ಸಿದ್ದಾಪುರ, ಜೂ 30: ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ಬೀಟಿಕಾಡು ಬಳಿ ಮುಖ್ಯ ರಸ್ತೆಯಲ್ಲಿ ಹಾಡಹಗಲೆ ಕಾಡಾನೆಗಳ ಹಿಂಡು ರಾಜಾರೋಷವಾಗಿ ಸಾರ್ವಜನಿಕರ ಎದುರಲ್ಲೇ ತೆರಳಿದ ದೃಶ್ಯ ಎದುರಾಯಿತು. ಕಳೆದ ಸುಮಾರು ದಿನಗಳಿಂದ ಸಿದ್ದಾಪುರ, ಗುಹ್ಯ, ಪಳ್ಳಕೆರೆ ಭಾಗದಲ್ಲಿ ಮರಿ ಆನೆಗಳು ಸೇರಿದಂತೆ 20 ಕ್ಕೂ ಅಧಿಕ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ಕಾಫಿ ತೋಟದೊಳಗೆ ನುಗ್ಗುತ್ತಿವೆ. ಅಲ್ಲದೇ ಕೃಷಿ ಫಸಲುಗಳನ್ನು ನಾಶಪಡಿಸುತ್ತಿವೆ. ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ಬೆಳೆಗಾರರಿಗೆ, ಕಾರ್ಮಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ತಾ. 30 ರಂದು ಸಿದ್ದಾಪುರದ ಪಾಲಿಬೆಟ್ಟ ರಸ್ತೆ ಬೀಟಿಕಾಡು ಬಳಿ ಕಾಫಿ ತೋಟದಿಂದ 2 ಮರಿ ಆನೆಗಳೊಂದಿಗೆ 4 ದೊಡ್ಡ ಆನೆಗಳು ಇರುವ ಹಿಂಡು ಮುಖ್ಯ ರಸ್ತೆಗಳಲ್ಲಿ ತೆರಳಿದವು. ಕೆಲಸಕ್ಕೆ ತೆರಳುವ ಕಾರ್ಮಿಕರು ಭಯಭೀತರಾದರು. ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಸಿದ್ದಾಪುರದ ಆನೆಗಳ ಕಾಟದಿಂದ ಜನರ ಓಡಾಟ ಕಡಿಮೆಯಾಗಿದೆ.
-ವರದಿ: ವಾಸು