ಮಡಿಕೇರಿ, ಜೂ. 27: ಸಂಪಾದನೆ ಮಾಡಲು ಎಲ್ಲಿಗೂ ತೆರಳುವಂತಿಲ್ಲ, ಸರಕಾರದಿಂದ ಯಾವ ಉಚಿತ ಪದಾರ್ಥಗಳನ್ನೂ ಕೊಡುವದಿಲ್ಲ. ಮೊದಲ ದಿನ ಉಚಿತ ಹಾಲು ಕೊಟ್ಟರು. ಸರಕಾರ ನಿಮ್ಮೊಂದಿಗಿದೆ ಎಂದರು. ಮಡಿಕೇರಿ ನಗರಸಭೆÉಯ ಅಧಿಕಾರಿಗಳು ಎರಡನೇ ದಿನವಾದ ಇಂದು ದೌಡಾಯಿಸಿದರು. ಏನೋ ಸಿಹಿ ಸುದ್ದಿ ಎಂದು ಭಾವಿಸಿದ ನಮಗೆ ಅಂಗಡಿಗಳ ಪಟ್ಟಿ ಕೊಟ್ಟರು. ಎಲ್ಲೂ ಹೊರ ಹೋಗಬೇಡಿ. ಈ ಅಂಗಡಿಗಳ ಮೊಬೈಲ್ ಸಂಖ್ಯೆಗಳಿಗೆ ಫೋನ್ ಮಾಡಿ ನಿಮಗೆ ಬೇಕಾದುದುನ್ನು ತರಿಸಿಕೊಳ್ಳಿ ಎಂದರು. ನಾವು ಭಾರೀ ಖುಷಿಯಿಂದ ಕೇಳಿದೆವು “ಎಲ್ಲ ಉಚಿತವೇ ಸಾರ್” ಇಲ್ಲ, ಎಲ್ಲದಕ್ಕೂ ಹಣಕೊಟ್ಟು ತರಿಸಿಕೊಳ್ಳಿ. ತರಕಾರಿಗೆ ಇಂತಹವರು, ದಿನಸಿಗೆ ಮತ್ತ್ತೊಬ್ಬರು, ಔಷಧಿಗೆ ಇನ್ನೊಬ್ಬರು, ಅಗತ್ಯ ವಸ್ತುವಾದ ಹಾಲಿಗೂ ಮಗದೊಬ್ಬರು, ಆಗಿಂದಾಗ ಹಣ ಕೊಟ್ಟು ತರಿಸಿಕೊಳ್ಳಿ” ಎಂದು ಮೆಲ್ಲನೆ ಸ್ಥಳದಿಂದ ಜಾರಿಕೊಂಡರು- ಈ ಬಗ್ಗೆ ಮಡಿಕೇರಿಯ ಗೌಳಿಬೀದಿಯ ನಿವಾಸಿಗಳು “ಶಕ್ತಿ”ಯೊಂದಿಗೆ ತಮ್ಮ ಅಳಲನ್ನು ಇಂದು ತೋಡಿಕೊಂಡರು. “ಸಾರ್, ಇಂದಿನ ಪತ್ರಿಕೆಗಳಲ್ಲಿ ಜಿಲ್ಲಾಡಳಿತದಿಂದ ಉಚಿತ ಸಾಮಗ್ರಿ ವಿತರಿಸಲಾಗುತ್ತಿದೆ” ಎಂಬ ಹೇಳಿಕೆ ಹುಸಿಯಾಗಿದೆ ಎಂದು ನೊಂದು ನುಡಿದರು. ಈ ಬಗ್ಗೆ ನಗರ ಸಭಾ ಸಿಬ್ಬಂದಿ ಸಮಜಾಯಷಿಕೆ ನೀಡಿ ಸರಕಾರವೇ ಉಚಿತ ನೀಡದಿರಲು ನಿರ್ದೇಶಿಸಿದೆ ಎಂದು ಹೇಳಿ ತೆರಳಿದು ದಾಗಿ ನಿವಾಸಿಗಳು ನುಡಿದರು. ಪೆನ್ಶನ್ ಲೇನ್‍ನಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿತ್ತು. ಆ ಸ್ಥಳದಲ್ಲಿ ಕೇವಲ 50 ಅಡಿ ಸೀಲ್ ಮಾಡಲಾಗಿದೆ. ಆದರೆ, ಅತಿ ದೂರದಲ್ಲಿ ಕೆಳಭಾಗದಲ್ಲಿರುವ ಗೌಳಿ ಬೀದಿಯ ಪ್ರವೇಶ ದ್ವಾರದಲ್ಲಿ ಸೀಲ್ ಡೌನ್ ಮಾಡಿರುವÀದು ತೀರಾ ಅವೈಜ್ಞಾನಿಕ ಎಂದು ನಿವಾಸಿಗಳ ಪರ ಹಾಲು ವಿತರಕರಾದ ಗಂಗಾಧರ್ ವಿವರಿಸಿದರು.(ಮೊದಲ ಪುಟದಿಂದ) ನಾನು ಹಾಲು ವಿತರಿಸಬಾರದಂತೆ; ಬೇರೆ ಕಡೆಯಿಂದ ಪಟ್ಟಿಯಲ್ಲ್ಲಿರುವ ಹಾಲು ವರ್ತಕ ರಿಂದಲೇ ಎಲ್ಲರೂ ಹಾಲು ಕೊಳ್ಳಬೇಕಂತೆ- ಇದು ಯಾವ ನ್ಯಾಯ? ನಾವು ಬದುಕುವದು ಹೇಗೆ ಎಂದು ಗಂಗಾಧರ್ ತಿಳಿಸಿದರು. ನಮ್ಮಲ್ಲಿ ಅವತ್ತವತ್ತಿನ ಸಂಪಾದನೆ ಯಿಂದ ಬದುಕುವವರೇ ಹೆಚ್ಚಾಗಿದ್ದಾರೆ. ಎರಡನೇ ದಿನಕ್ಕೇ ನಾವು ಸಂಕಷ್ಟಕ್ಕೆ ಒಳಗಾಗಿದ್ದೇವೆ. ಇನ್ನು 28 ದಿನ ಹೀಗೆ ಕಳೆಯಬೇಕೆಂದರೆ ನಮ್ಮ ಭವಿಷ್ಯ ಅಯೋಮಯವಾಗಲಿದೆ. ಇತ್ತ ಸಂಪಾದನೆಯೂ ಇಲ್ಲ. ಅತ್ತ ಸರಕಾರದಿಂದ ಸಹಾಯವೂ ಇಲ್ಲ ಎಂದರೆ ನಾವು “ಬದುಕಿದ್ದೂ ಸತ್ತಂತೆಯೇ” ಇರಬೇಕಾಗುತ್ತದೆ. ಈ ಬಗ್ಗೆ ಈಗಾಗಲೇ ಕೊಡಗಿನ ಶಾಸಕರುಗಳಿಗೆ ದೂರವಾಣಿ ಮೂಲಕ ತಿಳಿಸಿದ್ದೇವೆ. ನೆರವು ದೊರಕಬಹುದು ಎನ್ನುವ ಆಶಾಭಾವನೆಯಲ್ಲಿದ್ದೇವೆ. ಮೊದಲು ಅವೈಜ್ಞಾನಿಕ ಸೀಲ್ ಡೌನ್ ಪುನರ್ ಪರಿಶೀಲಿಸಿ ಸರಿಪಡಿಸಲಿ ಎಂದು ನಿವಾಸಿಗಳು ಆತಂಕದಿಂದ ನುಡಿದರು. ಇದೇ ರೀತಿಯ ಪರಿಸ್ಥಿತಿ ಜಿಲ್ಲೆಯ 19 ಸೀಲ್ ಡೌನ್ ಆದ ಪ್ರದೇಶಗಳ ನಿವಾಸಿಗಳಿಂದ “ಶಕ್ತಿ” ಗೆ ಕೇಳಿ ಬಂದ ಅಸಹಾಯಕತೆಯ ಧ್ವನಿಯಾಗಿದೆ.

ಸೋಮವಾರಪೇಟೆ ವರದಿ: ಪಟ್ಟಣ ಸಮೀಪದ ಕರ್ಕಳ್ಳಿ ಬಳಗುಂದ ಗ್ರಾಮವನ್ನು ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಲಾಗಿದ್ದು, ಅಲ್ಲಿನ ಸಾರ್ವಜನಿಕರು ಅಗತ್ಯ ವಸ್ತುಗಳು ದೊರಕದೇ ಪರದಾಟ ಅನುಭವಿಸುವಂತಾಗಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಬೇಳೂರು ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿಗಳ ಜಂಕ್ಷನ್ ಆಗಿರುವ ಬಳಗುಂದ ಕರ್ಕಳ್ಳಿ ಗ್ರಾಮ ವ್ಯಾಪ್ತಿಯ 411 ಮನೆಗಳನ್ನು ಕ್ಲಸ್ಟರ್ ಝೋನ್ ವ್ಯಾಪ್ತಿಯೊಳಗೆ ಸೇರಿಸಿ, ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ಡಲಾಗಿದ್ದು, ಅಗತ್ಯ ವಸ್ತುಗಳನ್ನು ಪಡೆಯಲೂ ಸಹ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿ, ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ಡಿದ ಅಧಿಕಾರಿಗಳು ನಂತರದ ವ್ಯವಸ್ಥೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಯಾವದೇ ಮುತುವರ್ಜಿ ವಹಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳನ್ನು ಹೊರಹಾಕುತ್ತಿದ್ದಾರೆ.

ಇಂದು ಬೆಳಗ್ಗಿನಿಂದ ಯಾವದೇ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ಹಾಲು ಸರಬರಾಜು ಆಗಿಲ್ಲ. ಇದರಿಂದಾಗಿ ಮಕ್ಕಳು, ರೋಗಿಗಳು ಸಮಸ್ಯೆಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಯಂತ್ರಿತ ಪ್ರದೇಶ ಎಂದು ಘೋಷಿಸಿದ ಅಧಿಕಾರಿಗಳು, ಇಲ್ಲಿನವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಲು ಮುಂದಾಗಿಲ್ಲ. ಈ ಬಗ್ಗೆ ಗ್ರಾ.ಪಂ. ಅಧಿಕಾರಿಗಳನ್ನು ಕೇಳಿದರೆ ಪಂಚಾಯಿತಿಯಲ್ಲಿ ಹಣವಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ತಾಲೂಕು ತಹಸೀಲ್ದಾರ್ ಗೋವಿಂದರಾಜು ಅವರನ್ನು ಸಂಪರ್ಕಿಸಿದ ಸಂದರ್ಭ, ಕಂಟೈನ್‍ಮೆಂಟ್ ಏರಿಯಾದ ಮಂದಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ವೆಂಡರ್‍ಗಳನ್ನು ನಿಯೋಜಿಸಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯವರು ವೆಂಡರ್‍ಗಳನ್ನು ಗುರುತಿಸಲಿದ್ದಾರೆ. ಇವರಿಗೆ ಮಾತ್ರ ಪೊಲೀಸ್ ಇಲಾಖೆ ಪಾಸ್ ನೀಡಲಿದ್ದು, ಕಂಟೈನ್‍ಮೆಂಟ್ ಏರಿಯಾದಲ್ಲಿರುವ ಮಂದಿ ತಮಗೆ ಬೇಕಾದ ವಸ್ತುಗಳ ಪಟ್ಟಿ ಮತ್ತು ಹಣ ನೀಡಿದರೆ, ವಸ್ತುಗಳನ್ನು ತಲುಪಿಸ ಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಂಟೈನ್‍ಮೆಂಟ್ ಏರಿಯಾಕ್ಕೊಳಪಡುವ ಎಲ್ಲಾ ಮನೆಗಳಿಗೆ ಕರಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳು, ಬಿಲ್ ಕಲೆಕ್ಟರ್, ಪಿಡಿಓ ಹಾಗೂ ವೆಂಡರ್‍ಗಳ ಮಾಹಿತಿ ಇರುತ್ತದೆ. ಅವರನ್ನು ಸಂಪರ್ಕಿಸಿ ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಗೋವಿಂದರಾಜು ಮಾಹಿತಿ ನೀಡಿದ್ದಾರೆ.