ಮಡಿಕೇರಿ, ಜು. 5: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ದಿಸೆಯಲ್ಲಿ ಮತ್ತು ರಾಜ್ಯದೆಲ್ಲೆಡೆ ಈ ಸಂಬಂಧ ಸರಕಾರ ಇಂದು ಘೋಷಿಸಿರುವ ಬಂದ್ ಹಿನ್ನೆಲೆ, ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಸ್ಪಂದನದೊಂದಿಗೆ, ಜನತೆ ಸ್ಪಂದಿಸಿದೆ. ದಕ್ಷಿಣ ಕೊಡಗಿನ ಕುಟ್ಟ, ಬಿರುನಾಣಿ, ಮಾಕುಟ್ಟ ಗಡಿಯಿಂದ ಉತ್ತರ ಕೊಡಗಿನ ಕೊಡ್ಲಿಪೇಟೆ, ಶಿರಂಗಾಲ, ಕುಶಾಲನಗರದ ಕೊಪ್ಪ ಗಡಿಗಳು ಸೇರಿದಂತೆ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಕರಿಕೆ, ಸಂಪಾಜೆ ಗಡಿಗಳ ಸಹಿತ ಎಲ್ಲೆಡೆ ಉತ್ತಮ ಸ್ಪಂದನ ಲಭಿಸಿದೆ.ಜಿಲ್ಲೆಯಲ್ಲಿ ಹಾಲು, ಪತ್ರಿಕೆಗಳು, ಔಷಧಿ, ಅಗತ್ಯ ವಸ್ತುಗಳ ವಹಿವಾಟು ಸೀಮಿತ ಸಮಯದೊಳಗೆ ನಡೆದಿದ್ದು, ಆ ಬಳಿಕ ಅನಿವಾರ್ಯ ಪ್ರಯಾಣ ಹೊರತು ರಾಜ್ಯ ಸಾರಿಗೆ ಬಸ್‍ಗಳ ಸಹಿತ ಎಲ್ಲಾ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ದಕ್ಷಿಣ ಕೊಡಗಿನ ಕುಟ್ಟ, ಶ್ರೀಮಂಗಲ, ಬಿರುನಾಣಿ, ಕಾನೂರು, ಪೊನ್ನಂಪೇಟೆ, ಗೋಣಿಕೊಪ್ಪಲು, ತಿತಿಮತಿ ಹಾಗೂ ವೀರಾಜಪೇಟೆ ಗ್ರಾಮಾಂತರ ಪ್ರದೇಶಗಳ ಸಹಿತ ತಾಲೂಕು ಕೇಂದ್ರ, ಸಿದ್ದಾಪುರ, ಅಮ್ಮತ್ತಿ ಇತರೆಡೆಗಳಲ್ಲಿ ಜನತೆ ನಿಯಮ ಪಾಲಿಸಿದ್ದಾಗಿ ಆಯಾ ಪೊಲೀಸ್ ಠಾಣಾಧಿಕಾರಿಗಳು ಮತ್ತು ಉಪ ಪೊಲೀಸ್ ಅಧೀಕ್ಷಕ ಜಯಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ಪಟ್ಟಣ, ಕೊಡ್ಲಿಪೇಟೆ, ಶನಿವಾರಸಂತೆ, ಮಾದಾಪುರ, ಸುಂಟಿಕೊಪ್ಪ, ಕುಶಾಲನಗರ, ಹೆಬ್ಬಾಲೆ, ಶಿರಂಗಾಲ ಇತರೆಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ತಾಲೂಕಿನೆಲ್ಲೆಡೆ ಸರಕಾರದ ನಿಯಮ ಪಾಲನೆಯಾಗಿದೆ, ಎಲ್ಲಿಯೂ ಉಲ್ಲಂಘನೆಯಾಗಿಲ್ಲವೆಂದು ಪೊಲೀಸ್ ಠಾಣಾಧಿಕಾರಿಗಳ ಸಹಿತ ಉಪ ಅಧೀಕ್ಷಕ ಶೈಲೇಂದ್ರ ಖಚಿತಪಡಿಸಿದ್ದಾರೆ.
ಮಡಿಕೇರಿ ನಗರ ಹಾಗೂ ಮುಖ್ಯ ಪಟ್ಟಣಗಳಾದ ನಾಪೋಕ್ಲು, ಭಾಗಮಂಡಲ, ಮೂರ್ನಾಡು, ಚೇರಂಬಾಣೆ, ಮರಗೋಡು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜನತೆ ಸ್ಪಂದಿಸಿದ್ದಾರೆ. ಎಲ್ಲಿಯೂ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದು ಠಾಣಾಧಿಕಾರಿಗಳು ಹಾಗೂ ಉಪ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ದೃಢಪಡಿಸಿದ್ದಾರೆ.
ನಾಪೆÇೀಕ್ಲು ಬಂದ್
ನಾಪೆÇೀಕ್ಲು: ರಾಜ್ಯ ಸರಕಾರ ಆದೇಶ ನೀಡಿದ ಭಾನುವಾರದ ಲಾಕ್ ಡೌನ್ ನಾಪೆÇೀಕ್ಲುವಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಹಾಲು, ಪೇಪರ್, ಔಷದಿ ಅಂಗಡಿ, ಆಸ್ಪತ್ರೆ ಮತ್ತು ಪರವಾನಿಗೆ ಪಡೆದ ಒಂದೆರಡು ದಿನಸಿ ಅಂಗಡಿಗಳನ್ನು ಮಾತ್ರ ತೆರೆಯಲಾಗಿತ್ತು. ಆದರೆ ಜನರ ಓಡಾಟ ಇಲ್ಲದ ಕಾರಣ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು. ಅನಗತ್ಯವಾಗಿ ಓಡಾಟ ನಡೆಸುವವರ ಬಗ್ಗೆ ಪೆÇಲೀಸರು ಕಣ್ಗಾವಲು ಇರಿಸಿದ್ದರು. ಪೆÇಲೀಸರಿಂದ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿತ್ತು.
(ಮೊದಲ ಪುಟದಿಂದ)
ಸೋಮವಾರಪೇಟೆ ಜನಜೀವನ ಸ್ತಬ್ಧ
ಸೋಮವಾರಪೇಟೆ: ಸರ್ಕಾರದಿಂದ ಆದೇಶಿಸಲ್ಪಟ್ಟಿದ್ದ ಭಾನುವಾರದ ಲಾಕ್‍ಡೌನ್ ಸೋಮವಾರಪೇಟೆ ಪಟ್ಟಣದಲ್ಲಿ ಯಶಸ್ವಿಯಾಗಿದ್ದು, ಜನಜೀವನ ಸ್ತಬ್ಧಗೊಂಡಿತ್ತು. ಬೆಳಿಗ್ಗೆ ಹಾಲು, ಪತ್ರಿಕೆಗಳ ಮಾರಾಟ ನಡೆದರೆ, ಅಗತ್ಯ ವಸ್ತುಗಳ ಅಂಗಡಿಗಳೂ ಬಹುತೇಕ ಮುಚ್ಚಲ್ಪಟ್ಟಿದ್ದವು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಕೆಲವಾರು ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಮಾತ್ರ ಕಂಡುಬರಲಿಲ್ಲ.
ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣ ವ್ಯಾಪ್ತಿಯ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ನಂದಿನಿ ಕ್ಷೀರಕೇಂದ್ರ, ಮೆಡಿಕಲ್ ಅಂಗಡಿಗಳು ಎಂದಿನಂತೆ ತೆರೆದಿದ್ದರೆ, ಕೆಲ ದಿನಸಿ ಹಾಗೂ ತರಕಾರಿ ಅಂಗಡಿಗಳು ತೆರೆದಿದ್ದರೂ ವ್ಯಾಪಾರ ವಹಿವಾಟು ಅಷ್ಟಾಗಿ ನಡೆಯಲಿಲ್ಲ.
ಪಟ್ಟಣದ ಮಾರ್ಕೆಟ್‍ನಲ್ಲಿರುವ ಒಂದು ಮಾಂಸದಂಗಡಿಯನ್ನು ಹೊರತುಪಡಿಸಿದರೆ, ಉಳಿದಂತೆ ಎಲ್ಲಾ ಮೀನು ಮತ್ತು ಮಾಂಸದ ಅಂಗಡಿಗಳು, ಬಾರ್‍ಗಳು ಮುಚ್ಚಿದ್ದವು. ಆಸ್ಪತ್ರೆ ಸೇರಿದಂತೆ ಇತರ ತುರ್ತು ಕೆಲಸಗಳಿಗೆ ಹೊರತುಪಡಿಸಿ ಉಳಿದಂತೆ ಖಾಸಗಿ ವಾಹನಗಳ ಓಡಾಟ ಸ್ಥಗಿತಗೊಂಡಿತ್ತು. ಆಟೋಗಳು, ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಕೂಲಿ ಕೆಲಸಕ್ಕೆ ತೆರಳುವ ಮಂದಿಯನ್ನು ಖಾಸಗಿ ಪಿಕ್‍ಅಪ್ ವಾಹನಗಳ ಮೂಲಕ ಸಾಗಿಸುತ್ತಿದ್ದುದು ಕಂಡುಬಂತು.
ಇನ್ನು ಪಟ್ಟಣ ಸುತ್ತಮುತ್ತಲಿನ ಗೌಡಳ್ಳಿ, ಶಾಂತಳ್ಳಿ, ಐಗೂರು, ಗಣಗೂರು, ಹೊಸತೋಟ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಅಬ್ಬೂರುಕಟ್ಟೆ, ಕಾಗಡಿಕಟ್ಟೆ, ಗೋಣಿಮರೂರು, ಕಾರೇಕೊಪ್ಪ ಸೇರಿದಂತೆ ಇತರೆಡೆಯೂ ಸಂಪೂರ್ಣ ಲಾಕ್‍ಡೌನ್ ಕಂಡುಬಂತು. ಗ್ರಾಮೀಣ ಪ್ರದೇಶದಲ್ಲಿ ತೋಟ, ಗದ್ದೆ ಕೆಲಸಕಾರ್ಯಗಳು ಪ್ರಗತಿಯಲ್ಲಿದ್ದು, ಭಾನುವಾರದ ಲಾಕ್‍ಡೌನ್ ಹಿನ್ನೆಲೆ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದವು.
ಇಂದು ಸಂತೆ ರದ್ದು
ಸೋಮವಾರಪೇಟೆ ಪಟ್ಟಣ ಸಮೀಪದ ಕರ್ಕಳ್ಳಿ ಬಳಗುಂದ ಗ್ರಾಮವನ್ನು ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿರುವದರಿಂದ ತಾ. 6 ರಂದು (ಇಂದು) ನಡೆಯಬೇಕಿದ್ದ ಸೋಮವಾರಪೇಟೆಯ ಸಂತೆಯನ್ನು ರದ್ದುಗೊಳಿಸಲಾಗಿದೆ. ಕಳೆದ ವಾರವೂ ಸಹ ಸಂತೆಯನ್ನು ರದ್ದುಗೊಳಿಸಿ ಹೊರಡಿಸಲಾಗಿದ್ದ ಆದೇಶವನ್ನು ಈ ವಾರಕ್ಕೂ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.
ಕಣಿವೆ : ಕೊರೋನಾ ಮಹಾಮಾರಿಯ ನರ್ತನ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಮಾಡಿರುವ ಭಾನುವಾರದ ಲಾಕ್‍ಡೌನ್ ಕುಶಾಲನಗರ ಹೋಬಳಿ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಜನ ಹಾಗೂ ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದ ಚಿತ್ರಣ ಗೋಚರಿಸಿತ್ತು.
ಈ ಹಿಂದೆ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಲಾಕ್‍ಡೌನ್ ಸಂದರ್ಭದಲ್ಲಿ ಕೊರೋನಾಕ್ಕೆ ಹೆದರದ ಜನ ಇದೀಗ ಕೊರೊನಾ ಎಂಬ ಪೀಡೆ ತಮ್ಮೂರಿನ ಬೀದಿಗಳಿಗೆ ಬಂದಿಳಿದ ಸ್ವಯಂ ಲಾಕ್‍ಡೌನ್ ನಿರ್ಧಾರಗಳಿಗೆ ಮುಂದಾಗುತ್ತಿದ್ದಾರೆ. ಇದೀಗ ಸರ್ಕಾರ ಘೋಷಿಸಿದ ಲಾಕ್‍ಡೌನ್ ನಿಂದಾಗಿ ವಾಹನ ಸಂಚಾರ ವಿರಳವಾಗಿತ್ತು. ಮಾತ್ರವಲ್ಲ, ಜನ ಕೂಡ ಮನೆಯಲ್ಲೇ ಕುಳಿತು ಲಾಕ್ ಡೌನ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು.
ಗುಡ್ಡೆಹೊಸೂರು: ಸುತ್ತಮುತ್ತಲಿನ ಎಲ್ಲಾ ಗ್ರಾಮಗಳು ಸಂಡೇ ಲಾಕ್‍ಡೌನ್ ಕರೆಗೆ ಓಗೊಟ್ಟ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿದ್ದವು. ಕೇವಲ ಮಾಂಸ ಮತ್ತು ತರಕಾರಿ ಅಂಗಡಿ ಮಾತ್ರ ತೆರೆದಿತ್ತು. ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಶನಿವಾರಸಂತೆ: ಶನಿವಾರಸಂತೆಯಲ್ಲಿ ಸಂಪೂರ್ಣ ಕಪ್ರ್ಯೂ ಗೋಚರಿಸಿದ್ದು, ಮನೆಯಿಂದ ಹೊರ ಬಾರದ ಜನರಿಂದಾಗಿ ಸಂಪೂರ್ಣ ಸ್ತಬ್ಧವಿತ್ತು. ಶನಿವಾರಸಂತೆ ಪಟ್ಟಣ ಇಂದು ಖಾಲಿ ಖಾಲಿಯಿದ್ದು, ಖಾಸಗಿ ವಾಹನಗಳ ಸಂಚಾರವೂ ಇರಲಿಲ್ಲ. ಮಾಂಸದಂಗಡಿಗಳು ತೆರೆದಿದ್ದರೂ ಜನರಿಲ್ಲದೆ ಬಣಗುಡುತ್ತಿತ್ತು. ಕಳೆದ 15ದಿನದಿಂದ ಮಧ್ಯಾಹ್ನ 12ರ ವರೆಗೆ ಮಾತ್ರ ಅಂಗಡಿಮುಂಗಟ್ಟು ತೆರೆಯುತ್ತಿತ್ತು. ಇಂದು ಬೆಳಗ್ಗಿನಿಂದ ಮುಚ್ಚಿ ಲಾಕ್‍ಡೌನ್ ಗೆ ಸಹಕರಿಸಿದ್ದಾಗಿ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ವೀರಾಜಪೇಟೆ ಲಾಕ್‍ಡೌನ್
ವೀರಾಜಪೇಟೆ: ಕೊರೊನಾ ತಡೆಗಾಗಿ ಸರಕಾರದ ಆದೇಶದಂತೆ ಇಂದು ವೀರಾಜಪೇಟೆ ಪಟ್ಟಣದಾದ್ಯಂತ ಪೂರ್ಣವಾಗಿ ಬಂದ್ ಮಾಡಲಾಗಿತ್ತು. ವಾಹನಗಳ ಅನಗತ್ಯ ಸಂಚಾರಕ್ಕೂ ಪೊಲೀಸರು ಮುಖ್ಯರಸ್ತೆಯ ಆಯ್ದ ಭಾಗಗಳಲ್ಲಿ ಬ್ಯಾರಿಕಾಡ್ ಇಟ್ಟು ಬಂದ್ ಮಾಡಿದ್ದು ಕಂಡುಬಂತು. ಪೊಲೀಸರು ಸೀಲ್ ಡೌನ್ ಮಾಡಿದ ಮೀನುಪೇಟೆಯ ಒಂದು ಭಾಗ ಹಾಗೂ ಗೋಣಿಕೊಪ್ಪ ರಸ್ತೆಯಲ್ಲಿರುವ ಸೀಲ್‍ಡೌನ್ ಆದ ಶಾಂತಿ ನಗರದ ಮೇಲೆ ವಿಶೇಷ ನಿಗಾ ಇರಿಸಿದ್ದರು.
ಭಾನುವಾರವೇ ಲಾಕ್‍ಡೌನ್ ಆದ ಕಾರಣ ಬೆಳಿಗ್ಗೆ 7ಗಂಟೆಗೆ ಇಲ್ಲಿನ ಮಾಂಸ ಮಾರುಕಟ್ಟೆಯ ಪ್ರದೇಶದಲ್ಲಿ ಕೇವಲ ಒಂದು ಗಂಟೆ ತೆರದಿದ್ದ ಮಳಿಗೆಗಳಲ್ಲಿ ಮಾಂಸ ಹಾಗೂ ಕೋಳಿ ಮಾಂಸವನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು. ನಗರ ಪೊಲೀಸರ ತಂಡ ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಂದೋಬಸ್ತ್‍ಗಾಗಿ ಪಟ್ಟಣದಾದ್ಯಂತ ಸಂಚರಿಸುತ್ತಿದ್ದು ಜನರು ಬೀದಿಗೆ ಬರುವುದಕ್ಕೆ ಪೂರ್ತಿ ಕಡಿವಾಣ ಹಾಕಿದ್ದರು.
ಕೋವಿಡ್‍ಗಾಗಿ ಮೀಸಲು
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ರೋಗಿಗಳ ಚಿಕಿತ್ಸೆಗಾಗಿ ಬಾಳುಗೋಡು ಮೊರಾರ್ಜಿ ವಸತಿ ಶಾಲೆ ಹಾಗೂ ಏಕಲವ್ಯ ವಸತಿ ಶಾಲೆಯಲ್ಲಿ ಸ್ಥಳಾವಕಾಶಕ್ಕಾಗಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶಿಸಿರುವ ಹಿನ್ನಲೆಯಲ್ಲಿ ಈ ಎರಡು ಶಾಲೆಗಳ ಕಟ್ಟಡಗಳನ್ನು ಶುಚಿಗೊಳಿಸಿ ಚಿಕಿತ್ಸೆಗಾಗಿ ಕ್ರಮಕೈಗೊಳ್ಳಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ.ನಂದೀಶ್ ತಿಳಿಸಿದರು. ನಿನ್ನೆ ವೀರಾಜಪೇಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ದಂತ ವೈದ್ಯ ಕಾಲೇಜು ಹಾಗೂ ಸಾರ್ವಜನಿಕ ಆಸ್ಪತ್ರೆ ಪರಿಶೀಲಿಸಿ, ಬಾಳುಗೋಡು ವಸತಿ ಶಾಲೆಗಳ ಕುರಿತು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿದ್ದರು.
ಗೋಣಿಕೊಪ್ಪ ಲಾಕ್‍ಡೌನ್
ಗೋಣಿಕೊಪ್ಪಲು: ಸರಕಾರ ಭಾನುವಾರದಂದು ಲಾಕ್‍ಡೌನ್ ಮಾಡುವಂತೆ ಆದೇಶ ನೀಡಿದ ಮೇರೆಗೆ ಸಂತೆ ದಿನ ಗೋಣಿಕೊಪ್ಪಲುವಿನಲ್ಲಿ ಸಂಪೂರ್ಣ ಬಂದ್ ಆಗಿತ್ತು. ವಾಹನ ಸಂಚಾರ, ನಾಗರಿಕರ ಓಡಾಟ ಅಷ್ಟಾಗಿ ಕಂಡು ಬರಲಿಲ್ಲ. ವೃತ್ತ ನಿರೀಕ್ಷಕ ರಾಮರೆಡ್ಡಿ, ಠಾಣಾಧಿಕಾರಿ ಸುರೇಶ್ ಬೋಪಣ್ಣ, ನೇತೃತ್ವದಲ್ಲಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆಯಾಕಟ್ಟಿನ ಪ್ರದೇಶದಲ್ಲಿ ಪೆÇಲೀಸರು ಗಸ್ತು ನಡೆಸಿದರು. ಮುಂಜಾನೆಯಿಂದಲೇ ಹೆಚ್ಚಾಗಿ ಮಳೆ ಸುರಿಯುತ್ತಿತ್ತು. ನಾಗರಿಕರು ನಗರಕ್ಕೆ ಬರುವುದಕ್ಕೆ ತಡೆ ನೀಡಿದಂತಿತ್ತು.
ಸಿದ್ದಾಪುರ: ತಾ. 5 ರಂದು ಸರ್ಕಾರ ಲಾಕ್‍ಡೌನ್ ಮಾಡುವಂತೆ ಆದೇಶ ನೀಡಿದ ಮೇರೆಗೆ ಸಿದ್ದಾಪುರದಲ್ಲಿ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದವು ಉಳಿದಂತೆ ಸಂಪೂರ್ಣ ಬಂದ್ ಆಗಿತ್ತು. ಸಿದ್ದಾಪುರದಲ್ಲಿ ಕಳೆದವಾರ ಸಂತೆ ರದ್ದುಪಡಿಸಲಾಗಿತ್ತು ಈ ಭಾನುವಾರ ಲಾಕ್‍ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರವಿಲ್ಲದೆ ಸಾರ್ವಜನಿಕರಿಗೆ ಪಟ್ಟಣಕ್ಕೆ ಬರಲಾಗದೆ ಸಿದ್ದಾಪುರ ಪಟ್ಟಣದಲ್ಲಿ ಜನ ಓಡಾಟ ಇಲ್ಲದೆ ಬಿಕೋ ಎನ್ನುತ್ತಿತ್ತು ಕೆಲವು ಮಾಂಸದ ಅಂಗಡಿಗಳು ತೆರೆದಿದ್ದು, ಆದರೆ ಗ್ರಾಹಕರಿಲ್ಲದೇ ಮಾಂಸ ಖರ್ಚಾಗದೆ ಉಳಿದಿದ್ದು ಕಂಡುಬಂತು. ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಡಂಗ ಜನತೆ ಸ್ಪಂದನ
ಕಡಂಗ : ಕೋವಿಡ್ 19 ನಿಂದ ಸುರಕ್ಷತೆಗಾಗಿ ಸರ್ಕಾರದ ಆದೇಶದಂತೆ ಸಂಡೆ ಲಾಕ್‍ಡೌನ್‍ಗೆ ಸಂಪೂರ್ಣ ಬಂದ್ ಮಾಡಿ ಸಹಕರಿಸಿದ ಎಲ್ಲಾ ವರ್ತಕರು ಕಡಂಗದಲ್ಲಿ ಅಗತ್ಯ ಸೇವೆಗಳಾದ ಔಷಧಿ, ಹಾಲು, ದಿನಪತ್ರಿಕೆ ಅಂಗಡಿಗಳನ್ನು ಮಾತ್ರ ತೆರೆದಿದ್ದವು. ಹಾಲು, ಪೇಪರ್, ಮೆಡಿಕಲ್ ಇನ್ನಿತರ ಅವಶ್ಯಕತೆಗಳಿಗೆ ಮಾತ್ರ ಬೆಳಿಗ್ಗೆ ಜನ ಮನೆಯಿಂದ ಹೊರ ಬಂದರು. ನಂತರ ಜನರಿಲ್ಲದೇ ಪಟ್ಟಣ ಬಿಕೋ ಎನ್ನುತ್ತಿತ್ತು. ಬಾರ್‍ಗಳು ಮತ್ತು ಎಲ್ಲಾ ದಿನಸಿ ಅಂಗಡಿಗಳು ಮುಚ್ಚಲಾಯಿತು. ಕೆಎಸ್‍ಆರ್‍ಟಿಸಿ ಬಸ್‍ಗಳ ಓಡಾಟ ಇರಲಿಲ್ಲ. ಅಪರೂಪಕ್ಕೊಂದು ವಾಹನ ಓಡಾಟ ಬಿಟ್ಟರೆ ಜನ ಮನೆಯಿಂದ ಹೊರಬರಲೇ ಇಲ್ಲ.
ಟಿ.ಶೆಟ್ಟಿಗೇರಿ ಸಂತೆ ರದ್ದು
ಗೋಣಿಕೊಪ್ಪ ವರದಿ: ಸೋಮವಾರ ನಡೆಯುವ ಟಿ.ಶೆಟ್ಟಿಗೇರಿ ಸಂತೆಯನ್ನು ರದ್ದು ಪಡಿಸಿರುವುದಾಗಿ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.
ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ಗ್ರಾಮ ಮಟ್ಟದಲ್ಲಿ ಚರ್ಚಿಸಿ ಟಿ. ಶೆಟ್ಟಿಗೇರಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೋಮವಾರ ನಡೆಯುವ ವಾರದ ಸಂತೆಯನ್ನು ಜುಲೈ 6 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಹುದಿಕೇರಿ ಸಂತೆ ರದ್ದು
ಸೋಮವಾರ ನಡೆಯಬೇಕಿದ್ದ ಹುದಿಕೇರಿ ಸಂತೆಯನ್ನು ರದ್ದು ಪಡಿಸಲಾಗಿದೆ. ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ಗ್ರಾಮ ಮಟ್ಟದಲ್ಲಿ ಚರ್ಚಿಸಿ ಸೋಮವಾರ ನಡೆಯುವ ವಾರದ ಸಂತೆಯನ್ನು ಜುಲೈ 6 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.
ಸುಂಟಿಕೊಪ್ಪ: ಸರಕಾರ ಕರೆ ನೀಡಿದ ಲಾಕ್‍ಡೌನ್‍ಗೆ ಸುಂಟಿಕೊಪ್ಪ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು ಯಾವುದೇ ಅಂಗಡಿ ಮುಗ್ಗಟ್ಟು ತೆರೆಯದೆ ವಾಹನ ಸಂಚಾರವಿಲ್ಲದೆ ಲಾಕ್‍ಡೌನ್ ಯಶಸ್ವಿಯಾಯಿತು.
ಜನರಿಗೆ ಬೇಕಾದ ಅಗತ್ಯ ವಸ್ತುಗಳಾದ ದಿನಸಿ ತರಕಾರಿ ಮೀನು ಮಾಂಸ ಮಾರಾಟ ಅಂಗಡಿಗಳಿಗೆ ಮಾರಾಟಕ್ಕೆ ಸರಕಾರ ಅವಕಾಶ ಕಲ್ಪಿಸಿದರೂ ಸುಂಟಿಕೊಪ್ಪ ಪಿಎಸ್‍ಐ ತಿಮ್ಮಪ್ಪ ಮನವಿ ಮಾಡಿಕೊಂಡ ಮೇರೆಗೆ ವರ್ತಕರು ಅಂಗಡಿ ಬಾಗಿಲು ತೆರೆಯಲಿಲ್ಲ ಪಟ್ಟಣದ ವಾಹನ ಸಂಚಾರ ಹಾಗೂ ಜನರ ಓಡಾಟವಿಲ್ಲದೆ ಪಟ್ಟಣ ಬಿಕೋ ಎನ್ನುತ್ತಿತು. ಪೊಲೀಸರು ಗಸ್ತು ತಿರುಗುತ್ತ ಕರ್ತವ್ಯ ನಿರ್ವಹಿಸುತ್ತಿದ್ದರು.
ಪೆÇನ್ನಂಪೇಟೆ: ಭಾನುವಾರದ ಲಾಕ್ ಡೌನ್ ಗೆ ಪೆÇನ್ನಂಪೇಟೆಯಲ್ಲಿ ಅಭೂತ ಪೂರ್ವ ಬೆಂಬಲ ವ್ಯಕ್ತವಾಯಿತು. ಇತ್ತೀಚೆಗೆ ಕೊಡಗಿನಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಬಾರದೆ ಬಂದ್‍ಗೆ ಬೆಂಬಲ ನೀಡಿದರು. ಬೆಳಿಗ್ಗೆ ಹಾಲು ಹಾಗೂ ಪೇಪರ್ ಮಾರಾಟ ಇದ್ದರೂ ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ಮೆಡಿಕಲ್ ಶಾಪ್ ಹಾಗೂ ಪೆಟ್ರೋಲ್ ಬಂಕ್‍ಗಳೂ ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು. ಅಲ್ಲೊಂದು ಇಲ್ಲೊಂದು ವಾಹನಗಳು ರಸ್ತೆಗಿಳಿದಿದ್ದವು. ಪೆÇನ್ನಂಪೇಟೆಯಲ್ಲಿ ಇಂದು ಮಳೆ ಇದ್ದುದರಿಂದ ಸಾರ್ವಜನಿಕರು ಕೂಡ ರಸ್ತೆಗಿಳಿಯಲಿಲ್ಲ. ಪೆÇನ್ನಂಪೇಟೆ ಠಾಣೆ ಪೆÇಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಮಾಡಿದ್ದರು.
ಆಶಾ ಕಾರ್ಯಕರ್ತೆಯರು ಕೆಲಸ
ಪೆÇನ್ನಂಪೇಟೆ ವ್ಯಾಪ್ತಿಯ ಆಶಾಕಾರ್ಯಕರ್ತೆಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ, ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದು ಹೋಮ್ ಕ್ವಾರಂಟೈನ್‍ನಲ್ಲಿರುವವರ ಮನೆಗಳಿಗೆ ತೆರಳಿ, ಯೋಗ ಕ್ಷೇಮ ವಿಚಾರಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿ, 14 ದಿನ ಮನೆಯಲ್ಲಿಯೇ ಇದ್ದು, ಕೊರೊನಾ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವಂತೆ ಸೂಚಿಸಿದರು. ಬಿಪಿ, ಶುಗರ್ ಮಾತ್ರೆಗಳ ಅವಶ್ಯಕತೆ ಇರುವ ಸಾರ್ವಜನಿಕರಿಗೆ ಮಾತ್ರೆ ವಿತರಿಸಿದರು.
ಕೊಡ್ಲಿಪೇಟೆ : ಸಮೀಪದ ಕೊಡ್ಲಿಪೇಟೆ ಪಟ್ಟಣ ಹಾಗೂ ಹೋಬಳಿಯಾದ್ಯಂತ ಭಾನುವಾರದ ಲಾಕ್‍ಡೌನ್‍ಗೆ ಜನತೆ ಸಂಪೂರ್ಣ ಸಹಕಾರ ನೀಡಿ ಸ್ಪಂದಿಸಿದ್ದಾರೆ. ಭಾನುವಾರ ಸಂತೆಯ ದಿನವಾಗಿದ್ದರೂ ರದ್ದಾಗಿರುವ ಕಾರಣ ಬಸ್ ನಿಲ್ದಾಣ, ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಪಟ್ಟಣದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿದ್ದರು. ಆಸ್ಪತ್ರೆ, ಔಷಧಿ ಅಂಗಡಿ, ವಿಎಸ್‍ಎಸ್‍ಎನ್ ಬ್ಯಾಂಕ್ ಹಾಗೂ ಮಾಂಸದ ಅಂಗಡಿ ಮಾತ್ರ ತೆರೆದಿದ್ದವು. ಜನ ಮನೆಯಿಂದ ಹೊರಬರಲಿಲ್ಲ. ಸರ್ಕಾರಿ ಬಸ್, ಆಟೋ, ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ಅಮ್ಮತ್ತಿ : ಅಮ್ಮತ್ತಿಯಲ್ಲಿ ಭಾನುವಾರ ಲಾಕ್‍ಡೌನ್‍ಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಸಾರ್ವಜನಿಕರು ಹೊರಗಿಳಿಯದಂತೆ ಪೆÇಲೀಸರು ಕೂಡ ಎಚ್ಚರ ವಹಿಸಿದರು.
ಕುಶಾಲನಗರ: ಸಂಡೇ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಕುಶಾಲನಗರ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ ವಾಹನಗಳಿಲ್ಲದೆ ಬಿಕೋ ಎನ್ನುವಂತಾಗಿತ್ತು. ಕೊಡಗು-ಮೈಸೂರು ಗಡಿಭಾಗದ ಕೊಪ್ಪ ಅರಣ್ಯ ತಪಾಸಣಾ ಗೇಟ್ ಅನ್ನು ಪೆÇಲೀಸರು ಬಂದ್ ಮಾಡಿದ್ದು, ತುರ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಬೆಳಗ್ಗೆ ಸ್ವಲ್ಪ ಕಾಲ ಮಾಂಸ, ಮೀನು ಮಾರಾಟ ನಡೆಯಿತು. ಸಮೀಪದ ಕೊಪ್ಪ ಗ್ರಾಮದಲ್ಲಿ ಸಂಪೂರ್ಣ ವಹಿವಾಟು ಬಂದ್ ಆಗಿತ್ತು.