ಸೋಮವಾರಪೇಟೆ, ಜ. 29: ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ವಿ.ಪಿ. ಶಶಿಧರ್ ಅವರು ನೀಡಿರುವ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ಪಕ್ಷವು ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲು ಮುಂದಾಗಿರುವದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಎಸ್‍ಸಿ ಎಸ್‍ಟಿ ಘಟಕದ ರಾಜ್ಯ ಸಂಚಾಲಕ ಬಿ.ಇ. ಜಯೇಂದ್ರ ಅವರು, ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರುಗಳ ಬಗ್ಗೆ ಕುಶಾಲನಗರದ ಮಹಿಳೆ ಯೋರ್ವರು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ, ಕಾಂಗ್ರೆಸ್ ಮುಖಂಡರು ಪೊಲೀಸರಿಗೆ ದೂರು ಕೊಟ್ಟು ಎಫ್‍ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು.
ಈ ಸಂದರ್ಭ ದೂರು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದರಿಂದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿ.ಪಿ. ಶಶಿಧರ್ ಅವರು ‘ಹಾಗಾದರೆ ಪ್ರಧಾನಿಯ ವಿರುದ್ಧವೂ ನಾವು ಹಾಗೆ ಹೇಳಿದರೆ ದೂರು ಸ್ವೀಕರಿಸುವದಿಲ್ಲವೇ’ ಎಂದು ಪ್ರಶ್ನಿಸುವ ಸಂದರ್ಭ ಅಂತಹ ಮಾತುಗಳು ಬಂದಿವೆ. ಇದನ್ನು ಉದ್ದೇಶಪೂರ್ವಕ ವಾಗಿ ಹೇಳಿಲ್ಲ. ಆದರೂ ಬಿಜೆಪಿಯವರು ರಾಜಕೀಯಕ್ಕಾಗಿ ಈ ವೀಡಿಯೋವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಪಿ. ದಿನೇಶ್, ಕೆ.ಎ. ಆದಂ, ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಎಸ್‍ಸಿ ಎಸ್‍ಟಿ ಘಟಕದ ತಾಲೂಕು ಅಧ್ಯಕ್ಷ ಯತೀಶ್, ಕಾರ್ಯದರ್ಶಿ ರಾಜಪ್ಪ ಅವರುಗಳು ಉಪಸ್ಥಿತರಿದ್ದರು.
ಕುಶಾಲನಗರ : ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಅವರ ಚಾರಿತ್ರ್ಯವಧೆಗೆ ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಕುಶಾಲನಗರ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಶಶಿಧರ್ ಅವರು ಹೊಂದಿದ್ದ ಉದ್ದೇಶದ ಸತ್ಯಾಸತ್ಯತೆಯನ್ನು ಮರೆಮಾಚಿ ಸುಳ್ಳು ದಾಖಲೆ ಸೃಷ್ಠಿಸಿ ಪೊಲೀಸ್ ದೂರು ದಾಖಲಿಸಲು ಬಿಜೆಪಿ ಯತ್ನಿಸುತ್ತಿರುವುದಾಗಿ ವಕೀಲ ಆರ್.ಕೆ. ನಾಗೇಂದ್ರಬಾಬು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಶಶಿಧರ್ ಅವರ ಪದ ಬಳಕೆಯ ವೀಡಿಯೋ ತುಣುಕುಗಳನ್ನು ತಪ್ಪಾಗಿ ಅರ್ಥೈಸುವಂತೆ ಜನರ ಮನಸ್ಸಲ್ಲಿ ಬಿಜೆಪಿ ಬಿತ್ತುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡರಾದ ಎಸ್.ಎನ್.ನರಸಿಂಹಮೂರ್ತಿ, ಅಬ್ದುಲ್ ಖಾದರ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೋಷ್ಠಿಯಲ್ಲಿ ಕುಶಾಲನಗರ ಪಪಂ ಸದಸ್ಯ ಸುಂದರೇಶ್, ಕೊಡಗು ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಮುಖರಾದ ಶಿವಶಂಕರ್, ಶಿವಕುಮಾರ್, ಪುನಿತ್ ಮತ್ತಿತರರು ಇದ್ದರು.
ಪ್ರತಿಭಟನೆ ಹಾಸ್ಯಾಸ್ಪದ : ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಮಾರ್ಮಿಕವಾಗಿ ಪೆÇಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ವೀಡಿಯೋ ತುಣುಕನ್ನು ಮುಂದಿಟ್ಟುಕೊಂಡು ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಸ್ಯಾಸ್ಪದ ಪ್ರತಿಭಟನೆ ನಡೆಸುತ್ತಿದ್ದಾರೆ ಅನವಶ್ಯಕ ಗಲಭೆ, ಬಂದ್, ಪ್ರತಿಭಟನೆ ಮುಂತಾದವುಗಳನ್ನು ನಿರಂತರವಾಗಿ ನಡೆಸಿ ಅಭ್ಯಾಸ ಮಾಡಿಕೊಂಡಿರುವ ಇವರುಗಳು ಸರ್ಕಾರದ ವಿರುದ್ಧ ಮಾತನಾಡಲು ಸಾಧ್ಯವಾಗದೆ ಪರಿತಪಿಸುತ್ತಿದ್ದು, ವಿನಾಕಾರಣ ಅಭ್ಯಾಸ ಬಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೋವಿಡ್ 19 ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ಹೇಳಿಕೆ ನೀಡಿದ್ದಾರೆ.