*ಸಿದ್ದಾಪುರ, ಜು. 4: ಜಿಲ್ಲೆಯಲ್ಲಿ ಮಳೆಯ ವಾತಾವರಣ ತೀವ್ರಗೊಳ್ಳುತ್ತಿರುವಂತೆಯೇ ಕಳೆದ ವರ್ಷದ ಮಹಾಮಳೆಗೆ ಮನೆಗಳನ್ನು ಕಳೆದುಕೊಂಡವರಲ್ಲಿ ಆತಂಕ ಎದುರಾಗಿದೆ. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಳೆಹಾನಿ ಸಂತ್ರಸ್ತರು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಬಾಡಿಗೆ ಮನೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಸಿದ್ದಾಪುರ, ಕರಡಿಗೋಡು, ಗುಹ್ಯ, ಕೂಡುಗದ್ದೆ, ನೆಲ್ಲಿಹುದಿಕೇರಿ ಮುಂತಾದೆಡೆ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ಕಳೆದ ವರ್ಷ ನೆಲೆ ಕಳೆದುಕೊಂಡಿದ್ದವು. ಸರ್ಕಾರದ ಮನೆ ಮತ್ತು ಬಾಡಿಗೆ ಹಣ ಸಿಗುವುದೆಂದು ಕಾದು ಕುಳಿತು ನಿರಾಶೆ ಅನುಭವಿಸಿರುವ ಸಂತ್ರಸ್ತರು ಒಂದು ವರ್ಷದಿಂದ ಅನುಭವಿಸಿದ ಅತಂತ್ರ ಬದುಕಿಗೆ ಮಂಗಳ ಹಾಡಲು ನಿರ್ಧರಿಸಿದ್ದಾರೆ.

ಸರ್ಕಾರದ ವಸತಿ ಯೋಜನೆ ಜಾರಿಯಾಗುವುದಿರಲಿ ನಿವೇಶನವನ್ನೇ ಗುರುತಿಸುವ ಕಾರ್ಯ ಇನ್ನೂ ಕೂಡ ಆರಂಭವಾಗಿಲ್ಲ. ಇದರಿಂದ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತರು ತಮಗೆ ಅನುಕೂಲವಾಗುವ ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆಯಲು ಮುಂದಾಗಿದ್ದಾರೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆ ತೀವ್ರಗೊಳ್ಳುವ ನಿರೀಕ್ಷೆ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಬಾಡಿಗೆ ಮನೆಯನ್ನೇ ಆಶ್ರಯಿಸಬೇಕಾಗಿದೆ. ಇದಕ್ಕಾಗಿ ನೂರಾರು ಕುಟುಂಬಗಳು ಬಾಡಿಗೆ ಮನೆ ಹುಡುಕುವ ಕಾರ್ಯದಲ್ಲಿ ತೊಡಗಿದ್ದು, ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಾಡಿಗೆ ಮನೆಗಳಿಗೆ ಭಾರೀ ಬೇಡಿಕೆ ಬಂದಿದೆ.

ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಮಾಲೀಕರು ಬಾಡಿಗೆಗೆ ನೀಡುವುದಕ್ಕಾಗಿಯೇ ಮನೆಗಳನ್ನು ನಿರ್ಮಿಸಿ ಸಜ್ಜುಗೊಳಿಸಿದ್ದಾರೆ. ಒಂದಷ್ಟು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಬಾಡಿಗೆ ಮನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಬಡವರು ಹಾಗೂ ಕೂಲಿ ಕಾರ್ಮಿಕರು ಲೈನ್ ಮನೆಗಳಲ್ಲಿ ಆಶ್ರಯ ಪಡೆಯಲು ಸಜ್ಜಾಗಿದ್ದಾರೆ.

ಕಳೆದ ಮಳೆಗಾಲದಲ್ಲಿ ತೀವ್ರವಾಗಿ ಹಾನಿಗೊಂಡ ಮನೆಗಳನ್ನು ದುರಸ್ತಿ ಪಡಿಸಲು ಸಾಧ್ಯವಿಲ್ಲದಾಗಿದೆ, ಅಲ್ಲದೆ ಅಪಾಯಕಾರಿ ಪ್ರದೇಶದಲ್ಲಿ ಆಶ್ರಯ ಪಡೆಯಲು ಜಿಲ್ಲಾಡಳಿತ ಅವಕಾಶವನ್ನು ಕೂಡ ನೀಡುತ್ತಿಲ್ಲ. ಇದರಿಂದ ಬೇಸತ್ತಿರುವ ಕುಟುಂಬಗಳು ಮುಂಬರುವ ಮಳೆಯ ಆರ್ಭಟದಿಂದ ತಪ್ಪಿಸಿಕೊಳ್ಳಲು ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆಯವುದು ಅನಿವಾರ್ಯವಾಗಿದೆ.

ಮುಂದಿನ ದಿನಗಳಲ್ಲಾದರೂ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಿ ಎಂದು ನೊಂದವರು ಮನವಿ ಮಾಡಿದ್ದಾರೆ. - ಅಂಚೆಮನೆ ಸುಧಿ