ಕೂಡಿಗೆ, ಜು. 4: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಾತೇಹಳ್ಳ ಕೆರೆಯ ಅಭಿವೃದ್ಧಿ, ಅದಕ್ಕೆ ಹೊಂದಿಕೊಂಡಿರುವ ದೊಡ್ಡ ಕಾಲುವೆಯ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಕಾಮಗಾರಿ ಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿದರು.
ಸ್ವಾತೇಹಳ್ಳ ಮೂಲಕ ನೂರಾರು ಎಕರೆ ಪ್ರದೇಶಕ್ಕೆ ರೈತರಿಗೆ ನೀರಿನ ಸೌಲಭ್ಯ ವನ್ನು ಒದಗಿಸಲು ಈ ಯೋಜನೆಯು ನೀರಾವರಿ ಇಲಾಖೆಯ ಮೂಲಕ ನಡೆಯುತ್ತಿದೆ.
ಅಲ್ಲದೆ ಜಿಲ್ಲಾಧಿಕಾರಿಗಳ ವಿಶೇಷ ಅನುದಾನದ ರೂ. 90 ಲಕ್ಷ ವೆಚ್ಚದ ಕಾಮಗಾರಿ ಇದಾಗಿದೆ. ಸ್ವಾತೇಹಳ್ಳದಿಂದ ಮೂರು ಕಿಲೋ ಮೀಟರ್‍ವರೆಗೆ ಕಾಲುವೆಯ ಕಾಂಕ್ರೀಟ್ ಹಾಕುವಿಕೆ ಮತ್ತು ಉಪ ಕಾಲುವೆಗಳ ಕಾಮಗಾರಿ ನಡೆಯುತ್ತಿದೆ.
ಪರಿಶೀಲನೆ ಸಂದರ್ಭ ಹಾರಂಗಿಯ ಕಾವೇರಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಇಂಜಿನಿಯರ್ ನಾಗರಾಜ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.