ಸಿದ್ದಾಪುರ, ಜು. 5: ಕಳೆದ ವರ್ಷ ಪ್ರವಾಹದಿಂದಾಗಿ ಈ ಬಾರಿ ಕೊರೊನಾದಿಂದಾಗಿ ನರ್ಸರಿಯನ್ನು ಅವಲಂಬಿಸಿಕೊಂಡಿರುವ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಕಳೆದ ವರ್ಷ ಸುರಿದ ಮಹಾಮಳೆಯಿಂದಾಗಿ ಕಾವೇರಿ ನದಿಯಲ್ಲಿ ಪ್ರವಾಹ ಏರಿಕೆಯಾಗಿ ನೆಲ್ಯಹುದಿಕೇರಿ ಭಾಗದ ಬೆಟ್ಟದಕಾಡು ಭಾಗದಲ್ಲಿ 50ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿತ್ತು. ಇದೇ ಸಂದರ್ಭದಲ್ಲಿ ಆ ಭಾಗದಲ್ಲಿ ನರ್ಸರಿ ಗಿಡಗಳನ್ನು ಮಾಡಿ ಮಾರಾಟ ಮಾಡುತ್ತಿದ್ದ ಹಲವಾರು ಕೃಷಿಕರ ನರ್ಸರಿಗಳಿಗೆ ಪ್ರವಾಹದ ನೀರು ನುಗ್ಗಿ ಸಾವಿರಾರು ಗಿಡಗಳು ನೀರಿನಲ್ಲಿ ಕೊಚ್ಚಿ ಹೋದವು. ನರ್ಸರಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ ಹಲವಾರು ಕುಟುಂಬಗಳ ಜೀವನ ದುಸ್ತರವಾಗಿತ್ತು. ಕೆಲವು ಕುಟುಂಬಗಳ ಮನೆಗಳು ಕೂಡ ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿತ್ತು. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ನರ್ಸರಿ ಮಾಡಿಕೊಂಡು ಜೀವನ ಮಾಡುವ ಕೆಲವರು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನರ್ಸರಿ ಕೃಷಿಯನ್ನು ಮುಂದುವರಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಲು ಯತ್ನಿಸುತ್ತಿರುವಂತಹ ಈ ವರ್ಷದ ನರ್ಸರಿ ಗಿಡಗಳನ್ನು ಕೃಷಿ ಮಾಡಿ ಮಾರಾಟ ಮಾಡಲು ಸಜ್ಜಾಗುತ್ತಿದ್ದಂತೆ ಬೆಟ್ಟದಕಾಡು ಭಾಗದಲ್ಲಿ ಏಕಾಏಕಿ ವ್ಯಕ್ತಿಯೋರ್ವನಿಗೆ ಕೊರೊನಾ ವೈರಸ್ ಪತ್ತೆಯಾಯಿತು. ಈ ಹಿನ್ನೆಲೆ ವೈರಸ್ ಪತ್ತೆಯಾದ ನೆಲ್ಲಿಹುದಿಕೇರಿ-ಬೆಟ್ಟದಕಾಡು ಭಾಗದಲ್ಲಿ ಜಿಲ್ಲಾಡಳಿತದ ವತಿಯಿಂದ ಸೀಲ್‍ಡೌನ್ ಮಾಡಲಾಗಿತ್ತು. ನಿರ್ಬಂಧಿತ ಪ್ರದೇಶಗಳಿಂದ ಯಾರೂ ಕೂಡ ಹೊರಬರದಂತೆ ಗ್ರಾಮ ಪಂಚಾಯಿತಿಯಿಂದ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ನಿರ್ಬಂಧಿತ ಪ್ರದೇಶದ ಒಳಗೆ ಕೆಲವು ಕೃಷಿಕರು ನರ್ಸರಿಗಳನ್ನು ಮಾಡಿ ಗಿಡಗಳನ್ನು ಮಳೆ ಸುರಿಯುವ ಸಂದರ್ಭದಲ್ಲಿ ಮಾರಾಟಕ್ಕೆ ಸಿದ್ಧಪಡಿಸಿದ್ದರು. ಆದರೆ ಭರ ಸಿಡಿಲಿನಂತೆ ಬೆಂಗಳೂರಿನಿಂದ ಬಂದಂತಹ ವ್ಯಕ್ತಿಯೋರ್ವನಿಗೆ ಕೊರೊನಾ ವೈರಸ್ ಕಂಡು ಬಂದ ಹಿನ್ನೆಲೆ ಆ ಪ್ರದೇಶದಿಂದ ಯಾವುದೇ ವಾಹನಗಳು ಜನರು ತೆರಳದಂತೆ ಇರುವುದರಿಂದ ಇದೀಗ ನರ್ಸರಿ ಗಿಡಗಳನ್ನು ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ. ನರ್ಸರಿ ಮಾಡಿ ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ.