ಕೂಡಿಗೆ. ಜು. 5: ರಾಜ್ಯದ ಪ್ರಪ್ರಥಮವಾಗಿರುವ ಕೂಡಿಗೆ ಕ್ರೀಡಾ ಶಾಲೆಯನ್ನು ವಿಶ್ವ ದರ್ಜೆಗೆ ಏರಿಸುವಂತಾಗಬೇಕು ಎಂದು ಕೊಡಗಿನ ಕ್ರೀಡಾ ಅಭಿಮಾನಿಗಳ ಒತ್ತಾಯವಾಗಿದೆ.
1983ರಲ್ಲಿ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಅರ್. ಗುಂಡೂರಾವ್ ಅವರ ಕನಸಿನ ಕೂಸು ಹಾಗೂ ಅಗಿನ ಕ್ರೀಡಾ ಆಯುಕ್ತ ಎ.ಜಿ. ಆನಂದ್ ಅವರ ಪ್ರಯತ್ನದಿಂದ ಕೂಡಿಗೆಯಲ್ಲಿರುವ ಕೃಷಿ ಕ್ಷೇತ್ರದ ಆವರಣದಲ್ಲಿ 24 ಎಕರೆ ಪ್ರದೇಶದಲ್ಲಿ ಕ್ರೀಡಾ ಶಾಲೆ ಪ್ರಾರಂಭಗೊಂಡಿತು.
ಹಿರಿಯ ಕ್ರೀಡಾ ಪಟುಗಳಾದ ಎಂ.ಪಿ. ಗೋವಿಂದ್ ಎ.ಬಿ. ಸುಬ್ಬಯ್ಯ ಅಯ್ಯಪ್ಪ, ಅಶ್ವಿನಿ ನಾಚಪ್ಪ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳನ್ನು ನೀಡಿದ ಕೊಡಗು ಜಿಲ್ಲೆಯಲ್ಲಿ ರಾಜ್ಯದ ಪ್ರಪ್ರಥಮ ಸರ್ಕಾರಿ ಕ್ರೀಡಾ ಪ್ರೌಢಶಾಲೆಯನ್ನು ಅರಂಭಿಸಲಾಗಿತ್ತು.
150ಕ್ಕೂ ಹೆಚ್ಚು ಅಂತರಾಷ್ಟ್ರೀಯ ಕ್ರೀಡಾ ಪಟುಗಳು 25ಕ್ಕೂ ಹೆಚ್ಚು ಒಲಂಪಿಕ್ ಕ್ರೀಡಾಪಟುಗಳು ಹಾಗೂ ವಿವಿಧ ಕ್ರೀಡೆಗಳಲ್ಲಿ ಕೊಡಗಿನ ಕ್ರೀಡಾ ಪಟುಗಳು ಭಾಗವಹಿಸಿದ್ದು, 32 ವರ್ಷಗಳ ಹಿಂದೆ ಪ್ರಾರಂಭಗೊಂಡ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆದ ಜೆ.ಜೆ. ಶೋಭಾ, ಪ್ರಮೀಳಾ, ಅಯ್ಯಪ್ಪ, ರವಿನಾಯಕ್ ಅಲ್ಲದೆ 30 ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಒಲಿಂಪಿಕ್ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ.
ಕೂಡಿಗೆಯ ಕ್ರೀಡಾ ಶಾಲೆಯ 9ಕ್ಕೂ ಹೆಚ್ಚು ಕ್ರೀಡಾ ಪಟುಗಳು ದೇಶದಲ್ಲಿ ನೀಡುವ ಏಕಲವ್ಯ ಪ್ರಶಸ್ತಿಗೆ ಭಾಜನವಾಗಿರುವುದು ಈ ಶಾಲೆಯ ಹಿರಿಮೆಯಾಗಿದೆ.
ಬೆಳ್ಳಿಹಬ್ಬವನ್ನು ಆಚರಿಸಕೊಂಡು ಮೂರು ದಶಕಗಳತ್ತಾ ದಾಪುಗಾಲು ಹಾಕುತ್ತಿರುವ ಕೂಡಿಗೆ ಕ್ರೀಡಾ ಶಾಲೆಯನ್ನು ಉನ್ನತ ದರ್ಜೆಗೆ ಎರಿಸುವುದು ಸರಕಾರದ ಕರ್ತವ್ಯವಾ ಗಿದ್ದು, ಇದು ಜಿಲ್ಲೆಯ ಕ್ರೀಡಾಪಟುಗಳ ಅಶಯವೂ ಕೂಡಾ ಆಗಿದೆ. ಜಿಲ್ಲೆಯ ಕ್ರೀಡಾ ಪಟುಗಳ ಅಶಯದಂತೆ 25 ಕೋಟಿಗೂ ಅಧಿಕ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಕ್ರೀಡಾ ಶಾಲೆಯಲ್ಲಿ ಸಿಂಥೆಟಿಕ್ ಟ್ರಾಕ್, ಹಾಕಿ ಟರ್ಫ್, ಒಳ ಕ್ರೀಡಾಂಗಣ, ಕೃತಕ ಮರಹಾಸು, ಬಾಲಕ ಬಾಲಕಿಯರ ಪ್ರತ್ಯೇಕ ವಸತಿ ನಿಲಯ ಕಟ್ಟಡಗಳು, ಒಳ ಕ್ರೀಡಾಂಗಣ ವ್ಯವಸ್ಥೆಯನ್ನು ಮಾಡಲಾಗಿದೆ.ಕ್ರೀಡಾ ವಿಜ್ಞಾನ ವಿಭಾಗದ ಕಟ್ಟಡಗಳು 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆ, ರಾಜ್ಯ, ದೇಶಕ್ಕೆ ಕೀರ್ತಿ ತಂದ ಕ್ರೀಡಾ ಶಾಲೆಯಾಗಿ ಹೊರಹೊಮ್ಮಿದೆ. ಈ ಹಿಂದೆ ಕ್ರೀಡಾ ಸಚಿವರಾಗಿದ್ದ ಹಾಗೂ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಶಾಸಕ ಎಂ ಪಿ, ಅಪ್ಪಚ್ಚು ರಂಜನ್ ಅವರು ಕೂಡಿಗೆ ಕ್ರೀಡಾ ಶಾಲೆಯನ್ನು ಅಭಿವೃದ್ಧಿ ಗೊಳಿಸುವ ಮತ್ತು ಅಧುನಿಕ ರೂಪ ಕಂಡುಕೊಳ್ಳಲು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ ಯೋಜನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಕ್ರೀಡಾ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕ್ರೀಡಾಶಾಲೆಯ ಇತಿಹಾಸಕ್ಕೆ ಅನುಗುಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯದಲೇ ಪ್ರಥಮವಾಗಿ ವಿಶ್ವ ದರ್ಜೆಯ ಕ್ರೀಡಾ ಸಂಕೀರ್ಣ ವನ್ನು ವಿಸ್ತಾರಗೊಳಿಸಲು ಪೂರಕವಾಗಿ ಅಭಿವೃದ್ಧಿ ಪಡಿಸಿದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ತರಬೇತಿ ಶಿಬಿರಗಳು ಸ್ಪರ್ಧೆಯೊಂದಿಗೆ ಅನುಕೂಲವಾಗುವು ದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಕ್ರೀಡಾ ತಜ್ಞರು. ಈಗಾಗಲೇ ಉತ್ತಮ ದರ್ಜೆಯ ರಾಷ್ಟ್ರೀಯ ಕ್ರೀಡಾಕೂಟಗಳ ಸಂಘಟನೆ ನಡೆಸ ಬಹುದಾದ ಸಾಮಥ್ರ್ಯ ಹೊಂದಿರುವ ಕ್ರೀಡಾಂಗಣದ ಜೊತೆಗೆ ಈ ಸಂಕೀರ್ಣದಲ್ಲಿ ವಿಶ್ವ ದರ್ಜೆಯ ಈಜುಕೊಳ, ಬಾಸ್ಕೆಟ್ ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಟೆನ್ನಿಸ್, ಪುಟ್ಬಾಲ್, ಒಳಕ್ರೀಡಾಂಗಣದಲ್ಲಿ ನಡೆಯುವ ಕ್ರೀಡೆಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಒಂದೇ ಸೂರಿನಲ್ಲಿ ನೀಡಲು ಅನುಕೂಲ ವಾಗಲಿದೆ. -ಕೆ.ಕೆ. ನಾಗರಾಜಶೆಟ್ಟಿ.