ಕೂಡಿಗೆ, ಜೂ. 30: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಅಭಿವೃದ್ಧಿಪಡಿಸಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರ ಒತ್ತಾಯವಾಗಿದೆ.
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವು ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳ 15 ಉಪ ಗ್ರಾಮಗಳಿಗೆ ಒಳಪಡುತ್ತದೆ. ಅಲ್ಲದೆ ಈ ವ್ಯಾಪ್ತಿಯಲ್ಲಿ ಜಿಲ್ಲೆಯ ಪ್ರಮುಖವಾದ ಕೈಗಾರಿಕಾ ಪ್ರದೇಶವಿದೆ ಇದರಲ್ಲಿ ದಿನಂಪ್ರತಿ ಸಾವಿರಾರು ಕಾರ್ಮಿಕರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೆ ಕೃಷಿ ಕ್ಷೇತ್ರದ ಆವರಣದಲ್ಲಿ 10ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕೂಡಿಗೆ ಸೇರಿದಂತೆ ಪಕ್ಕದ ಪಿರಿಯಾಪಟ್ಟಣ ತಾಲೂಕಿನ ಗ್ರಾಮಸ್ಥರು ಈ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುತ್ತಾರೆ ಈ ಕೇಂದ್ರದಲ್ಲಿ ಖಾಯಂ ಶುಶ್ರೂಷಕಿಯು ಇಲ್ಲದಾಗಿದೆ. ಈಗಿರುವವರು ವಾರದ ಮೂರು ದಿನಗಳಲ್ಲಿ ಸೇವೆ ಮಾಡುತ್ತಿದ್ದಾರೆ. ಇನ್ನೂ ಉಳಿದ ದಿನಗಳಲ್ಲಿ ಸೇವೆಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅನೇಕ ಬಾರಿ ಲಿಖಿತವಾಗಿ ತಿಳಿಸಲಾಗಿದೆ ಅಲ್ಲದೆ ಜಿಲ್ಲಾ ಪಂಚಾಯತ್ ಮಾಸಿಕ ಸಭೆಯಲ್ಲಿ ಕ್ಷೇತ್ರದ ಸದಸ್ಯರು ಶುಶ್ರೂಷಕಿ ನೇಮಕ ಮಾಡುವ ಬಗ್ಗೆ ಚರ್ಚೆ ನಡೆಸಿದರೂ ಜಿಲ್ಲಾ ಕೇಂದ್ರದಿಂದ ನೇಮಕ ಮಾಡಿಲ್ಲ ಎಂದು ಗ್ರಾಮಸ್ಥರು ಟೀಕಿಸಿದ್ದಾರೆ.