ಮಡಿಕೇರಿ, ಜು. 5: ಕೊಳತ್ತೋಡು-ಬೈಗೋಡು ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಪಣಿಎರವರ ಮಾದ (50) ಅವರು ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಾದ ಸೇರಿದಂತೆ ಇನ್ನಿತರ ನಾಲ್ವರು ಕಾರ್ಮಿಕರು ಸಂಜೆ 7.30ರ ಸುಮಾರಿಗೆ ಚೋಕಂಡಳ್ಳಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರಸ್ತೆಯಲ್ಲಿ ದಿಢೀರನೆ ಎದುರಾದ ಕಾಡಾನೆ ಇವರ ಮೇಲೆ ದಾಳಿ ನಡೆಸಿತ್ತು. ಇತರ ಕಾರ್ಮಿಕರು ಓಡಿ ತಪ್ಪಿಸಿಕೊಂಡರೆ ಮಾದ ಅವರ ಮೇಲೆ ದಾಳಿ ನಡೆಸಿದ ಕಾಡಾನೆ ಅವರನ್ನು ಸುಮಾರು 10 ಮೀಟರ್‍ನಷ್ಟು ದೂರ ತೋಟದೊಳಗೆ ಎಳೆದೊಯ್ದಿತ್ತು. ದಾಳಿಯಿಂದ ಕೈ, ಕಾಲು ಹಾಗೂ ಪಕ್ಕೆಲುಬು ಮುರಿದಿದ್ದು, ಮಾದ ಗಂಭೀರವಾಗಿ ಗಾಯಗೊಂಡಿದ್ದರು.

ಆನೆ ದಾಳಿ ನಡೆದ ಸಂದರ್ಭ ಅದು ಘೀಳಿಡುತ್ತಿದ್ದರಿಂದ ಸುತ್ತಲಿನ ಜನತೆಯೂ ಭಯಭೀತರಾಗಿದ್ದರು. ಕೆಲ ಹೊತ್ತಿನ ನಂತರ ಇತರರು ಹುಡುಕಾಟ ನಡೆಸಿದಾಗ ಕಾಫಿ ತೋಟದೊಳಗೆ ಅವರು ನರಳುತ್ತಿದ್ದ ಶಬ್ಧ ಕೇಳಿಬಂದಿದ್ದು, ಅಲ್ಲಿಂದ ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10.30ರ ಸುಮಾರಿಗೆ ಮಾದ ಮೃತಪಟ್ಟಿದ್ದರು.

ಸ್ಥಳಕ್ಕೆ ವೀರಾಜಪೇಟೆ ಡಿ.ಎಫ್.ಓ. ರೋಶನಿ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿದ್ದರು. ಇಂದು ವೀರಾಜಪೇಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಡಿ.ಎಫ್.ಓ. ರೋಶನಿ, ಸಿಬ್ಬಂದಿಗಳು ಹಾಗೂ ಪೊಲೀಸರು ಇಂದು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

ಮೃತ ಮಾದ ಅವರು ಅಲ್ಲಿನ ಮುಕ್ಕಾಟಿರ ಸೋಮಣ್ಣ ಅವರ ಮನೆಯಲ್ಲಿ ಕಾರ್ಮಿಕರಾಗಿದ್ದು, ಪತ್ನಿ, ಮಕ್ಕಳನ್ನು ಅಗಲಿದ್ದಾರೆ. ಮೃತನ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ರೂ. 1 ಲಕ್ಷ ಹಣವನ್ನು ನೀಡಲಾಗುವುದು. ಬಳಿಕ ಶೀಘ್ರದಲ್ಲಿ ನಿಯಾಮಾನುಸಾರ ರೂ. 6.50 ಲಕ್ಷ ಮೊತ್ತ ವಿತರಿಸಲಾಗುವುದು ಎಂದು ಡಿ.ಎಫ್.ಓ. ರೋಶನಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಮಹಜರು ಸಂದರ್ಭ ಸ್ಥಳೀಯ ನಿವಾಸಿಗಳು, ಅರಣ್ಯ ಇಲಾಖಾ ಅಧಿಕಾರಿಗಳಿಗೆ ಕಾಡಾನೆ ಉಪಟಳ ಹೆಚ್ಚಾಗುತ್ತಿರುವ ಬಗ್ಗೆ ಮಾಹಿತಿ ನೀಡಿ ನಿಯಂತ್ರಣಕ್ಕೆ ಮನವಿ ಮಾಡಿದರು. ಈ ವಿಭಾಗದಲ್ಲಿ ಆನೆ ದಾಳಿಯಿಂದ ಇದೇ ಪ್ರಥಮ ಬಾರಿಗೆ ವ್ಯಕ್ತಿಯೋರ್ವರು ಸಾವಿಗೀಡಾಗಿರುವುದರಿಂದ ಆತಂಕ ಸೃಷ್ಟಿಯಾಗಿದೆ.