ಕೊಡವ ಸೇರಿದಂತೆ ಕನ್ನಡ ಹಾಗೂ ಇಂಗ್ಲಿಷ್ ಬಾಷೆಯ ಮೇರು ಸಾಹಿತಿಗಳಾದ ದಿವಂಗತ ಐಚೆಟ್ಟಿರ ಮುತ್ತಣ್ಣ ಹಾಗೂ ಬಾಚಮಾಡ ಡಿ. ಗಣಪತಿ ಅವರುಗಳು ಹುಟ್ಟಿ ಈ ವರ್ಷಕ್ಕೆ ನೂರು ವರ್ಷ ತುಂಬುವ ನೆನಪಿಗೆ, ಕೊಡವಾಮೆರ ಕೊಂಡಾಟ ಕೂಟದ ವತಿಯಿಂದ ‘ಐಚೆಟ್ಟಿರ ಮುತ್ತಣ್ಣ ನೂರಾಂಡ್ ನೆಪ್ಪು’ ಕಾರ್ಯಕ್ರಮದ ಆಯೋಜನೆಯ ಮೂಲಕ ಹಿರಿಯ ಅಕ್ಷರ ಯೋಗಿಯರ ನೆನೆಸಿ ಕೊಳ್ಳಲು ಕೊಡವಾಮೆರ ಕೊಂಡಾಟ ಕೂಟ ನಿರ್ಧರಿಸಿದೆ ಎಂದು ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ತಿಳಿಸಿದ್ದಾರೆ.
14 ಏಪ್ರಿಲ್ 1920 ರಂದು ಜನಿಸಿದ ಐಚೆಟ್ಟಿರ ಮುತ್ತಣ್ಣ ಅವರು ಶಿಕ್ಷಣ ತಜ್ಞರಾಗಿ, ಕವಿಯಾಗಿ, ಇತಿಹಾಸಕಾರರಾಗಿ, ಭಾಷಾಂತರಕಾರರಾಗಿ ತ್ರಿಭಾಷಾ ಸಾಹಿತಿ ಎಂಬ ಹೆಸರು ಪಡೆದವರು. ಇವರನ್ನು ಕನ್ನಡ ಸಾಹಿತ್ಯದ ಮೇರುಕವಿ ಎಂದು ಕರೆಯಲಾಗಿದೆ. ವಿಶ್ವ ಕಂಡ ಶ್ರೇಷ್ಠ ವಿಧ್ವಾಂಸರಲ್ಲಿ ಒಬ್ಬರಾಗಿದ್ದ ವಿಶ್ವ ಮಾನವ ಐ.ಮಾ. ಮುತ್ತಣ್ಣ ಅವರು 01-03-2002ರಂದು ಇಹಲೋಕ ತ್ಯಜಿಸಿದ್ದರು.
16 ಜೂನ್ 1920 ರಂದು ಜನಿಸಿದ ಗಣಪತಿಯವರು, ಹತ್ತನೇ ತರಗತಿವರೆಗೂ ವ್ಯಾಸಂಗ ಮಾಡಿ, ನಂತರದಲ್ಲಿ ಸಹಕಾರಿ ತರಬೇತಿಯನ್ನು ಪಡೆದು ಕೆಲವು ಸಮಯ ಸಹಕಾರಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಅಂದಿನ ಕೊಡಗು ವಾರಪತ್ರಿಕೆಯ ಉಪಸಂಪಾದಕ, ಸಂಪಾದಕರಾಗಿ ಸುಮಾರು ಮೂವತೈದು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದ್ದರು.
ಸಾಹಿತ್ಯ ಸ್ಪರ್ಧೆ
ತಮ್ಮ ಜೀವನದುದ್ದಕೂ ಸಾಹಿತ್ಯ ಸಂಸ್ಕøತಿಗಾಗಿಯೇ ದುಡಿದ ಐ.ಮಾ. ಮುತ್ತಣ್ಣ ಹಾಗೂ ಬಾಚಮಾಡ ಗಣಪತಿಯವರ ಜನ್ಮ ಶತಾಬ್ದಿಯ ಈ ವರ್ಷವನ್ನು ಹಲವಾರು ಸಾಹಿತ್ಯಾತ್ಮಕ ಸ್ಪರ್ಧೆಯ ಮೂಲಕ ನೆನೆಸಿಕೊಳ್ಳುವುದು ಕೊಡವಾಮೆರ ಕೊಂಡಾಟ ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ಇದರ ಮೊದಲ ಭಾಗವಾಗಿ ಕೊಡವ ಭಾಷೆಯಲ್ಲಿ ಕವನ ರಚನೆಯ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಜಾತಿ ಧರ್ಮದ ಮಿತಿಯಿಲ್ಲದೆ ಯಾರು ಬೇಕಾದರೂ, ತಮ್ಮ ಆಯ್ಕೆಯ ವಿಷಯದ, ಕೊಡವ ಭಾಷೆಯಲ್ಲಿ, ಇಪ್ಪತೈದು ಸಾಲುಗಳಿಗೆ ಮೀರದಂತೆ ಸ್ವರಚಿತ ಕವನವನ್ನು ಕಳುಹಿಸಬಹುದಾಗಿದೆ. ಒಬ್ಬರಿಗೆ ಒಂದೇ ಕವನವನ್ನು ಕಳುಹಿಸಲು ಅವಕಾಶವಿದ್ದು, ಕನ್ನಡ ಲಿಪಿಯಲ್ಲಿ, ವಾಟ್ಸಾಪ್ನಲ್ಲಿ ಟೈಪ್ಮಾಡಿ ಕಳುಹಿಸಬೇಕು. ವಿಜೇತರಿಗೆ, ಪ್ರಥಮ ಎರಡು ಸಾವಿರ, ದ್ವಿತೀಯ ಒಂದು ಸಾವಿರ, ತೃತೀಯ ಐದುನೂರು ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಬಾಗವಹಿಸುವ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಗುವುದು. ಸ್ಪರ್ಧಿಗಳು ತಮ್ಮ ಕವನವನ್ನು ಕವನ ಸ್ಪರ್ಧೆಯ ಸಂಚಾಲಕಿ ಕುಲ್ಲಚಂಡ ವಿನುತ ಕೇಸರಿಯವರ ವಾಟ್ಸಾಪ್ ಸಂಖ್ಯೆ 8694885676ಗೆ ದಿನಾಂಕ 05-07-2020ನೇ ಭಾನುವಾರ ರಾತ್ರಿ 10 ಗಂಟೆಯೊಳಗೆ ತಲುಪುವಂತೆ ಕಳುಹಿಸಬೇಕು. ಈ ಸ್ಪರ್ಧೆಯ ನಗದು ಸೇರಿದ ಪ್ರಶಸ್ತಿ ಪತ್ರವನ್ನು ಅಂತರರಾಷ್ಟ್ರೀಯ ಅಥ್ಲೇಟ್ ಹಾಗೂ ಮೋಟಿವೇಷನ್ ಗುರು, ಕೊಡವಾಮೆರ ಕೊಂಡಾಟ ಕೂಟದ ಸದಸ್ಯ ತೀತಮಾಡ ಅರ್ಜುನ್ ದೇವಯ್ಯ ಅವರು ಪ್ರಯೋಜಿಸಿದ್ದಾರೆ.
ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ವೀರಾಜಪೇಟೆ ತಾಲೂಕಿನಲ್ಲಿ ಈ ವರ್ಷಾಂತ್ಯಕ್ಕೆ ಹಲವು ಸಾಹಿತ್ಯಾತ್ಮಕ ಕಾರ್ಯಕ್ರಮಗಳೊಂದಿಗೆ, ಸರ್ವ ಸಾಹಿತ್ಯಾಭಿಮಾನಿಗಳ ಸಹಯೋಗದೊಂದಿಗೆ ನಡೆಸಲು ಉದ್ದೇಶಿಸಲಾಗಿದ್ದು, ಆ ದಿನ ಸ್ಮರಣಸಂಚಿಕೆ ಬಿಡುಗಡೆ ಮಾಡಲಾಗುವುದು. ಸಂಚಿಕೆಯಲ್ಲಿ ಎಲ್ಲ ಸ್ಪರ್ಧೆಯ ಬರಹಗಳು ಪ್ರಕಟಗೊಳ್ಳಲಿವೆ.