ಮುಳ್ಳೂರು, ಜು. 6: ಸತ್ತ ವ್ಯಕ್ತಿಗೆ ಹೆಂಡತಿ, ಮಕ್ಕಳು ಸಂಬಂಧಿಕರು ಇದ್ದರೂ ಅಂತ್ಯಕ್ರಿಯೆಗೆ ಬಾರದ ಅಮಾನವೀಯ ಘಟನೆ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ಗೋಪಾಲಪುರ ನಿವಾಸಿ ಯೂಸ್‍ಫ್ ಅಲಿಯಾಸ್ ವರ್ಗಿಸ್ (68) ಸತ್ತ ವ್ಯಕ್ತಿ. ಮೂಲತ: ಕ್ರೈಸ್ತ ಧರ್ಮದವರಾದ ವರ್ಗಿಸ್ ಕೆಲವು ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ಯೂಸ್‍ಫ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಯೂಸಫ್‍ಗೆ ಹೆಂಡತಿ ಮೂವರು ಮಕ್ಕಳಿದ್ದು ಕೆಲವು ದಿನಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದ ಹಿನ್ನೆಲೆಯಲ್ಲಿ ಯೂಸ್‍ಫ್ ಒಬ್ಬರೆ ಗೋಪಾಲಪುರದಲ್ಲಿದ್ದರು. ವಯೋ ಸಹಜ ಆನಾರೋಗ್ಯ ಸಮಸ್ಯೆಯಿಂದ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಾ.4 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
(ಮೊದಲ ಪುಟದಿಂದ) ಸತ್ತ ವ್ಯಕ್ತಿಯ ಸಂಬಂಧಿಕರು ಯಾರೂ ಆಸ್ಪತ್ರೆಗೆ ಬಾರದ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿ ಅನಾಥ ಶವ ಎಂದು ಪರಿಗಣಿಸಿ ಮೃತದೇಹವನ್ನು ಶವಾಗಾರದಲ್ಲಿ ಇಟ್ಟಿದ್ದರು. ಅನಾಥ ಶವದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗಿತ್ತು. ಮಾಹಿತಿ ತಿಳಿದ ಗೋಪಾಲಪುರದ ಸ್ಥಳೀಯರು ಮತ್ತು ಕರವೇ ಕಾರ್ಯಕರ್ತರು ಮೃತ ವ್ಯಕ್ತಿಯ ಹೆಂಡತಿ, ಮಕ್ಕಳು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದ್ದರೂ ಯಾರು ಬಾರದ ಹಿನ್ನೆಲೆ ಮಡಿಕೇರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹವನ್ನು ಗೋಪಾಲಪುರಕ್ಕೆ ತಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದರು. ಕ್ರೈಸ್ತ ಧರ್ಮದಲ್ಲಿ ಜನಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ ಸತ್ತಾಗ ಸಂಬಂದಿಕರು ಬಾರದಿದ್ದಾಗ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡಿರುವ ಅಪರೂಪದ ಘಟನೆಗೆ ಇದು ಸಾಕ್ಷಿಯಾಗಿದ್ದು, ಕರವೇ ಕಾರ್ಯಕರ್ತರೊಂದಿಗೆ ಗ್ರಾಮಸ್ಥರು ಕೈ ಜೋಡಿಸಿ ಮಾನವೀಯತೆ ಮೆರೆದಿದ್ದಾರೆ.
-ಭಾಸ್ಕರ್ ಮುಳ್ಳೂರು