ಮಡಿಕೇರಿ, ಜು. 5: ಅಕ್ರಮವಾಗಿ ಮಂಗ ಬೇಟೆ ಮಾಡಿದ ಪ್ರಕರಣ ವೊಂದು ವೀರಾಜಪೇಟೆ ಅರಣ್ಯ ವಿಭಾಗದ ವೀರಾಜಪೇಟೆ ವಲಯದ ತೋರ-ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಮಾಂಸ, ಕೋವಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಅಲ್ಲಿನ ಜೀವನ್, ಕರುಂಬಯ್ಯ ಹಾಗೂ ಉಮೇಶ್ ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸ ಲಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. ಖಚಿತ ಸುಳಿವಿನ ಮೇರೆ ಸಿಬ್ಬಂದಿಗಳು ಉಮೇಶ್ ವಾಸಿಸುತ್ತಿದ್ದ ಲೈನ್‍ಮನೆಗೆ ದಾಳಿ ನಡೆಸಿದಾಗ ಮೂರು ಕೆಜಿಯಷ್ಟು ಮಾಂಸ ಪತ್ತೆಯಾಗಿದೆ.
ಕಾರ್ಯಾಚರಣೆಯಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ರೋಶನಿ, ಆರ್.ಎಫ್.ಓ. ದಿಲೀಪ್ ಕುಮಾರ್, ಉಸ್ತುವಾರಿಯಲ್ಲಿ ಡಿ.ಆರ್.ಎಫ್.ಓ. ದೇಯಂಡ ಸಂಜಿತ್ ಸೋಮಯ್ಯ, ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ನಾಗರಾಜ್, ಮಧು, ವಿಕಾಸ್, ಲತೇಶ್, ಪ್ರಕಾಶ್, ಪೊನ್ನಪ್ಪ ಪಾಲ್ಗೊಂಡಿದ್ದರು.