4 ಭಾನುವಾರಗಳಂದು ದೇವಾಲಯ ಬಂದ್

ಬೆಂಗಳೂರು, ಜು. 4: ರಾಜ್ಯದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ತಾ. 5 ರಿಂದ (ಇಂದಿನಿಂದ) 4 ಭಾನುವಾರಗಳು ಯಾವುದೇ ಪೂಜೆ ಇರುವುದಿಲ್ಲ ದೇವಾಲಯ ಬಂದ್ ಆಗಿರುತ್ತದೆ ಎಂದು ಮುಜರಾಯಿ ಇಲಾಖೆ ಪ್ರಕಟಣೆ ತಿಳಿಸಿದೆ.

ಕಟ್ಟುನಿಟ್ಟಾಗಿ ಸೀಲ್‍ಡೌನ್

ಬೆಂಗಳೂರು, ಜು. 4: ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್‍ಡೌನ್ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದು, ಸೋಂಕಿತ ಪ್ರದೇಶಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲೇಹ್ ಆಸ್ಪತ್ರೆ ಬಗ್ಗೆ ಟೀಕೆ ದುರದೃಷ್ಟಕರ

ನವದೆಹಲಿ, ಜು. 4: ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಹಿಂದೆ ಭೇಟಿ ನೀಡಿದ್ದ ಲೇಹ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಕುರಿತ ಟೀಕೆಗಳು ದುರದೃಷ್ಟಕರ ಎಂದು ಭಾರತೀಯ ಸೇನೆ ಪ್ರತಿಕ್ರಿಯಿಸಿದೆ. ಸಶಸ್ತ್ರ ಪಡೆಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಛಾಯಾಚಿತ್ರಗಳಲ್ಲಿ ತೋರಿಸಿರುವ ಸಭಾಂಗಣವನ್ನು ಕೋವಿಡ್ ವಾರ್ಡ್ ಆಗಿ ಪರಿವರ್ತಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರು ಲೇಹ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸೌಲಭ್ಯಗಳ ಬಗ್ಗೆ ಕೆಲ ವಲಯಗಳಲ್ಲಿ ದುರುದ್ದೇಶಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ನನ್ನ ಮಗನನ್ನು ಎನ್‍ಕೌಂಟರ್ ಮಾಡಿ

ಲಖನೌ, ಜು. 4: ನನ್ನ ಮಗನನ್ನು ಎನ್‍ಕೌಂಟರ್ ಮಾಡಿ ಕೊಂದು ಹಾಕಿ ಎಂದು ಪಾತಕಿ ವಿಕಾಸ್ ದುಬೆ ತಾಯಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಭೂಗತ ಪಾತಕಿ ವಿಕಾಸ್ ದುಬೆ ಎಂಬವನನ್ನು ಬಂಧಿಸಲು ಮುಂದಾದ ಎಂಟು ಮಂದಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಎಂಟು ಮಂದಿ ಪೊಲೀಸರ ಹತ್ಯೆ ನಡೆಸಿದ ಘಟನೆ ಹಿನ್ನಲೆ ಪ್ರತಿಕ್ರಿಯಿಸಿರುವ ಆತನ ತಾಯಿ ಸರಳಾ ದೇವಿ, ಮಗನನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಉಗ್ರನನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ, ಜು. 4: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಕುಲ್ಗಾಮ್‍ನಲ್ಲಿ ಶನಿವಾರ ಭದ್ರತಾ ಪಡೆಗಳು ಆರಂಭಿಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಅಪರಿಚಿತ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.