ಕಣಿವೆ, ಜು. 4: ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಅರಣ್ಯದ ಎರಡೂ ಬದಿಗಳಲ್ಲಿ ಕಂಡ ಕಂಡವರು ಕಸ, ತ್ಯಾಜ್ಯ, ಪ್ಲಾಸ್ಟಿಕ್ ಮೊದಲಾದ ಮಲಿನ ವಸ್ತುಗಳನ್ನು ಬಿಸಾಡಲು ರಸ್ತೆ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಗುಡ್ಡೆಹೊಸೂರು ಪಂಚಾಯಿತಿ ರಹದಾರಿ ಕೊಟ್ಟಿದೆಯಾ ಎಂಬ ಪ್ರಶ್ನೆ ಈ ಹೆದ್ದಾರಿಯಲ್ಲಿ ಸಾಗುವವರಿಗೆ ಮೂಡುತ್ತದೆ.
ಹೌದು ಅಷ್ಟರ ಮಟ್ಟಿಗೆ ರಾಶಿ ರಾಶಿ ಕಸವನ್ನು ಹಾಗೂ ಮಾಂಸದ ಮಳಿಗೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಚೀಲಗಳಲ್ಲಿ ಕಟ್ಟಿ ತಂದು ಎಸೆದಿರುವ ಚಿತ್ರಣ ಆನೆಕಾಡು ಅರಣ್ಯದುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲಿ ಕಾಣ ಸಿಗುತ್ತಿದೆ. ಅಲ್ಲದೇ ಮನೆಗಳಲ್ಲಿನ ಅನುಪಯುಕ್ತ ಸಾಮಗ್ರಿಗಳನ್ನು ಕೂಡ ತಂದು ಇಲ್ಲಿ ಹಾಕಲಾಗಿದೆ. ಕಾಡು ಪ್ರಾಣಿಗಳ ಆವಾಸ ತಾಣವಾಗಿರುವ ಅರಣ್ಯದ ವ್ಯಾಪ್ತಿಯ ರಸ್ತೆಯಂಚಿನಲ್ಲಿ ಕಸ ತ್ಯಾಜ್ಯ ಹಾಕಬಾರದು. ಯಾರಾದರು ಹಾಕಿದರೆ ದಂಡ ವಿಧಿಸಲಾಗುವುದು ಎಂಬದು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿರುವ ಎಚ್ಚರಿಕೆಯ ಫಲಕಕ್ಕೆ ಯಾರೂ ಕೂಡ ಕ್ಯಾರೇ ಎನ್ನುತ್ತಿಲ್ಲ.
ಪಂಚಾಯಿತಿಯವರು ಕಾಟಾಚಾರಕ್ಕೆ ನಾಮಫಲಕ ಅಳವಡಿಸಿದ್ದು ಬಿಟ್ಟರೆ ಅಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ವಿ ಅವರಿಗೆ ಎಚ್ಚರಿಕೆ ನೀಡುವ ಅಥವಾ ದಂಡ ವಿಧಿಸುವ ಕೆಲಸವನ್ನೇ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಗಸ್ತು ತಿರುಗುವಾಗ ನಿಗಾವಹಿಸಿ ಕಸ ಎಸೆಯುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ವಾಹನಗಳನ್ನು ಮುಟ್ಟು ಗೋಲು ಹಾಕಿಕೊಂಡು ದಂಡ ವಿಧಿಸಿದರೆ ಮಾತ್ರ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬಹುದು ಎನ್ನುತ್ತಾರೆ ಸ್ಥಳೀಯ ಜಿಲ್ಲಾ ಪಂಚಾಯತಿ ಸದಸ್ಯ ಅಬ್ದುಲ್ ಲತೀಫ್.
ಕಳೆದ ಕೆಲ ವರ್ಷಗಳ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದ ಎಂ.ಎಸ್. ಚಿಣ್ಣಪ್ಪ ಅವರು ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಆನೆಕಾಡು ಅರಣ್ಯದಂಚಿನಲ್ಲಿ ಯಾವುದೇ ವ್ಯಕ್ತಿಗಳು ಕಸ ಎಸೆಯದಂತೆ ಕ್ರಮಕೈಗೊಂಡಿದ್ದರು. ಅಲ್ಲದೇ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ತಮ್ಮ ವಾಹನಗಳಲ್ಲಿ ಬಂದು ತಾವು ತಂದಂತಹ ಆಹಾರ ಸೇವಿಸಿ ಉಳಿಕೆ ಆಹಾರ ಹಾಗೂ ಪ್ಲಾಸ್ಟಿಕ್ಗಳನ್ನು ಇಲ್ಲಿ ಎಸೆದು ಹೋಗುತ್ತಿದ್ದ ಚಟುವಟಿಕೆಗಳಿಗೂ ಕಡಿವಾಣ ಹಾಕಲಾಗಿತ್ತು. ಆದರೆ ಪ್ರಸ್ತುತ ಇಲ್ಲಿ ಯಾರು ಕೇಳುವವರೆ ಇಲ್ಲದಂತಾಗಿದೆ. ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆದ್ದಾರಿ ಬಳಿ ಕಸ ಎಸೆಯದಂತೆ ಕಠಿಣ ಕ್ರಮಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ ಒತ್ತಾಯಿಸಿದ್ದಾರೆ.