ಕುಶಾಲನಗರ, ಜೂ. 29: ಕುಶಾಲನಗರ ಪಟ್ಟಣದಲ್ಲಿ ಸಂತೆ ನಿಷೇಧ ಮಾಡಿ ಆದೇಶ ಹೊರಡಿಸಿದರೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಲವರು ಸಂತೆ ವ್ಯಾಪಾರ ಮಾಡುತ್ತಿದ್ದ ದೃಶ್ಯ ಸೋಮವಾರ ಬೆಳಿಗ್ಗೆ ಕಂಡುಬಂತು. ಕಳೆದ ಕೆಲವು ಸಮಯದಿಂದ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಾರದಲ್ಲಿ ಮೂರು ದಿನ ಕಾಲ ಸಂತೆ ವ್ಯಾಪಾರ ಪ್ರಾರಂಭಗೊಂಡಿತ್ತು. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಮುಖ್ಯ ದ್ವಾರಕ್ಕೆ ಬೀಗ ಜಡಿದ ಹಿನೆÀ್ನಲೆಯಲ್ಲಿ ಹಲವು ತರಕಾರಿ ವ್ಯಾಪಾರಿಗಳು ಆವರಣದ ಮುಂಭಾಗ ಹೆದ್ದಾರಿ ಬದಿಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ವ್ಯಾಪಾರ ಪ್ರಾರಂಭಗೊಳಿಸುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾದ ಪರಿಸ್ಥಿತಿ ಗೋಚರಿಸಿತು.

ಪಿರಿಯಾಪಟ್ಟಣ, ಕೊಣನೂರು ಸುತ್ತಮುತ್ತ ವ್ಯಾಪ್ತಿಯಿಂದ ಬಂದ ತರಕಾರಿ ತುಂಬಿದ ವಾಹನಗಳು ರಸ್ತೆ ಬದಿಯಲ್ಲಿ ನಿಂತು ತರಕಾರಿ ಇಳಿಸುತ್ತಿದ್ದ ಹಿನೆÀ್ನಲೆಯಲ್ಲಿ ಹೆದ್ದಾರಿ ಬದಿಯಲ್ಲಿ ಓಡಾಡುತ್ತಿದ್ದ ಜನರಿಗೂ ಇದರಿಂದ ಕಿರಿಕಿರಿ ಉಂಟಾಯಿತು. ನಂತರ ಮಾಹಿತಿ ತಿಳಿದ ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಅವರುಗಳನ್ನು ತೆರವುಗೊಳಿಸಲು ಕ್ರಮಕೈಗೊಂಡರು.