ಮಡಿಕೇರಿ, ಜು. 4: ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸುಂಟಿಕೊಪ್ಪ ಮಡಿಕೇರಿಯ ನಡುವೆ ವಿದ್ಯುತ್ ಸಂಪರ್ಕ ಮಾರ್ಗದಲ್ಲಿ, ಬೃಹತ್ ಗಾತ್ರದ ಮರವೊಂದು ಗಾಳಿಗೆ ಮುರಿದು ಬಿದ್ದಿರುವ ಪರಿಣಾಮ, ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಸ್ಥಗಿತಗೊಳ್ಳು ವಂತಾಯಿತು. ಸುಂಟಿಕೊಪ್ಪ ಮಾರ್ಗದ ಅಶೋಕ ಪ್ಲಾಂಟೇಶನ್ ನಡುವೆ ಆರು ತಂತಿಗಳ ಮಾರ್ಗದಲ್ಲಿ ಮರಬಿದ್ದು ಅಡಚಣೆ ಉಂಟಾಯಿತು.ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಪತ್ ನೇತೃತ್ವದಲ್ಲಿ, ಸಮಸ್ಯೆ ಎದುರಾಗಿದ್ದ ಸ್ಥಳಕ್ಕಾಗಿ ತೋಟದ ನಡುವೆ ಹುಡುಕಾಟ ನಡೆಸಿದ ಸಿಬ್ಬಂದಿಗಳು, ಮರಗಳನ್ನು ತೆರವುಗೊಳಿಸಿ ಮರು ಸಂಪರ್ಕ ಕಲ್ಪಿಸುವಲ್ಲಿ ಕಾರ್ಯಾಚರಣೆ ಕೈಗೊಂಡರು.ತೀರಾ ಎತ್ತರದ ಮಾರ್ಗದಲ್ಲಿ ಕಾಫಿ ತೋಟದ ನಡುವೆ ಹಾದು ಹೋಗಿರುವ ತಂತಿಗಳನ್ನು ಮರು ದುರಸ್ತಿಗೊಳಿಸುವಲ್ಲಿ ಬಹಳ ಹೊತ್ತು ಚೆಸ್ಕಾಂ ತಂಡ ಶ್ರಮಿಸುವಂತಾಯಿತು. ಕುಶಾಲನಗರದಿಂದ ಮಡಿಕೇರಿಗೆ ಹಾದು ಬಂದಿರುವ 66 ಕೆ.ವಿ. ವಿದ್ಯುತ್ ತಂತಿಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್ ವಾಹಕವು ಟವರ್‍ನಿಂದ ಟವರಿಗೆ ಹಾದು ಹೋಗಿದ್ದು, ಅತ್ಯಂತ ಎತ್ತರದಲ್ಲಿ ಇರುವ ಕಾರಣ, ಮರದ ಕೊಂಬೆಗಳು ತಂತಿ ನಡುವೆ ಸಿಲುಕಿಕೊಂಡಿವೆ. ಹೀಗಾಗಿ ತೆರವುಗೊಳಿಸುವ ಕಾರ್ಯಕ್ಕೆ ಸಮಸ್ಯೆಯಾಗಿದ್ದು, ಕೆಲಸ ವಿಳಂಬವಾಯಿತು ಎಂದು ಅಧಿಕಾರಿ ಸಂಪತ್ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದರು.

ಹೊಂದಾಣಿಕೆ ಕೊರತೆ - ಸುನಿಲ್

ಮಡಿಕೇರಿಯಲ್ಲಿ ನಿನ್ನೆ ರಾತ್ರಿಯಿಂದ 4ರ ಮಧ್ಯಾಹ್ನ ತನಕ ವಿದ್ಯುತ್ ಸರಬರಾಜು ಇಲ್ಲದ ಬಗ್ಗೆ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆಯಿಂದಲೇ ಸಂಬಂಧಿತ ಅಧಿಕಾರಿಗಳೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದು, ಈ ಸಂದರ್ಭ ಕೆಪಿಟಿಸಿಎಲ್ ಹಾಗೂ ಚೆಸ್ಕಾಂ ನಡುವೆ ಹೊಂದಾಣಿಕೆ ಕೊರತೆ ಇದ್ದುದು ಮನವರಿಕೆಯಾಯಿತು ಎಂದು ಅವರು ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೇಸಿಗೆಯಲ್ಲಿ

ಇಲಾಖಾ ಲೈನ್‍ಗಳಲ್ಲಿ ಮರದ ಕೊಂಬೆಗಳನ್ನು ಸಹ ಕಡಿದು ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಬಗ್ಗೆ ತನಗೆ ಸಂಶಯವಿದ್ದು,

ಈ ಬಗ್ಗೆ ತಾ. 10 ರಂದು ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಭೇಟಿ ಸಂದರ್ಭ ಪ್ರಸ್ತಾಪಿಸುವದಾಗಿ ಹೇಳಿದ್ದಾರೆ.