ಮಡಿಕೇರಿ, ಜು. 1: ಜಿಲ್ಲೆಯಲ್ಲಿ ತಾ. 1 ರಂದು ಒಟ್ಟು 13 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 60 ಆಗಿದ್ದು 3 ಪ್ರಕರಣ ಗುಣಮುಖವಾಗಿರುತ್ತದೆ, 57 ಪ್ರಕರಣಗಳು ಸಕ್ರಿಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹೊಸದಾಗಿ ಒಂದು ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದ್ದು ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು 24 ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸೋಮವಾರಪೇಟೆ ತಾಲೂಕು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ಒಟ್ಟು 5 ಮಂದಿಗೆ ಸೋಂಕು ತಗುಲಿದೆ. ಈ 5 ಸೋಂಕಿತರ ವಯಸ್ಸು 61, 43, 11, 29 ಹಾಗೂ 38 ಆಗಿರುತ್ತದೆ. ಸೋಮವಾರಪೇಟೆ ತಾಲೂಕು ಶನಿವಾರಸಂತೆಯ ಶಿರಂಗಾಲ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ದ್ವಿತೀಯ ಸಂಪರ್ಕಗಳಾದ ಶನಿವಾರಸಂತೆಯ ಶಿರಂಗಾಲ ಗ್ರಾಮದ ಗುಂಡೂರಾವ್ ಬಡಾವಣೆಯ 47 ವರ್ಷದ ನಿವಾಸಿ, ಸೋಮವಾರಪೇಟೆಯ ಬಳಗುಂದ ಗ್ರಾಮದ 47 ವರ್ಷದ ಪುರುಷ ಹಾಗೂ 37 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ತಾಲೂಕು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ವೀರಾಜಪೇಟೆ ತಾಲೂಕು ಹುಂಡಿ ಗ್ರಾಮದ ನಾಲ್ವರಿಗೆ ಸೋಂಕು ತಗುಲಿದೆ. 3 ತಿಂಗಳ ಮಗು ಸೇರಿದಂತೆ 6 ವರ್ಷದ ಮಗು, 56 ವರ್ಷದ ವ್ಯಕ್ತಿ ಹಾಗೂ 87 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ದೃಢವಾಗಿದೆ.

ಈ ಹತ್ತು ಪ್ರಕರಣಗಳು ನಿಯಂತ್ರಿತ ಪ್ರದೇಶಗಳಲ್ಲೇ ವರದಿಯಾಗಿದ್ದರಿಂದ ಈ ಸಂಬಂಧ ಯಾವುದೇ ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿಲ್ಲ.

ವೀರಾಜಪೇಟೆ ತಾಲೂಕು ತಿತಿಮತಿ ಗ್ರಾಮದ 65 ವರ್ಷದ ವ್ಯಕ್ತಿಯೊಬ್ಬರಿಗೆ ಜ್ವರದ ಲಕ್ಷಣವಿದ್ದು, ಅವರಿಗೆ ಸೋಂಕು ದೃಢಪಟ್ಟಿದ್ದು, ಹೊಸದಾಗಿ ತಿತಿಮತಿ ಗ್ರಾಮದಲ್ಲಿ ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.