ಗೋಣಿಕೊಪ್ಪ ವರದಿ, ಜು. 5: ಬಿ. ಶೆಟ್ಟಿಗೇರಿ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಗ್ರಾಮದಲ್ಲಿ ಜನಜಾಗೃತಿ ಮೂಡಿಸಲಾಯಿತು.
ಶುಕ್ರವಾರ ಸಂಘದ ಪದಾಧಿಕಾರಿಗಳು, ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಳಗೊಂಡ ನಡೆದ ಸಭೆಯಲ್ಲಿ ವೈರಸ್ ತಡೆಗೆ ಗ್ರಾಮಸ್ಥರು ಒಗ್ಗೂಡಿ ಶ್ರಮಿಸಲು ನಿರ್ಧರಿಸಲಾಯಿತು. ಸಾರ್ವಜನಿಕರು ಹಲವು ಸಲಹೆ ನೀಡಿದರು.
ಇಲ್ಲಿನ ನಾಡುಗುಂಡಿ ಹೊಳೆಗೆ ಬಂದು ಮೋಜು, ಮಸ್ತಿ ಮಾಡುವವರ ಮೇಲೆ ನಿಗಾ ಇಡುವಂತೆ, ಪ್ರವೇಶ ನಿಷೇಧದ ಬಗ್ಗೆ ಫಲಕ ಹಾಕುವಂತೆ ಪಂಚಾಯಿತಿಯನ್ನು ಒತ್ತಾಯಿಸಲಾಯಿತು.
ಮೀನು, ತರಕಾರಿ, ಮಾಂಸ ವ್ಯಾಪಾರಿಗಳು ಕೂಡ ಈ ಭಾಗಕ್ಕೆ ಬರುತಿದ್ದು, ಅಂತವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಭಿವೃದ್ಧಿ ಅಧಿಕಾರಿಗಳನ್ನು ಒತ್ತಾಯಿಸಲಾಯಿತು. ಕೊರೊನಾ ಪೀಡಿತ ಭಾಗದಿಂದ ಬರುವ ತೋಟಕಾರ್ಮಿಕರನ್ನು ನಿಯಂತ್ರಿಸಲು ತೋಟ ಮಾಲೀಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಹೊರಗಿನಿಂದ ಬರುವ ಗ್ರಾಮಸ್ಥರು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸ್ವಯಂ ಕ್ವಾರಂಟೈನ್‍ಗೆ ಒಳಗಾಗುವಂತೆ ಮನವಿ ಮಾಡಿಕೊಳ್ಳಲಾಯಿತು.
ಆಶಾ ಕಾರ್ಯಕರ್ತೆ ಜೈಸಿ ಅವರನ್ನು ಸನ್ಮಾನಿಸಿ, ರೂ. 2 ಸಾವಿರ ಪೆÇ್ರೀತ್ಸಾಹ ಧನ ವಿತರಿಸಲಾಯಿತು. ಬಿ. ಶೆಟ್ಟಿಗೇರಿ ಗ್ರಾ. ಪಂ. ಪಿಡಿಒ ಪುಟ್ಟರಾಜು, ವಿದ್ಯಾರ್ಥಿ ಸಂಘದ ಸಲಹಾ ಸಮಿತಿಯ ಸದಸ್ಯರಾದ ಲಾಲಾ ಭೀಮಯ್ಯ, ಕುಸುಮ ಜೋಯಪ್ಪ, ಎನ್.ಜಿ. ದಾದ, ಮದ್ರೀರ ಗಿರೀಶ್, ಸಂಘದ ಅಧ್ಯಕ್ಷ ನಾಮೇರ ದೀಪಕ್, ಕಾರ್ಯದರ್ಶಿ ಲಿತಿನ್ ಇದ್ದರು.