ಶ್ರೀಮಂಗಲ, ಜೂ. 29: ಭಾರತದ ಸೈನಿಕರನ್ನು ಹತ್ಯೆ ಮಾಡಿರುವ ಚೀನಾ ರಾಷ್ಟ್ರದ ವಸ್ತುಗಳ ಬಳಕೆಯನ್ನು ಬಹಿಷ್ಕರಿಸುವಂತೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್‍ನ ವಿ.ಪಿ. ಶಶಿಧರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶ್ರೀಮಂಗಲದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು. ಶ್ರೀಮಂಗಲ, ಟಿ.ಶೆಟ್ಟಿಗೇರಿ, ಬಿರುನಾಣಿ, ಕುಟ್ಟ, ಬಾಡಗ, ನಾಲ್ಕೇರಿ ಗ್ರಾಮಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞಂಗಡ ಅರುಣ್ ಭೀಮಯ್ಯ ಅವರು, ರಾಷ್ಟ್ರದಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು. ಇದಕ್ಕೆ ಜನತೆಯೂ ಕೈಜೋಡಿಸಬೇಕೆಂದು ಕರೆ ನೀಡಿದರು. ಅಲ್ಲದೆ ಪ್ರಧಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್‍ನ ಶಶಿಧರ್ ವರ್ತನೆಯನ್ನು ಖಂಡಿಸಿ ಕ್ರಮಕ್ಕೆ ಆಗ್ರಹಿಸಿದರು. ಜಿ.ಪಂ. ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಗ್ರಾ.ಪಂ. ಉಪಾಧ್ಯಕ್ಷ ಕಳ್ಳಂಗಡ ರಜತ್ ಪೂವಣ್ಣ ಅವರುಗಳು ಈ ಬಗ್ಗೆ ಮಾತನಾಡಿದರು.
ತಾಲೂಕು ಉಪಾಧ್ಯಕ್ಷ ಮಚ್ಚಾಮಾಡ ಸುಮಂತ್ ಮತ್ತು ಚೊಕೀರ ಕಲ್ಪನ, ಕೃಷಿ ಮೋರ್ಚಾ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ತಾಲೂಕು ಪಂಚಾಯತಿ ಸದಸ್ಯೆ ಸರೋಜ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷೆ ಬೊಳ್ಳಜೀರ ಸುಶೀಲ ಅಶೋಕ್, ಡಿಸಿಸಿ ಬ್ಯಾಂಕ್ ಸದಸ್ಯ ಹೊಟ್ಟೇಂಗಡ ರಮೇಶ್, ತಾಲೂಕು ಬಿಜೆಪಿ ಸದಸ್ಯ ಅಜ್ಜಮಾಡ ಜಯ, ಮಾಣೀರ ಉಮೇಶ್, ಕಾಳಿಮಾಡ ತಮ್ಮ, ಬೊಟ್ಚಂಗಡ ಗಿರೀಶ್, ಬೊಟ್ಚಂಗಡ ಜಪ್ಪು ಅಣ್ಣಳಮಾಡ ರಾಯ್, ಸಾಮಾಜಿಕ ಜಾಲತಾಣ ಕ್ಷೇತ್ರ ಸಂಚಾಲಕ ಸಚಿನ್ ಪೆಮ್ಮಯ್ಯ ಚಿರಿಯಪಂಡ, ಸಹ ಸಂಚಾಲಕ ಮಹೇಶ್ ಮಂದಣ್ಣ ಚಟ್ಟಂಗಡ, ವಿಲ್ಲು ಬೋಪಯ್ಯ, ಆರ್.ಎಂ.ಸಿ. ಸದಸ್ಯ ಕಳ್ಳಂಗಡ ಬಾಲಕೃಷ್ಣ, ಕಾಳಪ್ಪ ಕಳ್ಳಂಗಡ, ನವೀನ್ ಪೆಮ್ಮಣಮಾಡ, ಚೋನಿರ ಕಾಳಯ್ಯ, ರಜಿತ್ ಪೂವಣ್ಣ ಕಳ್ಳಂಗಡ, ಕುಞಂಗಡ ಕೃಷ್ಣ, ಮಚ್ಚಮಾಡ ಶ್ಯಾಮ್, ಬೊಟ್ಟಂಗಡ ಈಶ್ವರ, ಮಹೇಶ್ ಮಂದಣ್ಣ ಸೇರಿದಂತೆ ಪಕ್ಷದ ಪ್ರಮುಖರು, ಚುನಾಯಿತ ಜನ ಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಸ್ವಯಂ ಸೇವಕರು ಹಾಜರಿದ್ದರು.
ತಿತಿಮತಿಯಲ್ಲಿ ಪ್ರತಿಭಟನೆ
*ಗೋಣಿಕೊಪ್ಪಲು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ತಿತಿಮತಿಯಲ್ಲಿ ಸ್ಥಳೀಯ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಏಕ ವಚನದಲ್ಲಿ ಮಾತನಾಡಿರುವ ವಿ.ಪಿ.ಶಿಧರ್ ಅವರನ್ನು ಕೂಡಲೆ ಗಡಿಪಾರು ಮಾಡಬೇಕು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಗೋಣಿಕೊಪ್ಪಲು ಸಬ್ ಇನ್ಸ್ ಪೆಕ್ಟರ್ ಸುರೇಶ್ ಬೋಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಸುರೇಶ್ ಬೋಪಣ್ಣ ಈ ಸಂಬಂಧ ಶಶಿಧರ್ ವಿರುದ್ಧ ಈಗಾಗಲೆ ಮೊಕದ್ದಮೆ ದಾಖಲಾಗಿದೆ. ಕೋವಿಡ್ 19 ಹರುಡುತ್ತಿರುವ ಸಂದರ್ಭದಲ್ಲಿ ಗುಂಪು ಸೇರುವುದು ಸಲ್ಲದು ಎಂದು ಸೂಚಿಸಿದರು. ಪ್ರತಿ ಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರಾದ ಶಿವು, ಅನೂಪ್,ಸಿದ್ದರಾಜು ಮೊದಲಾದವರು ಪಾಲ್ಗೊಂಡಿದ್ದರು.
ಶಶಿಧರ್ ಕ್ಷಮೆಯಾಚನೆಗೆ ಆಗ್ರಹ
ಗೋಣಿಕೊಪ್ಪ ವರದಿ: ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ ಆಗ್ರಹಿಸಿದ್ದಾರೆ.
ಒಬ್ಬ ದೇಶಭಕ್ತ ಪ್ರಧಾನಿಯನ್ನು ನೀಡಿರುವ ಮಹಾತಾಯಿ ಮೇಲೆ ಅವರು ಹೇಳಿರುವ ಪದ ಅವರ ವ್ಯಕ್ತಿತ್ವವನ್ನು ಸಾರಿದ್ದು, ಕೂಡಲೇ ಕ್ಷಮೆ ಕೇಳುವ ಮೂಲಕ ತಾಯಂದಿಯರಿಗೆ ಗೌರವ ನೀಡಲಿ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವೀರಾಜಪೇಟೆ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಬೋಜಪ್ಪ ಮಾತನಾಡಿ, ದಿನದ 21 ಗಂಟೆಗಳು ಕೂಡ ದೇಶಕ್ಕಾಗಿ ದುಡಿಯುವ ಮೋದಿ ಅವರಿಗೆ ಬೇಡದ ಮಾತನಾಡಿರುವ ಶಶಿಧರ್ ಕ್ಷಮೆಯಾಚಿಸಿ ಗೌರವ ಉಳಿಸಿಕೊಳ್ಳಲಿ. ಅವರ ಮಾತು ಅವರ ವ್ಯಕ್ತಿತ್ವಕ್ಕೆ ಪೂರಕವಾಗಿದೆ. ಇದನ್ನು ಖಂಡಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ವೀರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ನೂರೇರ ರತಿ ಅಚ್ಚಪ್ಪ ಇದ್ದರು.