ಮಡಿಕೇರಿ, ಜೂ. 27: ಎರಡು ವರ್ಷಗಳಿಂದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದ ಡಾ. ಸುಮನ್ ಡಿ. ಪಣ್ಣೇಕರ್ ಅವರು ವರ್ಗಾವಣೆಯೊಂದಿಗೆ ನಿರ್ಗಮಿ ಸುವುದರೊಂದಿಗೆ, ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕ್ಷಮ ಮಿಶ್ರಾ ಅವರು ಈ ಸಂಜೆ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಗಳು ಕೊಡಗಿನಲ್ಲಿ ಉತ್ತಮ ಸೇವೆ ಯೊಂದಿಗೆ ಇಲಾಖೆಗೆ ಮೇಲ್ಪಂಕ್ತಿ ಯಾಗಿದ್ದು, ಇಲಾಖೆಯಲ್ಲಿ ಆಡಳಿತಾತ್ಮಕ ಸುಧಾರಣೆಯೊಂದಿಗೆ ಸಿಬ್ಬಂದಿಗಳಲ್ಲಿ ಕಾರ್ಯಕ್ಷಮತೆ ಹೆಚ್ಚಿಸಿದ್ದಾರೆ. ಆ ದಿಸೆಯಲ್ಲಿ ತಾವು ಕಾನೂನು ಮತ್ತು ಸುವ್ಯವಸ್ಥೆಯೊಂದಿಗೆ ಅಪರಾಧಗಳನ್ನು ತಡೆಗಟ್ಟುವಲ್ಲಿ ಪ್ರಯತ್ನ ನಡೆಸುವುದಾಗಿ ನುಡಿದರು. ಅಲ್ಲದೆ ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳ ಸಹಿತ ಜಿಲ್ಲೆಯ ಜನತೆಯ ಸಹಕಾರವನ್ನು ಈ ಸಂದರ್ಭದಲ್ಲಿ ಬಯಸುವುದಾಗಿ ಮಾರ್ನುಡಿದರು. ಉತ್ತರಪ್ರದೇಶ ಮೂಲದವ ರಾಗಿದ್ದು ಐಪಿಎಸ್ ಅಧಿಕಾರಿಯಾ ಗಿರುವ ಕ್ಷಮ ಅವರ ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿ ಕೂಡ ಭಾರತೀಯ ಆಡಳಿತ ಸೇವಾ ಅಧಿಕಾರಿಗಳಾಗಿ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಮೊದಲು ಪ್ರೊಬೆಷನರಿ ಅವಧಿ ಯೊಂದಿಗೆ ಬೆಂಗಳೂರಿನಲ್ಲಿ ಒಂದು ವರ್ಷ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುವ ಮೂಲಕ ಪ್ರಥಮವಾಗಿ

(ಮೊದಲ ಪುಟದಿಂದ) ಕೊಡಗು ಪೊಲೀಸ್ ವರಿಷ್ಠಾಧಿಕಾರಿಯಾಗಿ ಸ್ವತಂತ್ರ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ.ನಿರ್ಗಮಿತ ಎಸ್ಪಿ ಡಾ. ಸುಮನ್ ಡಿ. ಪಣ್ಣೇಕರ್ ಅವರು ನೂತನ ವರಿಷ್ಠಾಧಿಕಾರಿ ಹಾಗೂ ಎಲ್ಲ ಪೊಲೀಸ್ ಉಪಅಧೀಕ್ಷರು, ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು, ಜಿಲ್ಲಾ ಸಶಸ್ತ್ರಪಡೆ ಹಾಗೂ ಕೇಂದ್ರ ಕಚೇರಿ ಸಿಬ್ಬಂದಿಗಳಿಂದ ಆತ್ಮೀಯವಾಗಿ ಬೀಳ್ಕೊಡಲ್ಪಟ್ಟರು. ಈ ಸಂದರ್ಭ ಎಲ್ಲರಿಗೂ ಹಸ್ತಲಾಘÀವದೊಂದಿಗೆ ತಮ್ಮ ತಮ್ಮ ಪಾಲಿನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಇಲಾಖೆಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿ ಹೇಳಿದರಲ್ಲದೆ ನೂತನ ಪೊಲೀಸ್ ಅಧೀಕ್ಷಕರಿಗೆ ಎಲ್ಲ ರೀತಿ ಸಹಕಾರ ಮುಂದುವರಿಸಿಕೊಂಡು ಹೋಗಿ ಎಂದು ಭಾವನಾತ್ಮಕ ನುಡಿಯಾಡಿದರು. ಪೊಲೀಸ್ ಸಶಸ್ತ್ರ ದಳದಿಂದ ಇನ್ಸ್‍ಪೆಕ್ಟರ್ ರಾಚಯ್ಯ ನೇತೃತ್ವದಲ್ಲಿ ನೂತನ ಅಧಿಕಾರಿಯನ್ನು ಬರಮಾಡಿಕೊಳ್ಳುವುದರೊಂದಿಗೆ ನಿರ್ಗಮಿತ ಅಧಿಕಾರಿಗೆ ಬೀಳ್ಕೊಡುವ ಮೂಲಕ ಉಭಯತ್ರಯರಿಗೆ ಗೌರವ ರಕ್ಷೆ ನೀಡಲಾಯಿತು. ಈ ವೇಳೆ ಡಿವೈಎಸ್ಪಿಗಳಾದ ಬಿ.ಪಿ. ದಿನೇಶ್ ಕುಮಾರ್, ಜಯಕುಮಾರ್, ಶೈಲೇಂದ್ರ ಹಾಗೂ ವೃತ್ತ ನಿರೀಕ್ಷಕರುಗಳಾದ ಅನೂಪ್ ಮಾದಪ್ಪ, ದೀವಾಕರ್, ಪರಶಿವಮೂರ್ತಿ, ಕ್ಯಾತೇಗೌಡ, ನಂಜುಂಡೇಗೌಡ, ರಾಮಲಿಂಗರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.