ಮಡಿಕೇರಿ, ಜು. 5: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಸರಾಸರಿ 18 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 13.59 ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿಗೆ ಸರಾಸರಿ 29.12 ಇಂಚು ಮಳೆ ಬಿದ್ದಿದೆ. ಹಿಂದಿನ ಸಾಲಿನಲ್ಲಿ 14.95 ಇಂಚು ದಾಖಲಾಗಿತ್ತು.
ವೀರಾಜಪೇಟೆ ತಾಲೂಕಿಗೆ ಈ ಸಾಲಿನಲ್ಲಿ 14.52 ಇಂಚು ಹಾಗೂ ಹಿಂದಿನ ವರ್ಷ 14.28 ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ಅವಧಿಗೆ 9.96 ಇಂಚು ಮಳೆಯೊಂದಿಗೆ ಹಿಂದಿನ ಅವಧಿಗೆ 7.22 ಇಂಚು ದಾಖಲಾಗಿತ್ತು.
ಹೋಬಳಿವಾರು ಮಳೆ: ಈ ವರ್ಷಾರಂಭದಿಂದ ಆರಂಭಿಕ ಮಳೆ ವಿವರ ಪರಿಪೂರ್ಣ ಲಭ್ಯವಾಗಿಲ್ಲ. ಬದಲಾಗಿ ಮೇ 25 ರಿಂದ ಜು.4 ರ ತನಕ ಹೋಬಳಿವಾರು ಮಳೆ ವಿವರ ಲಭಿಸಿದೆ.
ಮಡಿಕೇರಿ 18.85 ಇಂಚು, ಭಾಗಮಂಡಲ 30.31 ಇಂಚು, ನಾಪೋಕ್ಲು 28.83 ಇಂಚು, ಸಂಪಾಜೆ 24.44 ಇಂಚು, ಸೋಮವಾರಪೇಟೆ 8.05 ಇಂಚು, ಕೊಡ್ಲಿಪೇಟೆ 7.26 ಇಂಚು, ಕುಶಾಲನಗರ 6.23 ಇಂಚು, ಶನಿವಾರಸಂತೆ 6.49 ಇಂಚು, ಶಾಂತಳ್ಳಿ 15.48 ಇಂಚು ಮಳೆ ದಾಖಲಾಗಿದೆ.
ವೀರಾಜಪೇಟೆ 23.58 ಇಂಚು, ಅಮ್ಮತ್ತಿ 11.17 ಇಂಚು, ಬಾಳೆಲೆ 10.58 ಇಂಚು, ಹುದಿಕೇರಿ 20.42 ಇಂಚು, ಪೊನ್ನಂಪೇಟೆ 13.33 ಇಂಚು, ಶ್ರೀಮಂಗಲ 13.87 ಇಂಚು ಮಳೆಯಾಗಿದೆ.
ಹಾರಂಗಿ: ಹಾರಂಗಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ಬಳಿ ಕಾವೇರಿಯ ಹರಿಯುವಿಕೆಯಲ್ಲಿಯೂ ಹೆಚ್ಚಳ ಕಂಡುಬಂದಿದೆ. ಗರಿಷ್ಠ ಮಟ್ಟ 7 ಮೀಟರ್ ಆಗಿದ್ದು ಇದೀಗ ಕುಶಾಲನಗರ ಸೇತುವೆ ಬಳಿ ನದಿಯಲ್ಲಿ 3.5 ಮೀಟರ್ ಏರಿಕೆ ಕಾಣಬಹುದು.ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಷ್ಟಾಗಿದ್ದು, ಪ್ರಸಕ್ತ 28.43.26 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಅವಧಿಗೆ 28.09.79 ಅಡಿ ನೀರಿತ್ತು. ಅಲ್ಲದೆ ಕಳೆದ ವರ್ಷ ಜಲಾಶಯಕ್ಕೆ 400 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದರೆ, ಈಗ 1619 ಕ್ಯೂಸೆಕ್ಸ್ ಒಳ ಹರಿವಿದೆ. ಅಲ್ಲದೆ ಗರಿಷ್ಠ ಮಟ್ಟಕ್ಕಿಂತ ಕೇವಲ 15.74 ಅಡಿ ಕಡಿಮೆ ಗೋಚರಿಸಿದೆ.