ಪಾಲಿಬೆಟ್ಟ, ಜೂ. 28: ಹುಂಡಿ ಪೈಸಾರಿ ಗ್ರಾಮವನ್ನು ಸೀಲ್ ಡೌನ್ ಮಾಡಿರುವ ಜಿಲ್ಲಾಡಳಿತ ಜನರಿಗೆ ಬೇಕಾದ ಅಗತ್ಯ ಆಹಾರ ಕಿಟ್‍ಗಳನ್ನು ವಿತರಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಮಾಲ್ದಾರೆ ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯ ಸಜಿ ಥೋಮಸ್ ಆರೋಪಿಸಿದ್ದಾರೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಿ ಹುಂಡಿ ಪೈಸಾರಿಯಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರಲ್ಲಿ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಸೀಲ್ ಡೌನ್ ಮಾಡಿದ್ದು, ಮನೆಯಿಂದ ಹೊರಗೆ ಬರಲು ಸಾಧ್ಯವಾಗದೆ ಜನರು ಸಂಕಷ್ಟಕ್ಕೊಳಗಾಗಿದ್ದಾರೆ.

ಕಾರ್ಮಿಕ ಕುಟುಂಬಗಳೇ ಅಧಿಕವಾಗಿರುವ ಗ್ರಾಮದಲ್ಲಿ ಸೀಲ್ ಡೌನ್ ಹಿನ್ನೆಲೆ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳು ದಿನನಿತ್ಯ ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ಕುಟುಂಬಗಳಿಗೆ ಆಹಾರದ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದಾರೆ.

56 ಕುಟುಂಬಗಳಲ್ಲಿ 300ಕ್ಕೂ ಹೆಚ್ಚು ಮಂದಿ ಕಾರ್ಮಿಕ ಕುಟುಂಬ ಗಳು ವಾಸವಿದ್ದು, ಆಹಾರ ಪದಾರ್ಥ ಗಳು ಸಿಗದೆ, ಕೊಂಡುಕೊಳ್ಳಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ .

ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿ ಕೂಲಿ ಕೆಲಸವೂ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದ ಪೈಸಾರಿ ನಿವಾಸಿಗಳಿಗೆ ಇದೀಗ ಸೀಲ್ ಡೌನ್‍ನಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಆರಂಭದಲ್ಲಿ ಅಧಿಕಾರಿಗಳು ಎಲ್ಲವೂ ಮನೆ ಬಾಗಿಲಿಗೆ ತಲುಪಿಸುವ ಭರವಸೆ ನೀಡಿ ಹೋದರು. ಆದರೆ ಇದುವರೆಗೆ ಯಾವುದೇ ಪರಿಹಾರವಾಗಲಿಲ್ಲ.

ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಕೂಡಲೇ ಹುಂಡಿ ಪೈಸಾರಿ ನಿವಾಸಿಗಳಿಗೆ ಆಹಾರ ಕಿಟ್ ಒದಗಿಸಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯ ನಿಯಾಸ್, ಪ್ರಮುಖರಾದ ಸಮೀರ್ ,ಮಹಮ್ಮದ್ ಅಲಿ, ರಫೀಕ್, ಉಮೇಶ್ ಸೇರಿದಂತೆ ಮತ್ತಿತರರು ಇದ್ದರು.

ವರದಿ: ಪುತ್ತಂ ಪ್ರದೀಪ್