ಸುಂಟಿಕೊಪ್ಪ, ಜು. 3: ಕೊಡಗಿನ ಕೆಲವೆಡೆ ಕೊರೊನಾ ಮಹಾಮಾರಿ ಹರಡುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಟೋ ಚಾಲಕರು ಎಲ್ಲೆಂದರಲ್ಲಿ ನಿಲ್ಲಿಸಿ ತೆರಳುವುದರಿಂದ ಮಾರುಕಟ್ಟೆ ರಸ್ತೆಯಲ್ಲಿ ಸಾರ್ವಜನಿ ಕರಿಗೆ ಇತರ ವಾಹನ ಚಾಲಕರಿಗೆ ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ ಎಂದು ಗ್ರಾ.ಪಂ.ಗೆ ಕೆಲವರು ದೂರು ನೀಡಿದ್ದಾರೆ.
ಈ ಹಿನ್ನೆಲೆ ಇದನ್ನು ಪರಿಗಣಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ ಮತ್ತು ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಸ್ಥಳಕ್ಕೆ ತೆರಳಿ ಆಟೋ ಚಾಲಕರ ಅಧ್ಯಕ್ಷ, ಸದಸ್ಯರೊಂದಿಗೆ ಮಾತನಾಡಿ, ಈ ಹಿಂದೆ ಈ ಜಾಗದಲ್ಲಿ ಕೇವಲ ಬೆರಳೆಣಿಕೆಯ ಆಟೋಗಳು ಮಾತ್ರ ನಿಲುಗಡೆಯಾಗುತ್ತಿತ್ತು. ಇದೀಗ ಆಟೋಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗಿ ಈ ರಸ್ತೆಬದಿಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಇತರ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಸಮೀಪದಲ್ಲ್ಲಿರುವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ, ದೇವಸ್ಥಾನಗಳಿಗೆ ತೆರಳುವವರಿಗೆ ಅಡೆತಡೆಯಾಗುತ್ತಿದೆ.
ಕೆಲವರು ಇದನ್ನೇ ಆಟೋ ನಿಲ್ದಾಣವೆಂದು ಪರಿಗಣಿಸಿ ಬೆಳಿಗ್ಗೆಯಿಂದ ವಾಹನಗಳನ್ನು ನಿಲ್ಲಿಸಿ ಸಂಜೆಯ ನಂತರ ತೆರವು ಗೊಳಿಸುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು. ಉಲುಗುಲಿ ರಸ್ತೆಯ ಮುಖ್ಯ ದ್ವಾರದಿಂದ ವಿ.ಎಂ. ಟ್ರೇಡರ್ಸ್ ಅಂಗಡಿಯವರೆಗೆ ನಿಲುಗಡೆಗೆ ಅವಕಾಶ ಮಾಡಲಾಗಿದೆ. ಹೆಚ್ಚಿನ ಆಟೋಗಳನ್ನು ಬಂಡಿಮಾಳ ಮೈದಾನದಲ್ಲಿ ನಿಲ್ಲಿಸಿ ನಂತರ ನಿಲುಗಡೆ ಜಾಗದಲ್ಲಿ ಆಟೋಗಳು ತೆರಳಿದ ನಂತರ ಇಲ್ಲಿ ನಿಲ್ಲಸುವ ಮೂಲಕ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಲುಗಡೆ ಗೊಳಿಸಬೇಕು ಎಂದು ಠಾಣಾಧಿಕಾರಿ ಹಾಗೂ ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ವೇಣುಗೋಪಾಲ್ ಆಟೋಚಾಲಕರ ಅಧ್ಯಕ್ಷ ಬಿ.ಆರ್. ಸಂತೋಷ್ (ದಿನು) ಮತ್ತು ಸದಸ್ಯರಿಗೆ ಸೂಚಿಸಿದರು.