ಮಡಿಕೇರಿ, ಜೂ. 30: ಸಾಂಖ್ಯಿಕ ತಜ್ಞ ಪಿ.ಸಿ. ಮಹಾಲನೋಬಿಸ್ ಅವರು ವಿಶ್ವಕ್ಕೆ ಸಾಂಖ್ಯಿಕ ಮಾದರಿಗಳ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾರಾಯಣ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಭಾರತದ ಪ್ರಖ್ಯಾತ ಸಾಂಖ್ಯಿಕ ತಜ್ಞ ಪ್ರೊಫೆಸರ್ ಪ್ರಶಾಂತಚಂದ್ರ ಮಹಾಲನೋಬಿಸ್ ಅವರ ಜನ್ಮ ದಿನಾಚರಣೆಯನ್ನು ಸಾಂಖ್ಯಿಕ ದಿನಾಚರಣೆಯನ್ನಾಗಿ ಆಚರಿಸಲು ನಿರ್ದೇಶನ ಪ್ರಯುಕ್ತ, ರಾಜ್ಯ ಸರ್ಕಾರದ ಸೂಚನೆಯಂತೆ, ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ನಾರಾಯಣ ದೀಪ ಬೆಳಗುವ ಮೂಲಕ ಸಾಂಖ್ಯಿಕ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಇಂದು ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅಂಕಿ ಅಂಶಗಳು ಅಗತ್ಯವಾಗಿ ಬೇಕಾಗಿದೆ. ದೇಶದ ಅಭಿವೃದ್ಧಿಗೆ ಇವುಗಳು ಪೂರಕವಾಗಿದೆ ಎಂದು ವಿವರಣೆ ನೀಡಿದರು. ಅಲ್ಲದೆ ಅಂಕಿ ಅಂಶ ಸಂಗ್ರಹಣೆ ಮಾಡುವಾಗ ನಿಖರತೆ ಮತ್ತು ಪಾರದರ್ಶಕತೆ ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು. ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಆನಂದಮೂರ್ತಿ ಮಾತನಾಡಿ, ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅಂಕಿ ಅಂಶಗಳು ಅಗತ್ಯವಾಗಿ ಬೇಕು. ಸಾರ್ವಜನಿಕ ಯೋಜನೆಗಳನ್ನು ತಯಾರಿಸಲು ಅಗತ್ಯವಾಗಿ ಬೇಕು, ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಕೊಡುಗೆಗಳು ಮುಖ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಸಾಂಖ್ಯಿಕ ಅಧಿಕಾರಿ ನವೀನ್ ಮಾತನಾಡಿ, ಸಂಖ್ಯಾ ಶಾಸ್ತ್ರದ ಪಿತಾಮಹರು ನೀಡಿದ ಕೊಡುಗೆಗಳ ಬಗ್ಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಸಾಂಖ್ಯಿಕ ಇಲಾಖೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂಖ್ಯಿಕ ಅಧಿಕಾರಿಗಳು /ಸಾಂಖ್ಯಿಕ ನೀರೀಕ್ಷಕರು ಕಚೇರಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ವೆಂಕಟೇಶ್ ಸ್ವಾಗತಿಸಿದರು. ಕಚೇರಿಯ ಅಧೀಕ್ಷಕಿ ಸೌಭಾಗ್ಯಮ್ಮ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಟಿ.ಎಸ್. ಮಮತ ವಂದಿಸಿದರು.