ಜು.7 ರ ನಂತರ ಹೊಸ ಮಾರ್ಗಸೂಚಿ
ಬೆಂಗಳೂರು, ಜೂ.29 : ಕೋವಿಡ್ ನಿಯಂತ್ರಣ ತಂಡಕ್ಕೆ ಇನ್ನಷ್ಟು ತಜ್ಞ ವೈದ್ಯರ ನೇಮಕ ಮಾಡಲಾಗುವುದು, ಸೋಂಕು ಲಕ್ಷಣ ಹೊಂದಿರುವವರು ಆಸ್ಪತ್ರೆಗೆ ದಾಖಲಾಗಲು ಆಗಮಿಸಿದರೆ ಪ್ರವೇಶ ನಿರಾಕರಿಸಬಾರದು, ಸೋಂಕು ಪತ್ತೆ ಪರೀಕ್ಷೆಯ ವರದಿಯನ್ನು ಮೊದಲು ಸರ್ಕಾರಕ್ಕೆ ತಿಳಿಸಬೇಕು, ಬೇರಾರಿಗೂ ಮಾಹಿತಿ ಬಹಿರಂಗಪಡಿಸುವಂತಿಲ್ಲ, ಸರ್ಕಾರದ ಆರೋಗ್ಯಾಧಿಕಾರಿ ಮಾಹಿತಿ ಬಿಡುಗಡೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಹಾಗೂ ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ವೈರಾಣು ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಜುಲೈ 7ರ ನಂತರ ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಚಿಂತನೆ ಇದೆ. ರಾಜ್ಯದಲ್ಲಿ ವೈರಾಣು ಸೋಂಕು ಪರಿಸ್ಥಿತಿ ಇನ್ನೂ ಆರು ತಿಂಗಳು ಇದೇ ರೀತಿ ಮುಂದುವರಿಯುವ ಸಾಧ್ಯತೆ ಕಂಡುಬರುತ್ತಿದೆ ಎಂದು ಹೇಳಿದರು. ತಜ್ಞರ ಸಮಿತಿಯ ವರದಿಯ ಪ್ರಕಾರ, ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಜುಲೈ ಮತ್ತು ಆಗಸ್ಟ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರ ಏರಿಕೆಯಾಗಲಿದೆ ಎಂದು ಸಚಿವರು ಹೇಳಿದರು. ಅಲ್ಲದೆ ಕೇವಲ ಪರೀಕ್ಷೆಯ ಪ್ರಮಾಣ ಮಾತ್ರ ಹೆಚ್ಚಾಗಿಲ್ಲ, ಸೋಂಕಿತರು ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಸಚಿವರು ಒಪ್ಪಿಕೊಂಡರು.
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಅಸಮಾಧಾನ
ನವದೆಹಲಿ, ಜೂ.29 : ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ನಂತರ 22 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಇಂಧನ ದರ ಏರಿಕೆ ಮೂಲಕ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, `ಇಂಧನ ದರ ಏರಿಕೆ ವಿರುದ್ಧ ದನಿಯೆತ್ತಿ' ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಸೋನಿಯಾ, ಬೆಲೆ ಏರಿಕೆ ನಿರ್ಧಾರವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜನರ ವೆಚ್ಚದ ಮೂಲಕ ಸರ್ಕಾರ ಲಾಭ ಗಳಿಸಲು ಹೊರಟಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವು ಜನರಿಗೆ ನೆರವಾಗುವುದು ಬಿಟ್ಟು ಅವರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಲಾಭ ಮಾಡುವುದು ಸರಿಯಲ್ಲ ಎಂದಿದ್ದಾರೆ. ಒಂದೆಡೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಜನ ಸಂಕಷ್ಟಕ್ಕೆ ಸಿಲುಕಿರುವಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಜೀವನವನ್ನು ಮತ್ತಷ್ಟು ಕಷ್ಟಕರವಾಗಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಮುಖರ ವಿರುದ್ಧ ಎಫ್ಐಆರ್
ಬೆಂಗಳೂರು, ಜೂ.29 : ನಗರದಲ್ಲಿ ಸೈಕಲ್ ಜಾಥಾ ನಡೆಸಲು ಕಾಂಗ್ರೆಸ್ ಕಾರ್ಯದರ್ಶಿಯಿಂದ ಮನವಿ ಬಂದಿತ್ತು. ಈ ಸಮಯದಲ್ಲಿ ಜಾಥಾ ಮಾಡಲು ಅನುಮತಿ ನೀಡಿರಲಿಲ್ಲ. ಜಾಥಾ ಮಾಡದಂತೆ ಕಾಂಗ್ರೆಸ್ಗೆ ನೋಟೀಸ್ ಕೂಡ ನೀಡಲಾಗಿತ್ತು ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ. ಆದರೂ ಕಾಂಗ್ರೆಸ್ ನಾಯಕರೂ ಕಾನೂನು ಉಲ್ಲಂಘನೆ ಮಾಡಿ ಸೈಕಲ್ ಜಾಥಾ ನಡೆಸಿದ್ದಾರೆ. ಈ ಸಂಬಂದ ಕಾನೂನು ತಜ್ಞರ ಜೊತೆ ಚರ್ಚಿಸಿ ಪ್ರಕರಣ ದಾಖಲು ಮಾಡುವುದಾಗಿಯೂ ಎನ್ಡಿಎಂಎ ಕಾಯಿದೆ ಅಡಿ ದೂರು ದಾಖಲಿಸುವುದಾಗಿ ಅವರು ಹೇಳಿದ್ದಾರೆ. ಸಿಲಿಕಾನ್ ಸಿಟಿ ಪೊಲೀಸರ ಅನುಮತಿ ಇಲ್ಲದೆಯೂ ಸೋಮವಾರ ಕಾಂಗ್ರೆಸ್ ನಾಯಕರು ಒಗ್ಗೂಡಿ ಪ್ರತಿಭಟನೆ ನಡೆಸಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸುವುದು ಖಚಿತ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೊರೊನಾ ಮುಕ್ತರಾದರು ಮನೆಗೆ ಸೇರಿಸುತ್ತಿಲ್ಲ
ಹೈದರಾಬಾದ್, ಜೂ.29 : ಹೈದರಾಬಾದ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಮಹಾಮಾರಿ ಕೊರೊನಾ ವೈರಸ್ನಿಂದ ಸಂಪೂರ್ಣ ಗುಣಮುಖರಾಗಿದ್ದರೂ ಅವರ ರಕ್ತ ಸಂಬಂಧಿಕರು ತಮಗೆ ಸೋಂಕು ತಗುಲಬಹುದು ಎಂಬ ಭಯದಿಂದ ಅವರನ್ನು ಮನೆಗೆ ಸೇರಿಸುತ್ತಿಲ್ಲ ಎಂದು ಸೋಮವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗಾಂಧಿ ಆಸ್ಪತ್ರೆಯ ಕೋವಿಡ್-19 ನೋಡೆಲ್ ಅಧಿಕಾರಿ ಡಾ. ಪ್ರಭಾಕರ್ ರಾವ್ ಅವರ ಪ್ರಕಾರ, ಕೊರೊನಾದಿಂದ ಗುಣಮುಖರಾದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ಮನೆಗೆ ಕರೆದೊಯ್ಯಲು ಅವರ ಸಂಬಂಧಿಕರು ಒಪ್ಪುತ್ತಿಲ್ಲ. ಹೀಗಾಗಿ ಅವರನ್ನು ನೇಚರ್ ಕ್ಯೂರ್ ಆಸ್ಪತ್ರೆಯಲ್ಲಿರಸಲಾಗಿದೆ. ಮನೆಗೆ ಬಂದರೆ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ಭಯದಿಂದ ಗುಣಮುಖರಾದವರನ್ನು ಅವರ ಸಂಬಂಧಿಕರು ಅಥವಾ ಕುಟುಂಬದವರು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಇಂತಹ 60 ಪ್ರಕರಣಗಳಿದ್ದವು. ಈ ಪೈಕಿ ನಾವು ಕೆಲವರಿಗೆ ತಿಳುವಳಿಕೆ ಹೇಳಿ, ಒಪ್ಪಿಸಿದ್ದೇವೆ. ಇನ್ನು 50 ಮಂದಿ ನೇಚರ್ ಕ್ಯೂರ್ ಆಸ್ಪತ್ರೆಯಲ್ಲಿದ್ದಾರೆ ಎಂದು ಪ್ರಭಾಕರ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರಾಗಿ ವಿಕಾಸ್
ಮಂಗಳೂರು, ಜೂ.29 : ನಗರದ ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮನ ಆಯುಕ್ತರಾದ ಡಾ.ಪಿ.ಎಸ್ ಹರ್ಷ ಅವರು ಈಗಾಗಲೇ ವಾರ್ತಾ ಇಲಾಖೆಯ ಆಯುಕ್ತರಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಇಂದು ಬೆಳಿಗ್ಗೆ ನೂತನ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಕಾಸ್ ಕುಮಾರ್ ಅವರು ಹಿಂದೆ ಚಿಕ್ಕಮಗಳೂರು ಎಸ್ಪಿಯಾಗಿ, ಆಂತರಿಕ ಭದ್ರತೆ ವಿಭಾಗ, ನಕ್ಸಲ್ ನಿಗ್ರಹದಳದ ಡಿಐಜಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಟ್ರಂಪ್ ಬಂಧನಕ್ಕೆ ಇರಾನ್ ವಾರೆಂಟ್
ತೆಹ್ರನ್, ಜೂ.29 : ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕಾಗಿ ಇರಾನ್ ವಾರೆಂಟ್ ಹೊರಡಿಸಿದ್ದು, ಇಂಟರ್ ಪೋಲ್ ಸಹಾಯ ಕೇಳಿದೆ. ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜನವರಿಯಲ್ಲಿ ಡ್ರೋನ್ ದಾಳಿ ನಡೆಸಿ ಜನರಲ್ ಸುಲೈಮನ್ ಮತ್ತಿತರ ಸಾವಿಗೆ ಕಾರಣವಾಗಿರುವ ಡೊನಾಲ್ಡ್ ಟ್ರಂಪ್ ಹಾಗೂ ಇತರ ವ್ಯಕ್ತಿಗಳ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ಒಬ್ಬರು ಇಂದು ಹೇಳಿದ್ದಾರೆ. ಜನವರಿಯಲ್ಲಿ ಮೂರು ದಾಳಿ ನಡೆಸಿ ಜನರಲ್ ಆಗಿದ್ದ ಖಾಸಿಂ ಸುಲೈಮನ್ ಹತ್ಯೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಹಾಗೂ ಇತರ 30ಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳನ್ನಾಗಿ ಇರಾನ್ ಮಾಡಿದ್ದು, ಹತ್ಯೆ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ ಎಂದು ತೆಹ್ರನ್ ಪ್ರಾಸಿಕ್ಯೂಟರ್ ಅಲಿ ಅಲ್ಕಾಸಿಮೆಹ್ರ್ ಹೇಳಿರುವುದಾಗಿ ಐಎಸ್ಎನ್ ಎ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ. ಟ್ರಂಪ್ ಹೊರತುಪಡಿಸಿ ಬೇರೆಯವರನ್ನು ಅಲ್ಕಾಸಿಮೆಹರ್ ಗುರುತಿಸಲಿಲ್ಲ, ಆದರೆ, ಟ್ರಂಪ್ ಅಧ್ಯಕ್ಷ ಸ್ಥಾನ ಮುಗಿದ ನಂತರವೂ ಇರಾನ್ ತನ್ನ ಪ್ರಕರಣವನ್ನು ಮುಂದುವರೆಸಲಿದೆ ಎಂದು ಅಲಿ ಹೇಳಿದ್ದಾರೆ.
ರಫೇಲ್ ಯುದ್ಧ ವಿಮಾನಗಳ ನಿರೀಕ್ಷೆ
ನವದೆಹಲಿ, ಜೂ.29 : ಮೊದಲ ಹಂತದಲ್ಲಿ ಆರು ರಫೇಲ್ ಯುದ್ಧ ವಿಮಾನಗಳು ಜು.27ರೊಳಗೆ ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ. ಇದು ಭಾರತೀಯ ವಾಯುಪಡೆಯ ಯುದ್ಧ ಸಾಮಥ್ರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳ ಜೊತೆಗೆ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾದ ಬಳಿಕ ಉಭಯ ದೇಶಗಳ ನಡುವಣ ಪರಿಸ್ಥಿತಿ ಹದಗೆಟ್ಟಿರುವಂತೆಯೇ ವಾಯುಪಡೆ ಹೈ ಆಲರ್ಟ್ ಆಗಿದೆ. ಜೂನ್ 2ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲೆ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದು, ಫ್ರಾನ್ಸ್ನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗ ಇದ್ದರೂ ನಿಗದಿಯಾಗಿರುವಂತೆ ಭಾರತಕ್ಕೆ ಯುದ್ಧ ವಿಮಾನಗಳನ್ನು ತಲುಪಿಸಲಾಗುವುದು ಎಂದು ಅವರು ಹೇಳಿದ್ದಾರೆ.