ತಾಳಿ ಕಟ್ಟಿದ 2 ದಿನದಲ್ಲಿಯೇ ಕೊರೊನಾಗೆ ವರ ಬಲಿ

ಪಾಟ್ನಾ, ಜು. 1: ತಾಳಿ ಕಟ್ಟಿದ 2 ದಿನದಲ್ಲಿಯೇ ವರ ಕೊರೊನಾ ವೈರಸ್‍ನಿಂದ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಗುರುಗ್ರಾಮದ 30 ವರ್ಷದ ಸಾಫ್ಟ್‍ವೇರ್ ಇಂಜಿನಿಯರ್ ಮದುವೆಯಲ್ಲಿ ಭಾಗವಹಿಸಿದ್ದ 90 ಜನಕ್ಕೆ ಕೊರೊನಾ ದೃಢಪಟ್ಟಿದೆ. ರೋಗ ಲಕ್ಷಣಗಳು ಕಂಡುಬಂದರೂ ಆತನನ್ನು ಕೊರೊನಾ ವೈರಸ್ ಪರೀಕ್ಷೆ ಮಾಡದೇ ಅಂತ್ಯಕ್ರಿಯೆ ನಡೆಸಿರುವುದು ಆತಂಕ ಮೂಡಿಸಿದೆ. ಪಾಟ್ನಾದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿಗಂಜ್ ಗ್ರಾಮದಲ್ಲಿ ವರ ಸಾವನ್ನಪ್ಪಿರುವ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕಿದೆ. ನವಜೋಡಿಯ ಹತ್ತಿರದ ಸಂಬಂಧಿಗಳಿಗೆ ಕೊರೊನಾ ಸೋಂಕು ದೃಢವಾಗಿದೆ. ಜೂನ್ 15 ರಂದು ನಡೆದ ಮದುವೆಯಲ್ಲಿ ಭಾಗವಹಿಸಿದ 15 ಅತಿಥಿಗಳ ಸ್ಯಾಂಪಲ್ ವರದಿ ಪಾಸಿಟಿವ್ ಬಂದಿದೆ. ಜಿಲ್ಲಾಡಳಿತದಿಂದ ಸಂಪರ್ಕ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ. ಜೂನ್ 29 ರಂದು 80ಕ್ಕೂ ಹೆಚ್ಚು ಜನ ಕೊರೊನಾ ಸೋಂಕು ದೃಢವಾಗಿದೆ. ಬಿಹಾರದಲ್ಲಿ ಇದು ಮೊದಲ ಸಮೂಹ ಹರಡುವಿಕೆಯ ಪ್ರಕರಣ ಆಗಿದೆ.

ಯುರೋಪಿಯನ್ ಯೂನಿಯನ್ ನಿರ್ಧಾರದಿಂದ ಪಾಕಿಸ್ತಾನಕ್ಕೆ ಹೊಡೆತ

ನವದೆಹಲಿ, ಜು. 1: ಯುರೋಪಿಯನ್ ಯೂನಿಯನ್ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದ್ದು, ಅಲ್ಲಿನ ಸರ್ಕಾರಿ ವಿಮಾನಯಾನ ಕಂಪೆನಿಯನ್ನು 6 ತಿಂಗಳು ನಿಷೇಧಿಸಿದೆ. ಈ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡಿರುವ ಇಯುನ ವಾಯು ಸುರಕ್ಷತಾ ಸಂಸ್ಥೆ ಪಾಕಿಸ್ತಾನ ಇಂಟರ್ ನ್ಯಾಷÀನಲ್ ಏರ್‍ಲೈನ್ಸ್ ಯುರೋಪ್‍ಗೆ ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ ಇನ್ನು ಮುಂದೆ ಯಾವುದೇ ಪಿಐಎ ವಿಮಾನ ಯುರೋಪ್‍ಗೆ ಹೋಗುವುದಿಲ್ಲ. ಈ ನಿಷೇಧ ಜುಲೈ 1 ರಿಂದ ಜಾರಿಗೆ ಬರಲಿದೆ.

ಚೀನಾ ವಿರುದ್ಧ ವಿಶ್ವಸಂಸ್ಥೆಗೆ 27 ರಾಷ್ಟ್ರಗಳ ದೂರು

ಜಿನೆವಾ, ಜು. 1: ಹಾಂಕಾಂಗ್ ವಿವಾದಾತ್ಮಕ ಕಾನೂನನ್ನು ಚೀನಾ ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ, 27 ರಾಷ್ಟ್ರಗಳು ಚೀನಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿವೆ. ಇದು ಚೀನಾದ ವಿರುದ್ಧ ಜಾಗತಿಕ ಒಕ್ಕೂಟ ರಚನೆಯಾಗುತ್ತಿರುವ ಮುನ್ಸೂಚನೆ ಎಂದು ಹೇಳಬಹುದು. ಹಾಂಕಾಂಗ್ ವಿವಾದಾತ್ಮಕ ಕಾನೂನನ್ನು ಚೀನಾ ಮರುಪರಿಶೀಲನೆಗೆ ಒಳಪಡಿಸ ಬೇಕು ಎಂದು ಆಗ್ರಹಿಸಿ, 27 ರಾಷ್ಟ್ರಗಳು ಚೀನಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿವೆ. ಹಾಂಕಾಂಗ್‍ನಲ್ಲಿ ಜಾರಿಗೆ ತರಲಾಗುತ್ತಿರುವ ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾನೂನು ಚೀನಾದ ಏಕಪಕ್ಷೀಯ ಹಾಗೂ ಆಕ್ರಮಣಕಾರಿ ನಡೆ ಎಂದು ಈ 27 ರಾಷ್ಟ್ರಗಳು ವಿಶ್ವಸಂಸ್ಥೆ ಮುಂದೆ ಅಪಸ್ವರ ಎತ್ತಿವೆ.

9 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

ಬೆಂಗಳೂರು, ಜು. 1: ಕೊರೊನಾ ಸೋಂಕಿತ ವ್ಯಕ್ತಿಯೋರ್ವರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲು ನಿರಾಕರಿಸಿದ ನಗರದ 9 ಆಸ್ಪತ್ರೆಗಳಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 52 ವರ್ಷದ ಭಾವರ್ಲಾಲ್ ಸುಜನಿ ಎಂಬ ರೋಗಿಯೊಬ್ಬರು ಚಿಕಿತ್ಸೆಗಾಗಿ 18 ಆಸ್ಪತ್ರೆಗಳಿಗೆ ಅಲೆದಾಡಿದ್ದರೂ, ಯಾವೊಂದು ಆಸ್ಪತ್ರೆಯಲ್ಲೂ ಚಿಕಿತ್ಸೆ ದೊರಕದೆ ಮೃತಪಟ್ಟಿದ್ದಾರೆ. ಅವರಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿದ್ದರಿಂದ ಪುತ್ರ ವಿಕ್ರಮ್ ಜೈನ್ ಮತ್ತು ಸಂಬಂಧಿ ದಿನೇಶ್, ಅವರನ್ನು ಜೂ. 30ರಂದು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಯಾವುದೇ ಆಸ್ಪತ್ರೆಗಳು ಹಾಸಿಗೆ, ವೆಂಟಿಲೆಟರ್‍ಗಳು ಲಭ್ಯವಿಲ್ಲ ಎಂದು ಕಾರಣ ನೀಡಿ ದಾಖಲು ಮಾಡಿಕೊಂಡಿರಲಿಲ್ಲ. ಇದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ, 2017ರ ಕೆಪಿಎಂಸಿ ಕಾಯ್ದೆಯ ಸೆಕ್ಷನ್ 11 ಮತ್ತು 11ಎ ಅಡಿಯಲ್ಲಿ ಯಾವುದೇ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೋವಿಡ್-19 ಸೋಂಕಿತ ಅಥವಾ ಸೋಂಕಿನ ಲಕ್ಷಣಗಳುಳ್ಳವರಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೋವಿಡ್‍ಗೆ ರೂ. 382 ಕೋಟಿ ಬಿಡುಗಡೆ

ಚಿಕ್ಕಮಗಳೂರು, ಜು. 1: ಕೊರೊನಾ ಸೋಂಕು ನಿರ್ವಹಣೆಗಾಗಿ ಕಂದಾಯ ಇಲಾಖೆ ಹಾಗೂ ವಿಪತ್ತು ನಿರ್ವಹಣೆ ನಿಧಿಯಿಂದ ರೂ. 382 ಕೋಟಿ ಬಿಡುಗಡೆಗೊಳಿಸಿದ್ದು, ಸದ್ಯ 300 ಕೋಟಿಗೂ ಅಧಿಕ ಹಣ ಲಭ್ಯವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಬುಧವಾರ ಹೇಳಿದ್ದಾರೆ. ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರ್ಥಿಕತೆ, ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡಲ್ಲಿ ಹಣದ ಸದುಪಯೋಗಪಡಿಸಿಕೊಳ್ಳಲಾಗುವುದು. ಕೊರೊನಾ ನಡುವೆಯೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ ಲಾಕ್‍ಡೌನ್ ವೇಳೆಗೆ ಜನರು ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲಾಗುವುದು ಎಂದರು. ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಗುಣಮಟ್ಟದೊಂದಿಗೆ ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆಗೊಳಿಸಲು ಸಿದ್ಧ ಎಂದು ಆರ್. ಅಶೋಕ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೆ ಅನುಮತಿ

ಬೆಂಗಳೂರು, ಜು. 1: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮ-ಪ್ರತಿಜ್ಞಾಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುಮತಿ ನೀಡಿದ್ದು, ಪೊಲೀಸರು ಈ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನಡೆಯಲಿರುವ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಕೆಲವು ಕಡೆಗಳಲ್ಲಿ ಪೊಲೀಸರು ತೊಂದರೆ ನೀಡುತ್ತಿದ್ದಾರೆ ಎಂಬ ಕರೆಗಳು ಬಂದಿವೆ. ಮುಖ್ಯಮಂತ್ರಿಗಳೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅನುಮತಿ ಕೊಟ್ಟಿದ್ದಾರೆ. ತಾವು ಈ ಸಂಬಂಧ ಗೃಹ ಮಂತ್ರಿಗಳು, ಪೊಲೀಸ್ ಮಹಾ ನಿರ್ದೇಶಕರ ಜತೆ ಮಾತನಾಡಿದ್ದೇನೆ. ಯಾರು ಧೃತಿಗೆಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ. ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ಅನುಮತಿ ನೀಡಿದ್ದು, ಈ ಕಾರ್ಯಕ್ರಮಕ್ಕೆ ಲಿಖಿತ ಅನುಮತಿ ಬೇಕಿಲ್ಲ. ನೀವಿರುವ ಪ್ರದೇಶಗಳಲ್ಲೇ ಇದ್ದು ಸುದ್ದಿವಾಹಿನಿಗಳಲ್ಲಿ ಬರುವ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಬೇಕು. ತಾವು ಆಮಂತ್ರಣ ನೀಡಿರುವವರನ್ನು ಬಿಟ್ಟು ಬೇರೆ ಯಾರು ಕೂಡ ಇಲ್ಲಿಗೆ ಬರಬಾರದು. ಕಟ್ಟಡ ನಿರ್ವಹಣೆಯನ್ನು ಪೊಲೀಸರು ಹಾಗೂ ಸೇವಾದಳದವರಿಗೆ ವಹಿಸಿದ್ದು, ಅನಗತ್ಯವಾಗಿ ಬಂದು ತೊಂದರೆ ಅನುಭವಿಸುವುದು ಬೇಡ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಗಡಿಯಲ್ಲಿ ಪಾಕಿಸ್ತಾನ ಸೇನೆ ನಿಯೋಜನೆ

ನವದೆಹಲಿ, ಜು. 1: ವಾಸ್ತವಿಕ ಗಡಿ ರೇಖೆ(ಎಲ್‍ಎಸಿ)ಯಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿ ಚೀನಾ ಉಪಟಳ ನೀಡುತ್ತಿದ್ದು, ಇದೀಗ ಪಾಕಿಸ್ತಾನ ಸಹ ಎಲ್‍ಒಸಿಯಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‍ನಲ್ಲಿ ಪಾಕಿಸ್ತಾನ ಹೆಚ್ಚುವರಿಯಾಗಿ 20 ಸಾವಿರ ಸೈನಿಕರನ್ನು ನಿಯೋಜನೆ ಮಾಡಿದೆ. ಇದೇ ವೇಳೆ ಪಾಕಿಸ್ತಾನದ ರೇಡಾರ್‍ಗಳು ಸಂಪೂರ್ಣವಾಗಿ ಆಕ್ಟಿವ್ ಆಗಿ ಕಾರ್ಯನಿರ್ವಹಿಸುತ್ತಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವೆ ಗುಂಡಿನ ದಾಳಿ, ಶೆಲ್ ದಾಳಿಗಳನ್ನು ನಿರಂತರವಾಗಿ ನಡೆಯುತ್ತಿರುತ್ತದೆ. ಇದೀಗ ಹೆಚ್ಚುವರಿಯಾಗಿ ಸೇನೆಯನ್ನು ನಿಯೋಜಿಸಿ ಭಾರತಕ್ಕೆ ಬೆದರಿಕೆಯೊಡ್ಡುತ್ತಿದೆ.

ಕೃತಿಕಾ ಪಾಂಡೆಗೆ ಏಷ್ಯಾ ಪ್ರಾದೇಶಿಕ ಪ್ರಶಸ್ತಿ

ನ್ಯೂಯಾರ್ಕ್, ಜು. 1: ಭಾರತೀಯ ಲೇಖಕಿ, 29 ವರ್ಷದ ಕೃತಿಕಾ ಪಾಂಡೆ ಅವರು 2020ನೇ ಸಾಲಿನ ಕಾಮನ್‍ವೆಲ್ತ್ ಸಣ್ಣಕಥೆ ವಿಭಾಗದಲ್ಲಿ ಏಷ್ಯಾದ ಪ್ರಾದೇಶಿಕ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪಾಂಡೆ ಅವರ ‘ದಿ ಗ್ರೇಟ್ ಇಂಡಿಯನ್ ಟೀ ಮತ್ತು ಹಾವುಗಳು’ ಎಂಬ ಕಥೆಗಾಗಿ ಪ್ರಶಸ್ತಿ ಸಂದಿದೆ ಎಂದು ಮ್ಯಾಸಚೂಸೆಟ್ಸ್ ಅಮ್ಹೆಸ್ರ್ಟ್ ವಿಶ್ವವಿದ್ಯಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. ‘ದಿ ಗ್ರೇಟ್ ಇಂಡಿಯನ್ ಟೀ ಮತ್ತು ಹಾವುಗಳು’ ಕತೆಯು ಪ್ರೀತಿ ಮತ್ತು ದ್ವೇಷದ ಕಲ್ಪನೆಯನ್ನು ನ್ಯಾವಿಗೇಟ್ ಮಾಡಲು ಪ್ರಯತ್ನಿಸುತ್ತಿರುವ ಇಬ್ಬರು ಯುವಜನರ ಕುರಿತಾಗಿದೆ. ಮೂಲತಃ ಜಾರ್ಖಂಡ್‍ನ ರಾಂಚಿ ಮೂಲದ ಯುವ ಲೇಖಕಿ ಕೃತಿಕಾ ಪಾಂಡೆ ಅವರ ಸಾಧನೆಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.