ಮಡಿಕೇರಿ, ಜು. 1: ವೀರಾಜಪೇಟೆಯ ಐತಿಹಾಸಿಕ ಗೌರಿ ಕೆರೆ ಸರ್ವೆ ಕಾರ್ಯವನ್ನು ವಿನಾಕಾರಣ ಮುಂದೂಡಲಾಗುತ್ತಿದೆ ಎಂದು ಆರೋಪಿಸಿರುವ ಪ.ಪಂ. ಸದಸ್ಯ ಪೃಥ್ವಿನಾಥ್ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸರ್ವೆ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ಪ.ಪಂ. ವ್ಯಾಪ್ತಿಗೊಳಪಟ್ಟ ಗೌರಿ ಕೆರೆಯ ಸಮೀಪ ಸುಮಾರು 17 ಕುಟುಂಬಗಳು ವಾಸವಿದ್ದು, ಗೌರಿ ಕೆರೆಗೆ ಈ ಕುಟುಂಬಗಳ ಆಸ್ತಿ ಸೇರಿಹೋಗಿರುವು ದರಿಂದ ಯಾವುದೇ ಕೃಷಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.
ಇತ್ತೀಚೆಗೆ ನಾಗರಿಕರ ಒತ್ತಾಯದ ಮೇರೆಗೆ ಸರ್ವೆ ಅಧಿಕಾರಿಗಳು ಸರ್ವೆ ನಡೆಸುತ್ತಾರೆ ಎನ್ನುವ ಮಾಹಿತಿ ದೊರೆತು ಸ್ಥಳೀಯರು ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಾಜರಾಗಿದ್ದರು. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ಸರ್ವೆ ಕಾರ್ಯವನ್ನು ಮುಂದೂಡಿದರು ಮತ್ತು ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಈ ಹಿಂದೆ 2014 ರಲ್ಲಿ ಪ.ಪಂ. ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಂಡು ವೀರಾಜಪೇಟೆ ಪಟ್ಟಣ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಹದ್ದುಬಸ್ತು ಸರ್ವೆ ಮಾಡಲು ತೀರ್ಮಾನಿಸಿ, ಸರ್ವೆ ಕಾರ್ಯ ನಡೆಸಲಾಗಿದೆ. ಆದರೆ ಸರ್ವೆ ಕಾರ್ಯ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಸಭೆಗಾಗಲಿ ಅಥವಾ ನಾಗರಿಕರಿಗಾಗಲಿ ನೀಡಿಲ್ಲವೆಂದರು.
ಗೌರಿ ಕೆರೆಯ ಆಸ್ತಿಯು ನಾಗರಿಕರಿಂದ ಒತ್ತುವರಿಯಾಗಿದ್ದರೆ ಅದನ್ನು ಬಿಟ್ಟು ಕೊಡಬೇಕು ಮತ್ತು ಸಾರ್ವಜನಿಕರ ಆಸ್ತಿಯು ಗೌರಿ ಕೆರೆ ವಿಸ್ತೀರ್ಣಕ್ಕೆ ಒಳಪಟ್ಟಿದ್ದರೆ ತೆರವುಗೊಳಿಸಬೇಕು. ಸರ್ವೆ ಕಾರ್ಯ ನಡೆಸದೆ ಮತ್ತೆ ನೆಪವೊಡ್ಡಿದರೆ ಸಾರ್ವಜನಿಕರ ಸಹಕಾರದೊಂದಿಗೆÀ ಪ.ಪಂ. ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪ.ಪಂ. ಸದಸ್ಯ ರಂಜಿ ಪೂಣಚ್ಚ ಮಾತನಾಡಿ, 2019ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ವೀರಾಜಪೇಟೆ ಭಾಗದಲ್ಲಿ ಸಾಕಷ್ಟು ನಷ್ಟವಾಗಿದೆ. ಸರ್ಕಾರ ಸಂತ್ರಸ್ತರಿಗೆ ಮನೆ ಬಾಡಿಗೆ ಸೇರಿದಂತೆ ಪರಿಹಾರವನ್ನು ನೀಡಲು ವಿಫಲವಾಗಿದೆ ಎಂದು ಟೀಕಿಸಿದರು.
ಸದಸ್ಯ ಎಸ್.ಹೆಚ್. ಮತೀನ್ ಮಾತನಾಡಿ, ಇತ್ತೀಚಿಗೆ ವೀರಾಜ ಪೇಟೆಯ ಮೀನು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತಕ್ಕೆ ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಜಿಲ್ಲಾಡಳಿತ ಯಾವುದೇ ಉತ್ತರ ನೀಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರುಗಳಾದ ಪಟ್ಟಡ ರಂಜು, ಕೆ.ಹೆಚ್. ಮೊಹಮ್ಮದ್ ರಾಫಿ ಹಾಗೂ ಅಗಸ್ಟಿನ್ ಬೆನ್ನಿ ಉಪಸ್ಥಿತರಿದ್ದರು.