ಗೋಣಿಕೊಪ್ಪಲು, ಜು.1: ಕೊರೊನಾ ಸೋಂಕಿತ ವ್ಯಕ್ತಿ ಗೋಣಿಕೊಪ್ಪ ನಗರದ ವಿವಿಧ ಭಾಗದಲ್ಲಿ ಸಂಚಾರ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ನಗರವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವ ಮೂಲಕ ಕೊರೊನಾ ವೈರಸ್ ತಡೆಯಲು ಗೋಣಿಕೊಪ್ಪ ನಗರವನ್ನು ಎರಡು ದಿನಗಳ ಕಾಲ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ.ಈ ಸಂಬಂಧ ಗ್ರಾಮ ಪಂಚಾಯ್ತಿಯ ಟಾಸ್ಕ್‍ಫೋರ್ಸ್ ಸಭೆಯು ಗೋಣಿಕೊಪ್ಪ ನಗರದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ನಡೆಯಿತು. ಸಭೆಗೆ ಕೋವಿಡ್ - 19 ನೋಡಲ್ ಅಧಿಕಾರಿ ಯಾಗಿ ಗಿರಿಜನ ಕಲ್ಯಾಣಾಭಿವೃದ್ಧಿ ಅಧಿಕಾರಿಗಳಾದ ಗುರುಶಾಂತಪ್ಪ ಆಗಮಿಸಿ ಇಲ್ಲಿಯ ಪರಿಸ್ಥಿತಿಗಳ ಬಗ್ಗೆ ಪಂಚಾಯ್ತಿ ಸದಸ್ಯರು ಹಾಗೂ ಇತರರಿಂದ ಮಾಹಿತಿ ಸಂಗ್ರಹಿಸಿದರು. ಸೋಂಕಿತ ವ್ಯಕ್ತಿ ಈ ಭಾಗದಲ್ಲಿ ಹಲವು ವ್ಯಕ್ತಿಗಳನ್ನು ಸಂಪರ್ಕ ಮಾಡಿರುವ ಮಾಹಿತಿ ಗಳಿರುವುದರಿಂದ ಪೊಲೀಸರು ಇಂತಹವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಕ್ರಮಕೈಗೊಳ್ಳಬೇಕು ಹಾಗೂ ಇದನ್ನು ಉಲ್ಲಂಘಿಸುವವರನ್ನು ಕಾನೂನು ಕ್ರಮಕೈಗೊಂಡು ಸರ್ಕಾರದ ವತಿಯಿಂದ ಇರುವ ಕ್ವಾರಂಟೈನ್ ಸೆಂಟರ್‍ಗೆ ಕಳುಹಿಸಿ ಕೊಡುವಂತೆ ಸೂಚನೆ ನೀಡಿದರು.
ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡ ಬೇಕಾಗಿರುವುದರಿಂದ ಎರಡು ದಿನದ ಕಾಲಾವಕಾಶ ಬೇಕಾಗಿದೆ. ಈ ನಿಟ್ಟಿನಲ್ಲಿ ನಗರದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವುದು ಉತ್ತಮ ಎಂದು ಪಂಚಾಯಿತಿ ಕೆಲ ಸದಸ್ಯರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಅಂತಿಮವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಸದಸ್ಯರ
(ಮೊದಲ ಪುಟದಿಂದ) ಸಲಹೆ ಯನ್ನು ಕ್ರೋಢೀಕರಿಸಿ ಎರಡು ದಿನಗಳ ಕಾಲ ನಗರವನ್ನು ಬಂದ್ ಮಾಡುವ ನಿರ್ಧಾರ ಪ್ರಕಟಿಸಿದರು. ಹಾಲು, ಪೇಪರ್, ಮೆಡಿಕಲ್, ಪೆಟ್ರೋಲ್ ಬಂಕ್ ಹಾಗೂ ಎಸ್‍ಎಸ್‍ಎಲ್‍ಸಿ. ಪರೀಕ್ಷಾ ಕೇಂದ್ರ ಗಳಿಗೆ ವಿನಾಯಿತಿ ನೀಡಿದ್ದು ನಗರದ ಪ್ರತಿ ವರ್ತಕರು ತಮ್ಮ ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಪಂಚಾಯಿತಿ ಸದಸ್ಯರಾದ ಕೆ.ಪಿ. ಬೋಪಣ್ಣ, ಬಿ.ಎನ್.ಪ್ರಕಾಶ್, ಧ್ಯಾನ್ ಸುಬ್ಬಯ್ಯ, ಮಂಜುಳ, ಮಮಿತ, ಯಾಸ್ಮೀನ್, ಜೆ.ಕೆ.ಸೋಮಣ್ಣ, ರತಿ ಅಚ್ಚಪ್ಪ, ರಾಮಕೃಷ್ಣ, ಮುರುಗ, ಸುರೇಶ್ ರೈ, ಸೇರಿದಂತೆ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಕಂದಾಯ ಇಲಾಖೆಯ ಸಿಬ್ಬಂದಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪಂಚಾಯ್ತಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿದ್ದರು.