ಶ್ರೀಮಂಗಲ, ಜೂ. 30: ಶ್ರೀಮಂಗಲ ಮತ್ತು ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ಕೋವಿಡ್ -19 ಸೊಂಕು ಹರಡುವಿಕೆಗೆ ಮುನ್ನಚ್ಚೆರಿಕೆಯ ನಿಯಮವನ್ನು ಪಾಲಿಸಿ ಸರಕಾರದ ನಿರ್ದೇಶನದಂತೆ, ಭಾನುವಾರ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗುವುದು. ಉಳಿದ ದಿನ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಸಿ ವ್ಯಾಪಾರ ನಡೆಸಲು ಶ್ರೀಮಂಗಲ - ಟಿ. ಶೆಟ್ಟಿಗೇರಿ ಪಟ್ಟಣ ವರ್ತಕರ ಸಂಘ ನಿರ್ಧಾರ ಕೈಗೊಂಡಿದೆ.

ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ವರ್ತಕರ ಸಂಘದ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ತಕರು ಮತ್ತು ಸಾರ್ವಜನಿಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈಗಾಗಲೇ ಮಾರ್ಚ್ ತಿಂಗಳ ಮಧ್ಯಂತರದಿಂದ ಕೋವಿಡ್-19 ಹಿನ್ನೆಲೆ ಲಾಕ್‍ಡೌನ್ ಜಾರಿಯಾಗಿದ್ದರಿಂದ ವರ್ತಕರು ಸಂಕಷ್ಟದಲ್ಲಿದ್ದಾರೆ. ಮುಚ್ಚಿರುವ ಮಳಿಗೆಗಳಿಗೆ ವಿದ್ಯುತ್ ಬಿಲ್ ಹಾಗೂ ಮಳಿಗೆ ಬಾಡಿಗೆ ಸಾವಿರಾರು ರೂಪಾಯಿಗಳನ್ನು ಕಟ್ಟಬೇಕಾಗಿದೆ. ವಾರದ ಎಲ್ಲಾ ದಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವುದು ಅಸಾಧ್ಯವಾಗಿದೆ ಎಂದು ವರ್ತಕರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಮಾಣೀರ ಮುತ್ತಪ್ಪ ತಿಳಿಸಿದ್ದಾರೆ.

ಸಭೆಯಲ್ಲಿ ಉಪಾಧ್ಯಕ್ಷ ಬೊಳ್ಳಜೀರ ಆಶೋಕ, ಕಾರ್ಯದರ್ಶಿ ಚೋನಿರ ಕಾಳಯ್ಯ, ನಿರ್ದೇಶಕರು ಗಳಾದ ಕಾಳಿಮಾಡ ತಮ್ಮು ಮುತ್ತಣ್ಣ, ಕಾಳಿಮಾಡ ದಿಲೀಪ್ ಗಣಪತಿ ಹಾಗೂ ವರ್ತಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.