಸಂಚಾರ ನಿಷೇಧವಾಗಿದ್ದರೆ ಇಲ್ಲೊಂದು ಗ್ರಾಮದ ಮುಖ್ಯರಸ್ತೆ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಮುಚ್ಚಲ್ಪಟ್ಟಿದೆ.
ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಅತ್ತಿಮಂಗಲ, ನಲ್ವತ್ತೆಕರೆ, ಬರಡಿ ಮುಖ್ಯರಸ್ತೆಯಲ್ಲಿ ಇದೀಗ ಸಂಚಾರಕ್ಕೆ ನಿರ್ಬಂಧ ಬಿದ್ದಿದೆ. ಬೆಳೆಗಾರ ಲೆಸಿಲಿ ಪೌಲ್ ಪಿಂಟೋ ಸೋಮವಾರಪೇಟೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ರಸ್ತೆ ಇರುವ ಜಮೀನು ತಮಗೆ ಸೇರಿದ್ದೆಂದು ವಾದ ಮಂಡಿಸಿ ಗೆಲವು ಸಾಧಿಸಿದ್ದಾರೆ. ಇದರ ಪರಿಣಾಮ ಜನ ಮತ್ತು ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಬೇಲಿಯನ್ನು ನಿರ್ಮಿಸಿ ಇದು ಖಾಸಗಿ ರಸ್ತೆ, ಒಳಗೆ ಪ್ರವೇಶಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಮಫಲಕ ಅಳವಡಿಸಲಾಗಿದೆ.
ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಹಿಂದೆ ಜಿ.ಪಂ ಸದಸ್ಯರಾಗಿದ್ದ ಬಲ್ಲಾರಂಡ ಮಣಿಉತ್ತಪ್ಪ ಅವರು ತಮ್ಮ ಅವಧಿಯಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ರಸ್ತೆ ವಿಸ್ತರಣೆ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಆದರೆ ಅಭಿವೃದ್ಧಿಯಾದ ಈ ರಸ್ತೆ ಇದೀಗ ಗ್ರಾಮಸ್ಥರಿಗೆ ಅಲಭ್ಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.