ಗೋಣಿಕೊಪ್ಪಲು, ಜು.1: ರೈತರ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆ ಹಿಂಡುಗಳನ್ನು ಓಡಿಸಲು ಹಾಗೂ ತೊಂದರೆ ನೀಡುವ ಪುಂಡಾನೆಗಳನ್ನು ಸೆರೆ ಹಿಡಿಯುವ ಕುರಿತು ಅರಣ್ಯ ಅಧಿಕಾರಿಗಳ ಹಾಗೂ ರೈತರ ನಡುವೆ ಸೌಹಾರ್ಧ ಸಭೆ ನಡೆಯಿತು.

ವಿ.ಬಾಡಗ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ನಡೆದ ಸಭೆಯಲ್ಲಿ ರೈತರ ಅಹವಾಲುಗಳನ್ನು ಅರಣ್ಯ ಅಧಿಕಾರಿಗಳು ಸ್ವೀಕರಿಸುವ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡಿದರು. ರೈತ ಸಂಘದ ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ರಹ್ಮಗಿರಿ ವನ್ಯ ಜೀವಿ ವಿಭಾಗದ ಆರ್‍ಎಫ್‍ಓ ಕೇಶವ್ ರೈತರಿಗೆ ಮಾಹಿತಿಗಳನ್ನು ಒದಗಿಸಿದರು. ಪ್ರಸ್ತುತ ಕೋವಿಡ್ - 19 ಸುತ್ತೋಲೆಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿ.ಬಾಡಗ ಹಾಗೂ 1ನೇ ರುದ್ರಗುಪ್ಪೆ ಗ್ರಾಮದ ರೈತ ಮುಖಂಡರುಗಳು ಗ್ರಾಮದ ಜ್ವಲಂತ ಸಮಸ್ಯೆಗಳ ಬಗ್ಗೆ ಇಲಾಖಾ ಅಧಿಕಾರಿಗಳ ಗಮನ ಸೆಳೆದರು.

ಈ ಭಾಗದಲ್ಲಿ ಬಾಕಿ ಉಳಿದಿರುವ 3 ಕಿ.ಮೀ.ವಿಸ್ತ್ರೀರ್ಣದ ಕಂದಕ ನಿರ್ಮಾಣ ಪೂರ್ಣಗೊಳಿಸಬೇಕು. ಕಂದಕ ನಿರ್ಮಾಣ ಸಾಧ್ಯವಾಗದಿದ್ದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಬೇಕು. ನಾಡಿನ ಕಾಫಿ ತೋಟದಲ್ಲಿ ನೆಲೆ ನಿಂತಿರುವ ಕಾಡಾನೆಯ ಹಿಂಡುಗಳನ್ನು ಪತ್ತೆಹಚ್ಚಿ ಅರಣ್ಯಕ್ಕೆ ಅಟ್ಟಬೇಕು. ರೈತರ ಭತ್ತದ ಗದ್ದೆಯ ಬದಿಯಲ್ಲಿ ಕಾವಲು ಕಾಯಲು ಅಟ್ಟಣಿಕೆ ನಿರ್ಮಾಣ ಮಾಡಬೇಕು, ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗಲು ಹೆಚ್ಚಿನ ಅರಣ್ಯ ಸಿಬ್ಬಂದಿಗಳನ್ನು ನೇಮಿಸಬೇಕು, ಆನೆಗಳ ಸಂಚಾರವನ್ನು ಕಂಡು ಹಿಡಿಯಲು ಅರಣ್ಯ ಇಲಾಖೆಯಿಂದ ನಿರ್ಮಾಣವಾಗುವ ವಾಚ್ ಟವರ್‍ಗಳಿಗೆ ಸೋಲಾರ್ ದೀಪ ಅಳವಡಿಸಬೇಕು, ಕಾಡಾನೆ ಹಾವಳಿಯಿಂದ ರೈತರ ಕಾಫಿ ತೋಟಗಳಲ್ಲಿ ತೊಂದರೆಗೀಡಾದ ಗಿಡಗಳಿಗೆ ಪರಿಹಾರ ವಿತರಿಸಬೇಕು. ಪರಿಹಾರದ ಅರ್ಜಿಗೆ ಸ್ಥಳದಲ್ಲಿಯೇ ಮಹಾಜರು ನಡೆಸಿ ಪರಿಹಾರದ ಮೊಬಲಗನ್ನು ರೈತರಿಗೆ ತಿಳಿಸಬೇಕು,

ರೈತರ ಗದ್ದೆ ಹಾಗೂ ಕಾಫಿ ತೋಟಗಳಲ್ಲಿ ಅರಣ್ಯ ವನ್ಯ ಜೀವಿಗಳಿಂದ ನಷ್ಟ ಸಂಭವಿಸಿದ ಸಂದರ್ಭ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರದ ಅರ್ಜಿಯನ್ನು ಸ್ವೀಕರಿಸಬೇಕು. ರೈತರಿಂದ ಈ ಬಗ್ಗೆ ಯಾವುದೇ ಹಣವನ್ನು ಪಡೆಯಬಾರದು. ಕಾಡುಹಂದಿ ಉಪಟಳವನ್ನು ತಡೆಯಲು ಇಲಾಖಾಧಿಕಾರಿಗಳೇ ವಿಶೇಷ ಕ್ರಮ ವಹಿಸಬೇಕು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು.

ರೈತ ಮುಖಂಡರುಗಳಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಬ್ರಹ್ಮಗಿರಿ ವನ್ಯ ಜೀವಿ ವಿಭಾಗದ ಆರ್‍ಎಫ್‍ಓ ಕೇಶವ್ ಅವರು ಈ ಭಾಗದಲ್ಲಿ ಕಾಡಾನೆಯ ಹಾವಳಿ ನಿಯಂತ್ರಣಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕಗೊಳಿಸಿ ಇವರಿಗೆ ಸಕಾಲದಲ್ಲಿ ಸ್ಥಳಕ್ಕೆ ತಲುಪಲು ಇಲಾಖಾ ವತಿಯಿಂದ ಜೀಪಿನ ವ್ಯವಸ್ಥೆ ಮಾಡಲಾಗುವುದು. ನಾಂಗಾಲ ಅಯ್ಯಪ್ಪ ದೇವರ ಕಾಡು ಬಳಿ ಶಾಶ್ವತ ಕ್ಯಾಂಪ್ ನಿರ್ಮಿಸಿ ಇಲ್ಲಿಂದಲೇ ಸಿಬ್ಬಂದಿಗಳು ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು.

ಕಾಡಾನೆ ಹಾಗೂ ವನ್ಯ ಜೀವಿಗಳಿಂದ ತೊಂದರೆಗೀಡಾದ ರೈತರ ಫಸಲು ನಾಶ ಪರಿಹಾರಕ್ಕೆ ಆದಷ್ಟು ಬೇಗನೇ ಅನುದಾನ ಮಂಜೂರು ಮಾಡಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುವುದು.ರೈತರಿಂದ ಖಾಲಿ ಅರ್ಜಿಗಳಿಗಳಿಗೆ ಸಹಿ ಪಡೆಯುವು ದನ್ನು ನಿಲ್ಲಿಸಲಾಗುವುದು. ಅರಣ್ಯ ಇಲಾಖೆಯ ಸಿಬ್ಬಂದಿ ಗಳೊಂದಿಗೆ ರೈತರು ಸೌಹಾರ್ಧತೆ ಕಾಪಾಡುವಂತೆ ಮನವಿ ಮಾಡಿದ ಇವರು ಕಾಡಾನೆಗಳು ರೈತರ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಸಂದರ್ಭ ನಿಖರವಾಗಿ ಮಾಹಿತಿ ತಿಳಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಮುಖಂಡರಾದ ಚೆಪ್ಪುಡೀರ ರೋಶನ್ ವಿ.ಬಾಡಗದ ರೈತ ಮುಖಂಡರಾದ ಮಚ್ಚಾರಂಡ ಪ್ರವೀಣ್,ಮಳವಂಡ ಗಿರೀಶ್, ಕರ್ತಮಾಡ ಕಾವೇರಪ್ಪ,ಕಂಜಿತಂಡ ಸುಬ್ರಮಣಿ,ಮಳವಂಡ ರಾಜ ಚಂಗಪ್ಪ,ಕೊಕ್ಕೇರ ಅಯ್ಯಣ್ಣ, ಚೇಮೀರ ಪ್ರಕಾಶ್ ಪೂವಯ್ಯ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳಾದ ಸುನೀಲ್ ಅಹಮ್ಮದ್,ಮಂಜುನಾಥ್, ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.