ಮಡಿಕೇರಿ, ಜು. 4: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಆಕಸ್ಮಿಕವಾಗಿ ಅಂತಹ ಪೀಡಿತರು ಸಾವಿಗೀಡಾದರೆ, ಅಂತ್ಯಸಂಸ್ಕಾರಕ್ಕೆ ತೊಂದರೆಯಾಗದಂತೆ ಜಿಲ್ಲಾಡಳಿತ ದಿಂದ ಮೂರು ತಾಲೂಕು ಕೇಂದ್ರಗಳಲ್ಲಿ ತಲಾ ಒಂದೊಂದು ಎಕರೆ ಜಾಗವನ್ನು ಕಾಯ್ದಿರಿಸಲು ತೀರ್ಮಾನದೊಂದಿಗೆ, ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಇಂದು ವಿವಿಧ ಧಾರ್ಮಿಕ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅಭಿಪ್ರಾಯ ಪಡೆದುಕೊಂಡಿದ್ದಾರೆ. ಜಿಲ್ಲೆಯ ಎಲ್ಲಾ ವರ್ಗದ ಜನತೆಗಾಗಿ ಈ ವ್ಯವಸ್ಥೆ ಕೈಗೊಂಡಿದ್ದು, ಆಯಾ ತಾಲೂಕು ತಹಶೀಲ್ದಾರರಿಗೆ ಸೂಕ್ತ ನಿವೇಶನಕ್ಕೆ ಸೂಚನೆ ನೀಡಲಾಗಿದೆ ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದರು.
ತರಬೇತಿ : ಈ ಸಂಬಂಧ ಅನಿರೀಕ್ಷಿತ ಕರೆಗೆ ಓಗೊಡುವಂತೆ ಎಲ್ಲಾ ಸಮುದಾಯಗಳಿಂದ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲು ಸಲಹೆ ನೀಡಿರುವದಾಗಿ ವಿವರಿಸಿದ ಜಿಲ್ಲಾಧಿಕಾರಿಗಳು, ಅಂತಹವರಿಗೆ ಪೊಲೀಸ್ ಇಲಾಖೆಯಿಂದ ಆಯಾ ತಾಲೂಕು ವ್ಯಾಪ್ತಿಯ ಡಿವೈಎಸ್‍ಪಿಗಳಿಂದ ಹೆಸರು ನೋಂದಾಯಿಸಿಕೊಂಡು ತರಬೇತಿ ನೀಡಲು ಸೂಚಿಸಲಾಗಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಈ ತೀರ್ಮಾನ ತೆಗೆದುಕೊಂಡಿದ್ದು, ಅಗತ್ಯ ಬಿದ್ದಾಗ ಸ್ವಯಂಸೇವಕರ ಸಹಕಾರದೊಂದಿಗೆ ಕೊರೊನಾ ಪೀಡಿತರು ಮೃತರಾದರೆ ಸ್ಥಳೀಯ ಆಡಳಿತ ನಿಗಧಿತ ಜಾಗದಲ್ಲಿ ಸಂಸ್ಕಾರ ನೆರವೇರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಧಾರ್ಮಿಕ ಮುಖಂಡರೊಂದಿಗೆ ಸಭೆ
ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಅಂತಹವರ ಶವವನ್ನು ‘ಕಾರ್ಯಾಚರಣಾ ವಿಧಾನ’ದಂತೆ ಅಂತ್ಯಸಂಸ್ಕಾರ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ವಿವಿಧ ಸಮಾಜಗಳ ಮತ್ತು ಧಾರ್ಮಿಕ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೋರಿದರು. ನಗರದ ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಸಮಾಜದ ಹಾಗೂ ಧಾರ್ಮಿಕ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ಆದ್ದರಿಂದ ಆಕಸ್ಮಿಕವಾಗಿ ಸೋಂಕಿ ನಿಂದ ಮರಣ ಹೊಂದಿದಲ್ಲಿ ಎಸ್‍ಒಪಿಯಂತೆ ಅಂತ್ಯಸಂಸ್ಕಾರ ಮಾಡಬೇಕಿದ್ದು, ಮೃತಪಟ್ಟವರ ಕುಟುಂಬದವರು ಹಾಗೂ ಇತರ ಬಂಧುಗಳು ಸಹಕರಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಶವ ಸಂಸ್ಕಾರ ಮಾಡಲು ಜಿಲ್ಲಾಡಳಿತವು 3 ತಾಲೂಕಿನಲ್ಲಿ ತಲಾ 1 ಎಕರೆ ಜಾಗವನ್ನು ಗುರುತಿಸಿದೆ . ಶವ ಸಂಸ್ಕಾರ ಸಂದರ್ಭದಲ್ಲಿ ಕಾರ್ಯಾಚರಣ ವಿಧಾನ ಮಾಡಬೇಕಿರುವುದರಿಂದ ಜಿಲ್ಲೆಯಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ ತರಬೇತಿ ನೀಡಲಾಗುವುದು. ಜೊತೆಗೆ ವಿವಿಧ ಧಾರ್ಮಿಕ ಹಾಗೂ ಸಮಾಜದ ಕಡೆಯಿಂದ ಸ್ವಯಂ ಸೇವಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಲ್ಲಿ ಅಂತಹವರಿಗೂ ಸಹ ತರಬೇತಿ ನೀಡಲಾಗುವುದು. ಈ ಸಂಬಂಧ ಆಯಾ ತಾಲೂಕಿನ ಡಿವೈಎಸ್‍ಪಿಗಳಿಗೆ ತಾ. 6 ರ ಸಂಜೆಯೊಳಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಮ್) ಮಾಡುವುದಿಲ್ಲ. 4 ಮೀಟರ್ ಅಂತರದಲ್ಲಿ ಮೃತದೇಹದ ಮುಖವನ್ನು ನೋಡಬಹುದು. 4 ಮೀಟರ್ ದೂರದಲ್ಲಿಯೇ ವಿವಿಧ ಧಾರ್ಮಿಕ ಸಂಪ್ರದಾಯವನ್ನು ನೆರವೇರಿಸಬಹುದು ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.
ನ್ಯಾಯವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಉಮೇಶ್ ಬಾಬು ಅವರು ಮಾತನಾಡಿ, ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಕಾರ್ಯಾಚರಣಾ ವಿಧಾನ (ಎಸ್‍ಒಪಿ) ಮಾರ್ಗಸೂಚಿಯಂತೆ ಆಂಬುಲೆನ್ಸ್ ಮೂಲಕ ದೇಹವನ್ನು ಜಿಲ್ಲಾಡಳಿತ ಗುರುತಿಸಿರುವ ನಿಗದಿತ ಜಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮೃತ ದೇಹದ ಸುತ್ತ 3 ಸುತ್ತು ಪ್ಯಾಕ್ ಮಾಡಲಾಗುತ್ತದೆ. ಅಂತ್ಯಕ್ರಿಯೆಯನ್ನು 4 ಮಂದಿ ಸಿಬ್ಬಂದಿಗಳು ನೆರವೇರಿಸುತ್ತಾರೆ. ಮೃತದೇಹವನ್ನು ಕುಟುಂಬದ 5 ಮಂದಿ ಮಾತ್ರ ನೋಡಲು ಅವಕಾಶವಿದೆ. ಮೃತ ದೇಹವನ್ನು ಮುಟ್ಟಲು ಅವಕಾಶವಿರುವುದಿಲ್ಲ. ವಿವಿಧ ಧಾರ್ಮಿಕ ಪದ್ಧತಿಯಡಿ ಶವ ಸಂಸ್ಕಾರಕ್ಕೆ ಅವಕಾಶವಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಮಾತನಾಡಿ, ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಮೃತದೇಹವನ್ನು ಸರ್ಕಾರದ ನಿರ್ದೇಶನದಂತೆ ನಿಯಮಬದ್ಧವಾಗಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಇದಕ್ಕೆ ಕುಟುಂಬದವರು, ಧಾರ್ಮಿಕ ಮುಖಂಡರು ಸಹಕರಿಸಬೇಕಿದೆ ಎಂದರು.
ಪ್ರಮುಖರ ಸಲಹೆ
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಅವರು ಮಾತನಾಡಿ, ಜಿಲ್ಲಾಡಳಿತ ಕೋವಿಡ್ ನಿಯಂತ್ರಿಸುವಲ್ಲಿ ಶ್ರಮಿಸಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ವಿವಿಧ ಧಾರ್ಮಿಕ ಪದ್ಧತಿಯಂತೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಬೇಕು ಎಂದು ಕೋರಿದರು. ಸೇವಾ ಭಾರತಿಯ ಮಹೇಶ್ ಕುಮಾರ್ ಮಾತನಾಡಿ, ಶವ ಸಂಸ್ಕಾರ ಮಾಡಲು ಸೇವಾ ಭಾರತಿ ತಂಡ ಸಿದ್ಧವಿದೆ. ಅದಕ್ಕೆ ಅಗತ್ಯ ಸಹಕಾರ ನೀಡಬೇಕಿದೆ ಎಂದರು.
(ಮೊದಲ ಪುಟದಿಂದ) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಈಗಾಗಲೇ ಶವ ಸಂಸ್ಕಾರದಲ್ಲಿ ತೊಡಗಿಸಿಕೊಳ್ಳಲು 30 ಜನರ ತಂಡ ಸಿದ್ಧವಿದೆ. ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಮಡಿಕೇರಿ ಮುಸ್ಲಿಂ ಜಮಾತ್ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಅಲಿ ಮಾತನಾಡಿ, ಮಡಿಕೇರಿ ನಗರದಲ್ಲಿ ಜಮಾತ್‍ಗೆ ಸೇರಿದ 22 ಎಕರೆ ಜಾಗವಿದ್ದು, ಕೋವಿಡ್ ಸೋಂಕಿನಿಂದ ಮುಸ್ಲಿಂ ಸಮಾಜದವರು ಮೃತಪಟ್ಟಲ್ಲಿ ಶವ ಸಂಸ್ಕಾರಕ್ಕೆ 1 ಎಕರೆ ಜಾಗ ನೀಡಲಾಗುವುದು. ಆದ್ದರಿಂದ ಕೋವಿಡ್ ಸೋಂಕಿನಿಂದ ಮುಸ್ಲಿಂ ಸಮಾಜದವರು ಮೃತಪಟ್ಟಲ್ಲಿ ಈ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಜಿಲ್ಲಾಧಿಕಾರಿ ಅವರು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಗೌಡ ಸಮಾಜದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಮೃತಪಟ್ಟವರಿಗೆ ನೀರು ಕುಡಿಸುವ ಪದ್ಧತಿ ಇದ್ದು, 4 ಮೀಟರ್ ದೂರದಲ್ಲಾದರೂ ಬಾಯಿಗೆ ನೀರು ಹಾಕಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ.ಯಾಕೂಬ್ ಮಾತನಾಡಿ, ಶವ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಜಿಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಸಿಎಸ್‍ಐ ಚರ್ಚ್‍ನ ಅಮೃತ್ ರಾಜ್ ಮಾತನಾಡಿ, ಕ್ರಿಶ್ಚಿಯನ್ ಧರ್ಮದಲ್ಲಿ ಮೃತದೇಹವನ್ನು ಪೆಟ್ಟಿಗೆಯಲ್ಲಿಟ್ಟು ಹೂಳುವ ಪದ್ಧ್ದತಿಯಿದ್ದು ಇದಕ್ಕೆ ಅವಕಾಶವಿದೆಯೇ ಎಂದರು. ಇದಕ್ಕೆ ಡಾ.ಉಮೇಶ್ ವಿವಿಧ ಧಾರ್ಮಿಕ ಪದ್ಧತಿಯಲ್ಲಿ ಶವ ಸಂಸ್ಕಾರ ಮಾಡಬಹುದಾಗಿದೆ ಎಂದರು.
ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯು ಮಾತನಾಡಿ, ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಬೇಕು ಎಂದು ಅವರು ಕೋರಿದರು. ಭಜರಂಗದಳದ ವಿನಯ್‍ಕುಮಾರ್ ಮಾತನಾಡಿ, ಸೇವ ಭಾರತಿಯೊಂದಿಗೆ ಸೇರಿ ಶವ ಸಂಸ್ಕಾರದ ಸಂಬಂಧ ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯ ಕೊನೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಅಂತ್ಯ ಸಂಸ್ಕಾರ ಸಂಬಂಧಿಸಿದಂತೆ ವೀಡಿಯೋವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ. ಬೇರೆಯವರು ವೀಡಿಯೋ ಮಾಡುವಂತಿಲ್ಲ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧಿಕ್ಷಕ ಡಾ.ಎ.ಜೆ. ಲೋಕೇಶ್, ವಿವಿಧ ಸಮಾಜ ಹಾಗೂ ಧಾರ್ಮಿಕ ಮುಖಂಡರು ಇದ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಜುಲೈ 10 ರಂದು ಬೆಳಗ್ಗೆ 10.30 ಗಂಟೆಗೆ ಸೋಮವಾರಪೇಟೆ ತಾಲೂಕಿನ ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ಅಂಕನಹಳ್ಳಿಯ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಇವುಗಳ ನೂತನ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಕೊರೊನಾ (ಕೋವಿಡ್-19) ನಿರ್ವಹಣೆ ಬಗ್ಗೆ ಜಿಲ್ಲೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳೂ ಸೇರಿದಂತೆ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಗರದ ಜಿ.ಪಂ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಎಸ್.ಬಿ.ನರೇಂದ್ರ ಅವರು ತಿಳಿಸಿದ್ದಾರೆ.