ಗೋಣಿಕೊಪ್ಪಲು, ಜೂ. 29: ಅರಣ್ಯ ಕಚೇರಿಗೆ ರೈತರ ಸಮಸ್ಯೆಗಳನ್ನು ಹೇಳಲು ಆಗಮಿಸಿದ ರೈತ ಮುಖಂಡರನ್ನು ಮಳೆಯ ನಡುವೆ ಕಚೇರಿಯ ಹೊರಗೆ ನಿಲ್ಲಿಸಿ ಸಭೆ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅನವಶ್ಯಕ ಗೊಂದಲ ನಿರ್ಮಿಸಿದ ಪ್ರಭಾರ ಡಿಎಫ್‍ಒ ರೋಶ್ನಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಗಳಿಗೆ ಸಭೆಯ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಇದನ್ನು ಪರಿಗಣಿಸದೆ ಏಕಾಏಕಿ ರೈತರನ್ನು ಅಗೌರವದಿಂದ ಮಾತನಾಡಿಸಿದ ರೀತಿಯನ್ನು ರೈತರು ಖಂಡಿಸಿದರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಅರಿತು ಪ್ರಭಾರ ಡಿಎಫ್‍ಒ ರೋಶ್ನಿಯವರನ್ನು ಮನವೊಲಿಸಿ ರೈತರ ಅಹವಾಲು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಮಾತಿನ ಚಕಮಕಿಯ ನಡುವೆ ರೋಶ್ನಿ ರೈತರ ಸಭೆಯನ್ನು ತಮ್ಮ ಕಚೇರಿಯಲ್ಲಿ ಆಯೋಜಿಸಿ ಸಮಸ್ಯೆಗಳನ್ನು ಆಲಿಸಲು ವೇದಿಕೆ ಕಲ್ಪಿಸಿದರು.

ಕೊಡಗು ಜಿಲ್ಲೆಯಲ್ಲಿ ನಿರಂತರ ಕಾಡಾನೆ,ಹುಲಿ ಹಾಗೂ ಕಾಡುಹಂದಿಯ ಉಪಟಳದಿಂದ ರೈತರ ಭತ್ತದ ಗದ್ದೆಗಳು ಹಾಗೂ ಕಾಫಿ ತೋಟಗಳು ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ನೊಂದ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ನೀಡಿ ಒತ್ತಾಯಿಸಲಾಯಿತು.

ಸಭೆಯಲ್ಲಿ ತಿತಿಮತಿ ಎಸಿಎಫ್ ಶ್ರೀಪತಿ, ವೀರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೆಗೌಡ, ಪೊನ್ನಂಪೇಟೆ ಆರ್‍ಎಫ್‍ಒ ತೀರ್ಥ, ತಿತಿಮತಿ ಆರ್‍ಎಫ್‍ಒ ಅಶೋಕ್ ಹುನಗುಂದ, ದಿಲೀಪ್, ಕೇಶವ್ ಸೇರಿದಂತೆ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಜಿಲ್ಲಾ ಪ್ರ. ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಮುಖಂಡರಾದ ಚೆಪ್ಪುಡೀರ ರೋಶನ್ ಮಾಯಮುಡಿಯ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ವಿ.ಬಾಡಗದ ರೈತ ಮುಖಂಡರಾದ ಚೇಮಿರ ಪ್ರಕಾಶ್, ಮಚ್ಚಾರಂಡ ಪ್ರವೀಣ್, ಚೇಮಿರ ಈರಪ್ಪ, ಬೊಳ್ಳಂಡ ರಘು,ಕರ್ತಮಾಡ ಪೊನ್ನುಮಣಿ, ಕುಂದ ಗ್ರಾಮದ ರೈತ ಮುಖಂಡರುಗಳಾದ ಸಣ್ಣುವಂಡ ತಿಮ್ಮಯ್ಯ, ಎಸ್.ಪಿ. ಪೂಣಚ್ಚ, ಎಸ್.ಎಂ. ಕುಶಾಲಪ್ಪ, ತೀತಮಾಡ ಶರಣು, ಮದ್ರಿರ ಎ. ರವೀಂದ್ರ, ಅಮ್ಮತ್ತಿಯ ಮನೆಯಪಂಡ ಗೌತಮ್, ಅಜ್ಜಮಾಡ ನವೀನ್, ಮುಂತಾದವರು ಸಭೆಯಲ್ಲಿ ಹಾಜರಿದ್ದರು.