ಮಡಿಕೇರಿ, ಜು. 5: ಪ್ರಧಾನಿ ನರೇಂದ್ರ ಮೋದಿ ಒಬ್ಬ ವ್ಯಕ್ತಿಯಲ್ಲ ಶಕ್ತಿ ಎಂದು ಹಾಡಿಹೊಗಳಿದ್ದ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಕಾಂಗ್ರೆಸ್ ಪ್ರಮುಖರಾದ ಕೆ.ಪಿ. ಚಂದ್ರಕಲಾ ಅವರ ಹೇಳಿಕೆಗೆ ಅದೇ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ತಿರುಗೇಟು ನೀಡಿದ್ದು, ನರೇಂದ್ರ ಮೋದಿ ಅವರನ್ನು ಹೊಗಳುತ್ತಿರುವವರು ಕಾಂಗ್ರೆಸ್ಸಿಗರೇ ಅಲ್ಲ ಎಂದು ಕುಟುಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಯಾವದೇ ಕಾರಣಕ್ಕೂ ಕಾಂಗ್ರೆಸ್ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಚಂದ್ರಕಲಾ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅದೇ ಪಕ್ಷದ ವಿ.ಪಿ. ಶಶಿಧರ್ ಅವರು ಪ್ರಧಾನಿ ಅವರ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರೂ, ಚಂದ್ರಕಲಾ ಅವರು ಶಶಿಧರ್ ಅವರ ಪರ ನಿಂತಿರುವ ಬಗ್ಗೆಯೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಹುದ್ದೆಯಲ್ಲಿ ಇರುವವರ ಬಗ್ಗೆ ಅವಾಚ್ಯ ಪದ ಬಳಸಿ ಮಾತನಾಡುವುದು ಒಬ್ಬ ರಾಜಕಾರಣಿಗೆ ಶೋಭೆ ತರುವುದಿಲ್ಲ. ಎಲುಬಿಲ್ಲದ ನಾಲಗೆ ಏನು ಬೇಕಾದರು ಮಾತನಾಡಬಹುದು; ಆದರೆ ಮೋದಿ ಅವರ ಬಗ್ಗೆ ವಿ.ಪಿ.ಶಶಿಧರ್ ಅವರು ಆಡಿರುವ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿರುವುದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲವೆಂದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದರು. ಆದರೆ ಆ ಹೊತ್ತಿನಲ್ಲೇ ಶಶಿಧರ್ ಅವರು ಪ್ರತಿಭಟನೆಯನ್ನು ಆಯೋಜಿಸಿದ್ದರು. ಕಾಂಗ್ರೆಸ್ ಪಕ್ಷದ ಮೇಲಿನ ಅಭಿಮಾನದಿಂದ ಪ್ರತಿಭಟನೆಯಲ್ಲಿ ಜನ ಸೇರಿದ್ದರೆ ಹೊರತು ಶಶಿಧರ್ ಅವರನ್ನು ನೋಡಿ ಅಲ್ಲವೆಂದು ಮಂಜುನಾಥ್ ಕುಮಾರ್ ಹೇಳಿದರು. ಪ್ರತಿಭಟನೆ ಸಂದರ್ಭ ಶಶಿಧರ್ ಅವರು ಅನಿರೀಕ್ಷಿತವಾಗಿ ಕೆಲವು ಪದಗಳನ್ನು ಬಳಸಿದ್ದಾರೆ, ಘಟನೆ ನಡೆದು ಹೋಗಿದೆ. ಇನ್ನು ಮುಂದೆ ಈ ರೀತಿ ಆಗಬಾರದು ಎಂದು ಪಕ್ಷದ ಮೂಲಕ ಸೂಚನೆಯನ್ನು ನೀಡಲಾಗಿದೆ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚು. ಕೊರೊನಾ ಸಂಕಷ್ಟದಿಂದಾಗಿ ಎಲ್ಲರೂ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ, ಶಾಸಕರು ಈ ಬಗ್ಗೆ ಕಾಳಜಿ ತೋರುತ್ತಿಲ್ಲ. ಕಡು ಬಡವರು ಹಾಗೂ ಕಾರ್ಮಿಕ ವರ್ಗ ಹಸಿವಿನಿಂದ ಬಳಲುವ ಸ್ಥಿತಿ ಬಂದೊದಗುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಟಿ.ಈ.ಸುರೇಶ್, ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕ ಸೂರಜ್ ಹೊಸೂರು ಉಪಸ್ಥಿತರಿದ್ದರು.
ಕ್ರಮಕ್ಕೆ ಶಿಫಾರಸ್ಸು : ಟಾಟು
ಆತುರದ ನಿರ್ಧಾರಗಳಿಂದ ಇಡೀ ದೇಶವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಂದು ಶಕ್ತಿ ಎಂದು ಬಣ್ಣಿಸಿರುವ ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಅವರ ವಿರುದ್ಧ ಕ್ರಮಕ್ಕೆ ಕೆಪಿಸಿಸಿಗೆ ಶಿಫಾರಸ್ಸು ಮಾಡಲಾಗುವುದೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್.ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.