ಗೋಣಿಕೊಪ್ಪಲು.ಜೂ.30: ಗೋಣಿಕೊಪ್ಪಲುವಿನ 6ನೇ ವಿಭಾಗದ ಕೆ.ಇ.ಬಿ.ಹಿಂಭಾಗದ ಮೊದಲನೆಯ ಅಡ್ಡ ರಸ್ತೆಯ ಕಂಟೈನ್ಮೆಂಟ್ ವಲಯದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. 33 ಮನೆಯ 146ಮಂದಿ ಈ ಭಾಗದಲ್ಲಿ ನೆಲೆಸಿದ್ದು ಎಸ್ಎಸ್ಎಲ್ಸಿ 3 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮುಂಜಾನೆ ಗ್ರಾಮ ಪಂಚಾಯ್ತಿಯ ಪಿಡಿಒ ಶ್ರೀನಿವಾಸ್, ಪಂಚಾಯಿತಿ ಸಿಬ್ಬಂದಿಗಳಾದ ಸತೀಶ್, ಪ್ರತಾಪ್, ಸುಬ್ರಮಣಿ ಮುಂತಾದವರು ಸ್ಥಳಕ್ಕೆ ತೆರಳಿ ಮುಂಜಾಗೃತಾ ಕ್ರಮವಾಗಿ 30 ಮನೆಗಳ ವಲಯವನ್ನು ಸ್ಯಾನಿಟೈಸ್ ಮಾಡಿಸಿದರು.
ಈ ಭಾಗದಲ್ಲಿರುವ ನಾಗರಿಕರು ಸರ್ಕಾರದ ನಿಯಮ ಮೀರಿ ಮನೆಯಿಂದ ಹೊರ ಬಾರದಂತೆ ಸ್ಥಳೀಯ ನಿವಾಸಿಗಳಿಗೆ ಪಿಡಿಒ ಶ್ರೀನಿವಾಸ್ ಸೂಚನೆ ನೀಡಿದರು. ಯಾವುದೇ ಸಮಸ್ಯೆಗಳು ಎದುರಾದಲ್ಲಿ ಪಂಚಾಯ್ತಿ ಗಮನಕ್ಕೆ ತರುವಂತೆಯೂ ಹಾಗೂ ಸುಳ್ಳು ಸುದ್ದಿಗಳಿಗೆ ಮರುಳಾಗದೆ ಅತ್ಯಂತ ಎಚ್ಚರಿಕೆಯಿಂದ ತಮ್ಮ ಮನೆಗಳಲ್ಲಿಯೇ ಇರುವಂತೆ ತಿಳಿಸಿದರು. ಈ ಭಾಗದ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಪೊಲೀಸರು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯಿತಿ ನೌಕರರು ಸದಾ ತಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ. ಯಾವುದೇ ಸಮಸ್ಯೆಗಳಿದ್ದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದರು.
ಕಂಟೈನ್ಮೆಂಟ್ ವಲಯಕ್ಕೆ ನೋಡಲ್ ಅಧಿಕಾರಿಗಳಾದ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಭಾಗದ ಮನೆಗಳಿಗೆ ತೆರಳಿ ಅಗತ್ಯ ಮಾಹಿತಿಗಳನ್ನು ನೀಡುವುದರೊಂದಿಗೆ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸಿದರು. ಕಂಟೈನ್ಮೆಂಟ್ ವಲಯಕ್ಕೆ ಪೊನ್ನಂಪೇಟೆ ಕಂದಾಯ ಅಧಿಕಾರಿ ರಾಧಾಕೃಷ್ಣ, ಗೋಣಿಕೊಪ್ಪ ಗ್ರಾಮ ಲೆಕ್ಕಿಗರಾದ ಮಂಜುನಾಥ್, ಸುಚಿತ್ರ, ಸಿಬ್ಬಂದಿಗಳಾದ ಸುನಿಲ್, ಠಾಣಾಧಿಕಾರಿ ಸುರೇಶ್ ಬೋಪಣ್ಣ, ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಕಂಟೈನ್ಮೆಂಟ್ ವಲಯದಲ್ಲಿರುವವರಿಗೆ ಅಗತ್ಯ ಸಾಮಗ್ರಿಗಳನ್ನು ಸರಬರಾಜು ಮಾಡಲು ಮೂರು ಏಜೆನ್ಸಿಗಳನ್ನು ನೇಮಕ ಮಾಡಿದ್ದಾರೆ.