ಕೂಡಿಗೆ, ಜು. 3: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ (ಹುಲುಗುಂದ) ಗ್ರಾಮದ 11 ಜನರ ಸೌಭಾಗ್ಯ ಜ್ಯೋತಿ ಯೋಜನೆಯ ಸೌಲಭ್ಯ ದೊರೆಕದೆ ಮನೆಗೆ ವಿದ್ಯುತ್‍ನಿಂದ ವಂಚಿತರಾಗಿದ್ದಾರೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ವಿದ್ಯುತ್ ಇಲ್ಲದ ಮನೆಗಳ ಫಲಾನುಭವಿಗಳ ಆಯ್ಕೆ ಮತ್ತು ಸರ್ವೆ ಕಾರ್ಯವನ್ನು ಗ್ರಾಮ ಪಂಚಾಯಿತಿ ಮೂಲಕ ಮಾಡಲಾಗಿತ್ತು. ನಂತರ ದಿನಗಳಲ್ಲಿ ಈ 11 ಫಲಾನುಭವಿಗಳ ಆಯ್ಕೆ ಪಟ್ಟಯನ್ನು ಸಂಬಂಧಿಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಕಳುಹಿಸಲಾಗಿದೆ. ಅವರ ಮೂಲಕ. ಸೌಭಾಗ್ಯ ಜ್ಯೋತಿ ಯೋಜನೆಯ ಗುತ್ತಿಗೆದಾರ ಈ ವಿದ್ಯುತ್ ಅಳವಡಿಕೆಯ ಕಾರ್ಯವನ್ನು ನಿರ್ವಹಿಸಬೇಕಾಗಿತ್ತು. ಆದರೆ ಇದುವರೆಗೂ ಈ ಫಲಾನುಭವಿಗಳು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭೆಯಲ್ಲಿ ವಿದ್ಯುತ್ ಇಲ್ಲದ ಫಲಾನುಭವಿಗಳಾದ ಸರೋಜ, ರಾಜಮ್ಮ, ವೆಳ್ಳಿಯಮ್ಮ, ಪಾವಾ, ಅನಿತ, ಜ್ಯೋತಿ, ಶಕುಂತಲಾ, ಮೂರ್ತಿ ಬಿ., ಆರ್. ಪ್ರಶಾಂತ್, ಬೆಟ್ಟಾಚಾರಿ ಪೆರುಮಾಳ್ ಇವರುಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸೌಭಾಗ್ಯ ಜ್ಯೋತಿ ಯೋಜನೆಯನ್ನು ಒಂದು ವಾರದ ಒಳಗೆ ಸರಿಪಡಿಸದಿದ್ದರೆ ಕುಶಾಲನಗರ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಮುಂದೆ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಬಾಸ್ಕರ್ ನಾಯಕ್ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.