ಸಿದ್ದಾಪುರ, ಜೂ. 30: ನೆಲ್ಯಹುದಿಕೇರಿಯ ಅತ್ತಿಮಂಗಲ ಬಳಿಯಿಂದ ಬರಡಿಗೆ ತೆರಳುವ ರಸ್ತೆಯನ್ನು ಕಾಫಿ ತೋಟವೊಂದರ ಮಾಲೀಕರು ಬಂದ್ ಮಾಡಿರುವುದನ್ನು ಖಂಡಿಸಿ ನಲ್ವತ್ತೇಕರೆ ಹಾಗೂ ಬರಡಿಯ ನಿವಾಸಿಗಳು ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಂದರ್ಭದಲ್ಲಿ ಮಾತನಾಡಿದ ಪಿ.ಆರ್ ಭರತ್ ಅತ್ತಿಮಂಗಲದಿಂದ ಬರಡಿಗೆ ತೆರಳುವ ಸಾರ್ವಜನಿಕ ರಸ್ತೆಗೆ ನೂರಾರು ವರ್ಷಗಳ ಇತಿಹಾಸವಿದೆ.
ಈ ಭಾಗದಲ್ಲಿ ಸುಮಾರು ಐದು ಸಾವಿರ ಜನಸಂಖ್ಯೆ ಇದ್ದು ಗಿರಿಜನರು ಕೂಡ ಇದೇ ರಸ್ತೆಯನ್ನು ಅವಲಂಬಿಸಿಕೊಂಡಿದ್ದಾರೆ. ಅಲ್ಲದೆ ನಲ್ವತ್ತೇಕರೆ ಭಾಗದಲ್ಲಿ ಮಂದಿರ ಹಾಗೂ ಮಸೀದಿಗಳಿದ್ದು, ಇಲ್ಲಿಗೆ ತೆರಳುವ ಸಂಪರ್ಕದ ರಸ್ತೆಯ ಅಭಿವೃದ್ಧಿಯನ್ನು ಸರಕಾರವು ಮಾಡಿತ್ತು. ಆದರೆ ಈ ರಸ್ತೆಯ ಜಾಗದ ವಿಚಾರದಲ್ಲಿ ಖಾಸಗಿ ತೋಟದ ಮಾಲೀಕರಿಗೂ ಹಾಗೂ ಗ್ರಾ.ಪಂ ನಡುವೆ ನಡೆದ ವಿವಾದದಲ್ಲಿ ತೋಟದ ಮಾಲಿಕರ ಪರ ಆದೇಶ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟದ ಮಾಲೀಕರು ಏಕಾಏಕಿ ಸಾರ್ವಜನಿಕ ರಸ್ತೆಯನ್ನು ಮುಚ್ಚಿದ್ದಾರೆ.
ಇದರಿಂದಾಗಿ ಬರಡಿ ಭಾಗಕ್ಕೆ ತೆರಳುವ ಗ್ರಾಮಸ್ಥರಿಗೆ ರಸ್ತೆ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಗ್ರಾ.ಪಂ ಆಡಳಿತ ಮಂಡಳಿಯ ನಿರ್ಲಕ್ಷ್ಯತನದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಆರೋಪಿಸಿದರು. ಕೂಡಲೇ ಮೇಲಾಧಿಕಾರಿಗಳು ಗಮನಹರಿಸಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಂತೋಷ್, ಪ್ರಕಾಶ್, ಕೆ.ಬಿ. ಗಣಪತಿ, ಬೀರಾನ್ ಕುಟ್ಟಿ, ಮುಸ್ತಫಾ, ಕಿಶೋರ್ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು