ವೀರಾಜಪೇಟೆ, ಜು. 4: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದರಿಂದ ಮಡಿಕೇರಿಯ ಕೋವಿಡ್ ಹಾಗೂ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಂದ ಭರ್ತಿಯಾದರೆ ಸೋಂಕಿತರಿಗೆ ಸ್ಥಳಾವಕಾಶ ಅಗತ್ಯವಿರುವುದರಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಇಂದು ವೀರಾಜಪೇಟೆಗೆ ತುರ್ತು ಭೇಟಿ ನೀಡಿ ವೀರಾಜಪೇಟೆಯ ಮಗ್ಗುಲದಲ್ಲಿರುವ ಕೊಡಗು ದಂತ ವೈದ್ಯಕೀಯ ಕಾಲೇಜು ಹಾಗೂ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವನ್ನು ಪರಿಶೀಲಿಸಿದರು.

ದಂತ ವೈದ್ಯ ಕಾಲೇಜಿನ ಪ್ರಾಂಶುಪಾಲರು, ಆಡಳಿತದೊಂದಿಗೆ ಸೋಂಕಿತ ವ್ಯಕ್ತಿಗಳ ದಾಖಲಾತಿಗಾಗಿ ಮಾತುಕತೆ ನಡೆಸಿದರು. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೂ ಭೇಟಿ ನೀಡಿದ ಅವರು ಸಾರ್ವಜನಿಕ ಆಸ್ಪತ್ರೆಯನ್ನು ಶುಚಿಯಾಗಿಡುವುದರೊಂದಿಗೆ ಕೊರೊನಾ ಸೋಂಕಿತರಿಗೆ ಸ್ಥಳಾವಕಾಶ ಕಲ್ಪಿಸಲು ಆಸ್ಪತ್ರೆಯ ಆಡಳಿತಕ್ಕೆ ಸೂಚನೆ ನೀಡಿದರು.

ಈ ಸಂದರ್ಭ ಡಿ.ಎಚ್.ಒ. ಮೋಹನ್, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ರೆವಿನ್ಯೂ ಇನ್ಸ್‍ಪೆಕ್ಟರ್ ಪಳಂಗಪ್ಪ ಮತ್ತಿತರರು ಹಾಜರಿದ್ದರು.