ಗೋಣಿಕೊಪ್ಪ ವರದಿ, ಜೂ. 30 : ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ರೈತರ ಕಡತ ವಿಲೇವಾರಿಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಾಲೂಕು ಬಿಜೆಪಿ ಕೃಷಿ ಮೋರ್ಚ ಅಧ್ಯಕ್ಷ ಕಟ್ಟೇರ ಈಶ್ವರ ಒತ್ತಾಯಿಸಿದ್ದಾರೆ.
ರೈತರ ಭೂಮಿಗೆ ಸಂಬಂದಿಸಿದ ಸರ್ವೆ, ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ ಸಾಕಷ್ಟು ಕಡತಗಳು ಸಿಬ್ಬಂದಿ ಬೇಜವಾಬ್ದಾರಿಯಿಂದ ವಿಲೇವಾರಿಯಾಗದೆ ಹಾಗೇ ಕಚೇರಿಯಲ್ಲಿ ಉಳಿದುಕೊಂಡಿವೆ. ರೈತರ ಸಮಸ್ಯೆ ಅರಿತು ಅಧಿಕಾರಿಗಳು ಶೀಘ್ರದಲ್ಲಿ ಸ್ಪಂದಿಸುವ ಕೆಲಸವಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊರೊನಾ ವೈರಸ್ ಹರಡದಂತೆ ಮುಂಜಾಗೃತೆ ವಹಿಸುವ ನಿಟ್ಟಿನಲ್ಲಿ ಕಚೇರಿ ಎದುರು ನಡೆಸಬೇಕು ಎಂದು ನಿರ್ಧರಿಸಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಪರಸ್ಪರ ಅಂತರ ಕಾಯಲು ನಾವು ಬದ್ಧರಾಗಿದ್ದೇವೆ. ಇದನ್ನು ಅಧಿಕಾರಿಗಳು ಮನಗಂಡು ಕಡತವನ್ನು ತುರ್ತಾಗಿ ವಿಲೇವಾರಿ ಮಾಡಲು ಮುಂದಾಗಬೇಕು ಎಂದರು ಒತ್ತಾಯಿಸಿದರು.
ಕೃಷಿ ಮೋರ್ಚಾದಿಂದ ರೈತಪರವಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ. ವನ್ಯಜೀವಿಗಳಿಂದ ಆಗುತ್ತಿರುವ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದು ರೈತರಿಗೆ ಸಹಾಯವಾಗುವಂತೆ ಹೋರಾಟ ಮಾಡಲಾಗುವುದು. ಹುಲಿ ದಾಳಿಗೆ ಒಳಗಾಗುತ್ತಿರುವ ಜಾನುವಾರುಗಳ ವಾರಸುದಾರರಿಗೆ ಸರಿಯಾದ ಪರಿಹಾರ ದೊರೆಯುತ್ತಿಲ್ಲ. ಕನಿಷ್ಟ ರೂ. 75 ಸಾವಿರ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕಿದೆ. ಇದರಿಂದ ಹಸು ಕಳೆದುಕೊಂಡವರಿಗೆ ಪ್ರಯೋಜನವಾಗುತ್ತದೆ ಎಂದರು.
ಶ್ರೀಮಂಗಲ ವ್ಯಾಪ್ತಿಯಲ್ಲಿದ್ದ ಹುಲಿಯನ್ನು ಹಿಡಿಯುವಲ್ಲಿ ಸಫಲರಾದ ಡಿಸಿಎಫ್ ಕೋಣೇರಿರ ರೋಶನಿ, ಆರ್ಎಫ್ಒ ತೀರ್ಥ ಅವರ ಕಾರ್ಯವೈಖರಿ ಅಭಿನಂದನಾರ್ಹ. ಮತ್ತೊಂದು ಹುಲಿ ಕೂಡ ಈ ವ್ಯಾಪ್ತಿಯಲ್ಲಿ ದಾಳಿ ಮಾಡುತ್ತಿದೆ. ಇದನ್ನು ಸೆರೆ ಹಿಡಿಯಲು ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳು ವ್ಯವಹರಿಸಿ, ಕೃಷಿಕರಿಗೆ ನೆರವಾಗಬೇಕು ಎಂದರು.
ಬಿತ್ತನೆ ಬೀಜ ದರ ಹೆಚ್ಚಾಗಿದೆ, ಇದು ಕೃಷಿಕನಿಗೆ ಹೆಚ್ಚು ನಷ್ಟವಾಗುತ್ತಿದೆ. ಕಡಿಮೆ ದರದಲ್ಲಿ ಬಿತ್ತನೆ ಬೀಜ ದೊರೆಯುವಂತೆ ಆಗಬೇಕು. ಕೃಷಿಕರಿಗೆ ನಿರಂತರ ವಿದ್ಯುತ್ ನೀಡಲು ಯೋಜನೆ ರೂಪಿಸಬೇಕು. ಶ್ರೀಮಂಗಲ ವ್ಯಾಪ್ತಿಯಲ್ಲಿ ಹಳೆಯ ವಿದ್ಯುತ್ ತಂತಿ, ಕಂಬ, ವಿದ್ಯುತ್ ಉಪಕರಣ ಬಳಕೆ ಮಾಡುತ್ತಿರುವುದರಿಂದ ನಿರಂತರ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದೇವೆ. ಇದನ್ನು ಸರಿಪಡಿಸಲು ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ತೋರೀರ ವಿನು, ಕಾರ್ಯದರ್ಶಿ ಅಣ್ಣಳಮಾಡ ನವೀನ್ ಅಚ್ಚಯ್ಯ ಇದ್ದರು.