ಸೋಮವಾರಪೇಟೆ, ಜು.1: ತಾಲೂಕಿನ ಮಲ್ಲಳ್ಳಿ ಜಲಪಾತದ ಬಳಿಯಿರುವ ಆಯತನ ರೆಸಾರ್ಟ್‍ನಲ್ಲಿ ಹೊರಭಾಗದವರ ತಂಗುವಿಕೆ ಹೆಚ್ಚಾಗುತ್ತಿದ್ದು, ಕೊರೊನಾ ಹರಡುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಸದ್ಯದ ಮಟ್ಟಿಗೆ ರೆಸಾರ್ಟ್‍ನ್ನು ಬಂದ್ ಮಾಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಹಲವು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆಯತನ ರೆಸಾರ್ಟ್‍ನಲ್ಲಿ ಹೊರಜಿಲ್ಲೆ, ರಾಜ್ಯಗಳಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಬಂದು ತಂಗುತ್ತಿದ್ದಾರೆ. ಹೊರ ರಾಜ್ಯ-ಜಿಲ್ಲೆಗಳಂತೆ ಕೊಡಗಿನಲ್ಲೂ ಕೊರೊನಾ ವೈರಸ್‍ನ ಅಟ್ಟಹಾಸ ಮಿತಿಮೀರುತ್ತಿದ್ದು,ಇಂತಹ ಸಂದರ್ಭದಲ್ಲಿ ರೆಸಾರ್ಟ್ ಯಾವದೇ ಸಾಮಾಜಿಕ ಕಳಕಳಿಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಶಾಂತಳ್ಳಿಯ ಕೆ.ಎಂ. ಲೋಕೇಶ್ ಒತ್ತಾಯಿಸಿದ್ದಾರೆ.

ಈ ರೆಸಾರ್ಟ್‍ಗೆ ಹೊರಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರಬೇಕಾದ ಮಂದಿಯೂ ಆಗಮಿಸುತ್ತಿರುವ ಬಗ್ಗೆ ಸಂಶಯ ಮೂಡಿದೆ. ಜಿಲ್ಲೆಯ ಇತರೆಡೆ ಹೋಂ ಸ್ಟೇ, ರೆಸಾರ್ಟ್‍ಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದರೂ, ಕುಮಾರಳ್ಳಿ ಗ್ರಾಮ ವ್ಯಾಪ್ತಿಯಲ್ಲಿರುವ ಈ ರೆಸಾರ್ಟ್ ಮಾತ್ರ ಯಾವದೇ ಅಳುಕಿಲ್ಲದೇ ಕಾರ್ಯಾಚರಿಸುತ್ತಿದೆ. ಇಲ್ಲಿಂದಲೇ ಸ್ಥಳೀಯರಿಗೆ ಕೊರೊನಾ ಹರಡುವ ಭೀತಿ ಎದುರಾಗಿದ್ದು, ತಕ್ಷಣ ಸಂಬಂಧಿಸಿದ ಇಲಾಖೆ ಇತ್ತ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ ಎಚ್ಚರಿಕೆ: ಕೋವಿಡ್-19 ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ರಸ್ತೆಯಲ್ಲಿ ತಡೆದು ವಾಪಾಸ್ ಕಳುಹಿಸಲಾಗುವದು ಎಂದು ಬೆಟ್ಟದಳ್ಳಿ ಹಾಗೂ ಹಳ್ಳಿಯೂರು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮಲ್ಲಳ್ಳಿ ಜಲಪಾತ ಹಾಗೂ ಸುತ್ತಮುತ್ತಲಿನ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಪ್ರವಾಸಿಗರು ಬರುತ್ತಿದ್ದಾರೆ. ಸೋಮವಾರಪೇಟೆ, ಯಡೂರು, ಶಾಂತಳ್ಳಿ, ಬೆಟ್ಟದಳ್ಳಿ, ಕುಂದಳ್ಳಿ, ಕುಮಾರಳ್ಳಿ ಮಾರ್ಗವಾಗಿ ಪ್ರತಿನಿತ್ಯ ಪ್ರವಾಸಿಗರ ಓಡಾಟವಿರುತ್ತದೆ. ಅದರಲ್ಲೂ ಶನಿವಾರ, ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸುವದರಿಂದ, ಅಂದು ಗ್ರಾಮಸ್ಥರೆಲ್ಲರೂ ಸೇರಿ ಪ್ರವಾಸಿಗರನ್ನು ರಸ್ತೆಯಲ್ಲೇ ತಡೆದು ವಾಪಾಸ್ ಕಳಿಸಲಾಗುವದು ಎಂದು ತಾಲೂಕು ತಹಶೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ಸಲ್ಲಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಜಿಲ್ಲೆಯಲ್ಲಿ ಮೂರು ಪ್ರಕರಣಗಳಿದ್ದವು. ಈಗ 54ಕ್ಕೆ ತಲುಪಿದೆ. ಈಗ ಪಟ್ಟಣ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂದೆ ಗ್ರಾಮೀಣ ಭಾಗಕ್ಕೆ ಹರಡಿದರೆ, ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಬೇಕಾಗಿದೆ. ಕೂಡಲೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ.ಸತೀಶ್, ಕಾರ್ಯದರ್ಶಿ ಸಂಪತ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.