ಮಡಿಕೇರಿ, ಜು. 1: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಕೋವಿಡ್ ಆಸ್ಪತ್ರೆಯೊಂದಿಗೆ ತಾಲೂಕುವಾರು ಕೊರೊನಾ ನಿಗಾ ಘಟಕಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ‘ಶಕ್ತಿ’ಗೆ ತಿಳಿಸಿದ್ದಾರೆ.ಪ್ರಸ್ತುತ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 250 ಬೆಡ್‍ಗಳ ವ್ಯವಸ್ಥೆ ಇದೆ. ಕೊಡಗಿನಲ್ಲಿ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಎರಡೆರಡು ಸರ್ಕಾರಿ ಹಾಸ್ಟೆಲುಗಳನ್ನು ವಶಕ್ಕೆ ತೆಗೆದುಕೊಂಡು ಅಲ್ಲಿ ಕೋವಿಡ್ ನಿಗಾ ಘಟಕಗಳನ್ನು ಪ್ರಾರಂಭಿಸಲಾಗುತ್ತದೆ. ಈ ಘಟಕಗಳಿಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಪೊಲೀಸರನ್ನು ನೇಮಿಸಲಾಗುವುದು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಕೋವಿಡ್ ಶಂಕಿತ ಪ್ರಕರಣಗಳನ್ನು ಕೋವಿಡ್ ನಿಗಾ ಘಟಕಗಳಲ್ಲಿ ತಪಾಸಣೆ ಮಾಡಲಾಗುವುದು. ತಾ. 2ರಿಂದ (ಇಂದಿನಿಂದಲೇ) ಈ ವ್ಯವಸ್ಥೆಯನ್ನು ಮಡಿಕೇರಿಯಲ್ಲಿ ಜಾರಿಗೊಳಿಸಲಾ ಗುವುದು. ಜಿಲ್ಲಾ ಕೋವಿಡ್ ಆಸ್ಪತ್ರೆಯ ಜವಾಬ್ದಾರಿಯನ್ನು ವೈದ್ಯಕೀಯ ಕಾಲೇಜು ನಿರ್ವಹಿಸಲಿದ್ದು, ಕೋವಿಡ್‍ನಿಗಾ ಘಟಕವು ಆರೋಗ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಪ್ರಸ್ತುತ ಕೋವಿಡ್ ಚಿಕಿತ್ಸೆಗೆ 11 ವೆಂಟಿಲೇಟರ್ ಇದ್ದು, ಒಂದೇ ಸಮಯದಲ್ಲಿ 150 ಮಂದಿಗೆ ಆಮ್ಲಜನಕವನ್ನು ಒದಗಿಸುವ ವ್ಯವಸ್ಥೆ ಕೋವಿಡ್ ಆಸ್ಪತ್ರೆಯಲ್ಲಿದೆ ಎಂದು ಅವರು ತಿಳಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಮಾಹಿತಿ ನೀಡಿ, ಹೊಸದಾಗಿ

(ಮೊದಲ ಪುಟದಿಂದ) ಆರಂಭಿಸಲಾಗುವ ಕೋವಿಡ್ ನಿಗಾ ಘಟಕಗಳಲ್ಲಿ 200 ಬೆಡ್‍ಗಳ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ; ಕೊರೊನಾ ರೋಗ ಲಕ್ಷಣಗಳಿರುವ ಪ್ರಕರಣಗಳನ್ನು ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.