ಮಡಿಕೇರಿ, ಜು. 4: ಕಳೆದ ಎರಡು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪ ನಡುವೆ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳ ತಗ್ಗು ಪ್ರದೇಶದಲ್ಲಿ ಪ್ರವಾಹದೊಂದಿಗೆ ಸಾರ್ವಜನಿಕರಿಗೆ ತೊಂದರೆ ಎದುರಾಗಿದ್ದ ಸ್ಥಳಗಳ ಸಹಿತ ಹಾರಂಗಿ ಜಲಾಶಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಭೇಟಿ ನೀಡಿದ್ದರು.
ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಅವರು, ಜಲಾಶಯದ ನೀರಿನ ಮಟ್ಟ, ದ್ವಾರಗಳ ಮೂಲಕ ನೀರು ಹೊರ ಬಿಡುವ ರೀತಿ ಸೇರಿದಂತೆ, ಅಲ್ಲಿನ ತಾಂತ್ರಿಕ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡರು. ಅಲ್ಲದೆ ಜಲಾಶಯದ ನೀರಿನ ಮಟ್ಟ ಹೆಚ್ಚಾದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಚರ್ಚಿಸಿದರು.
ಜಿಲ್ಲೆಯಲ್ಲಿ ಕಳೆದ ಮುಂಗಾರಿನಲ್ಲಿ ಮಳೆಯಿಂದಾಗಿ ಕಾವೇರಿ ಹಾಗೂ ಹಾರಂಗಿ ನದಿಗಳಲ್ಲಿ ಉಂಟಾದ ಪ್ರವಾಹದಿಂದ ಮುಳುಗಡೆಯಾದ ಕುಶಾಲನಗರ ವ್ಯಾಪ್ತಿಯ ಹಾರಂಗಿ, ಕೊಪ್ಪ ಸೇತುವೆ, ತಾವರೆಕೆರೆ ಮತ್ತು ಕುವೆಂಪು ಬಡಾವಣೆಗಳಿಗೆ ಇಂದು ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಯಿತು.
ಬಳಿಕ ಹಾರಂಗಿ ಜಲಾಶಯದ ಕೆಳಹಂತದಲ್ಲಿ ವೀಕ್ಷಿಸಿದ ಅವರು, ಕಾವೇರಿ ಮತ್ತು ಹಾರಂಗಿ ನದಿಗಳ ಸಂಗಮ ಪ್ರದೇಶ, ಕುಶಾಲನಗರದ ವಿವಿಧ ಬಡಾವಣೆಗಳಿಗೆ ತೆರಳಿ ಈ ಹಿಂದೆ ಸಂಭವಿಸಿದ ಜಲ ಪ್ರವಾಹ ಸಂಬಂಧ ಅಭಿಪ್ರಾಯ ಪಡೆದುಕೊಂಡರು. ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಅಧೀಕ್ಷಕ ಶೈಲೇಂದ್ರಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರುಗಳಾದ ಐ.ಪಿ. ಮೇದಪ್ಪ, ಮಹೇಶ್, ಠಾಣಾಧಿಕಾರಿ ನಂದೀಶ್ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.
ಅಲ್ಲದೆ ಕಳೆದೆರಡು ದಿನಗಳಿಂದ ಭಾಗಮಂಡಲ ಸುತ್ತಮುತ್ತ ಹಾಗೂ ಮಕ್ಕಂದೂರು ವ್ಯಾಪ್ತಿಯ ಉದಯಗಿರಿ ಮತ್ತಿತರೆಡೆಗಳಿಗೂ ನೂತನ ಎಸ್ಪಿ ಪೊಲೀಸ್ ತಂಡದೊಂದಿಗೆ ಪರಿವೀಕ್ಷಣೆ ನಡೆಸಿದರು. ಮಳೆ ಜೋರಾದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೆಳಹಂತದ ಅಧಿಕಾರಿಗಳೊಂದಿಗೆ ಅವರು ಚರ್ಚಿಸಿದರು.