ಗೋಣಿಕೊಪ್ಪ ವರದಿ, ಜೂ. 3 ; ಕೊರೊನಾ ಮುಂಜಾಗ್ರತೆಗಾಗಿ ಬಾಳೆಲೆ, ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾ. 7 ರವರೆಗೂ ಸ್ವಯಂ ಲಾಕ್ಡೌನ್ಗೆ ಗ್ರಾಮಸ್ಥರು ನಿರ್ಧಾರ ಕೈಗೊಂಡರು. ಅಗತ್ಯ ವಸ್ತು ಪಡೆಯಲು ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ಘೋಷಣೆ ಮಾಡಿಕೊಳ್ಳಲಾಯಿತು. ಆದಷ್ಟು ಓಡಾಡುವುದನ್ನು ಸ್ವ ಇಚ್ಚೆಯಿಂದ ನಿರ್ಬಂಧಿಸಲು ನಿರ್ಧರಿಸಲಾಯಿತು.
ಶುಕ್ರವಾರ ಅಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮಸ್ಥರು, ಜನಪ್ರತಿನಿಧಿಗಳು, ವ್ಯಾಪಾರಿಗಳು, ಆಟೋ ಚಾಲಕರು ಸೇರಿಕೊಂಡು, ಸರ್ಕಾರದ ಸೂಚನೆ ಬರುವ ಮುನ್ನವೇ ಸ್ವಯಂ ಲಾಕ್ಡೌನ್ ಮಾಡಲು ನಿರ್ಧರಿಸಿದರು.
ವೀರಾಜಪೇಟೆ ಉಪ ತಹಶೀಲ್ದಾರ್ ಮಂಜುನಾಥ್ ಹಾಗೂ ಬಾಳೆಲೆ ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ಪಿಡಿಒ ಮನಮೋಹನ್ ಅವರುಗಳನ್ನು ಸ್ಥಳಕ್ಕೆ ಕರೆಸಿಕೊಂಡು ಗ್ರಾಮಸ್ಥರ ನಿರ್ಧಾರವನ್ನು ತಿಳಿಸಲಾಯಿತು. ಲಾಕ್ಡೌನ್ಗೆ ಸರ್ಕಾರದ ನಿರ್ದೇಶನವಿಲ್ಲದ ಕಾರಣ, ನಾವು ಸೂಚನೆ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು.
ಇತ್ತೀಚೆಗಷ್ಟೆ ಬಾಳೆಲೆ ವ್ಯಾಪ್ತಿಯಲ್ಲಿ ತೋಟ ಕೆಲಸಕ್ಕೆ ಬಂದಿದ್ದ ವೀರಹೊಸನಹಳ್ಳಿ ಭಾಗದ ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಈ ಭಾಗದಲ್ಲಿ ಮತ್ತಷ್ಟು ಹರಡುವ ಸಾಧ್ಯತೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು. ನಾಗರಹೊಳೆ ಮೂಲಕ ಬಾಳೆಲೆಗೆ ಪ್ರವೇಶ ಪಡೆಯುವ ಕಾರ್ಮಾಡು ಗೇಟ್ ಮುಚ್ಚಲು ಮನವಿ ಮಾಡಿಕೊಂಡರು. ಹೊರಗಿನ ಕಾರ್ಮಿಕರು ಈ ಭಾಗದಿಂದ ಬರುವುದರಿಂದ ಹರಡುವ ಆತಂಕ ಹೆಚ್ಚು ಎಂದು ಅಧಿಕಾರಿಗಳ ಗಮನ ಸೆಳೆಯಲಾಯಿತು.
ಈ ಸಂದರ್ಭ ಗ್ರಾಮದ ಪ್ರಮುಖರಾದ ಕೊಕ್ಕೇಂಗಡ ಮಹೇಶ್ಕುಮಾರ್, ಸುಕೇಶ್, ಸೂರ್ಯ ಅಯ್ಯಪ್ಪ, ಅರುಣ್ಕುಮಾರ್ ಇತರರಿದ್ದರು. -ಸುದ್ದಿಪುತ್ರ.