ಸೋಮವಾರಪೇಟೆ, ಜೂ.29: ಕೊರೊನಾ ಸೋಂಕು ಹಿನ್ನೆಲೆ ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿರುವ ಆಲೂರುಸಿದ್ದಾಪುರ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮಸ್ಥರೊಂದಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಕಾನ್ಫರೆನ್ಸ್ ಕಾಲ್ ಮೂಲಕ ಮಾತುಕತೆ ನಡೆಸಿ, ಧೈರ್ಯ ತುಂಬಿದರು.
ತಮ್ಮ ಕಚೇರಿಯಿಂದ ದೊಡ್ಡಳ್ಳಿ ಗ್ರಾಮಸ್ಥರೊಂದಿಗೆ ಮೊಬೈಲ್ ಮೂಲಕ ಮಾತುಕತೆ ನಡೆಸಿದ ಶಾಸಕರು, ನಿಮ್ಮೊಂದಿಗೆ ನಾವುಗಳೂ ಇದ್ದೇವೆ. ಎಂತಹ ಸಂದರ್ಭದಲ್ಲೂ ಧೈರ್ಯಗೆಡುವದು ಬೇಡ. ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ದೊಡ್ಡಳ್ಳಿ ಗ್ರಾಮಸ್ಥರು ಶಾಸಕರೊಂದಿಗೆ ಮಾತನಾಡಿ, ಕೃಷಿ ಕಾರ್ಯಗಳು ಕೈಗೊಳ್ಳಬೇಕಾದ ಇಂತಹ ಸಂದರ್ಭದಲ್ಲಿ ಕಂಟೈನ್‍ಮೆಂಟ್ ಏರಿಯಾದ ಕೃಷಿಕರಿಗೆ ತೊಂದರೆಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕೃಷಿಗೆ ಬೇಕಾದ ಗೊಬ್ಬರಗಳನ್ನು ಸ್ಥಳೀಯ ವಿಎಸ್‍ಎಸ್‍ಎನ್‍ಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗುವದು. ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.
ಗ್ರಾಮೀಣ ಪ್ರದೇಶದ ಕಂಟೈನ್‍ಮೆಂಟ್ ಏರಿಯಾದಿಂದ ಆಟೋಗಳ ಮೂಲಕ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಆಟೋ ಶುಲ್ಕವನ್ನು ಗ್ರಾಮ ಪಂಚಾಯಿತಿ ಮೂಲಕ ಭರಿಸುವ ಬಗ್ಗೆಯೂ ಕ್ರಮ ವಹಿಸಲಾಗುವದು ಎಂದರು.
ಉಳಿದಂತೆ ಕಂಟೈನ್‍ಮೆಂಟ್ ಏರಿಯಾದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು, ಒದಗಿಸಬೇಕಾದ ಸೌಕರ್ಯಗಳ ಬಗ್ಗೆ ಸ್ಥಳೀಯರು ಶಾಸಕರ ಗಮನ ಸೆಳೆದರು.