ನವಮೋಧ್ಯಾಯ ಮುಂದುವರಿದಿದೆ: ಕಾವೇರಿಯ ಮಾಹಾತ್ಮೈ ಯನ್ನು ಸೂತ ಪುರಾಣಿಕರು ಶೌನಕಾದಿ ಮಹರ್ಷಿಗಳಿಗೆ ಹೀಗೆ ಹೇಳುತ್ತಾರೆ:-ಭಾಗಮಂಡಲದ ಪವಿತ್ರ ತ್ರ್ರಿವೇಣೀ ಸಂಗಮ ಕ್ಷೇತ್ರದಲ್ಲಿ ಸ್ನಾನದಿಂದಲೂ, ಪಿಂಡ ಪ್ರದಾನದಿಂದಲೂ, ಶಿವನ ಸ್ತೋತ್ರ ದಿಂದಲೂ, ದಾನದಿಂದಲೂ ಪಿತೃದೇವತೆಗಳು ತೃಪ್ತಿ ಹೊಂದುವರು., ಆಮಶ್ರಾದ್ಧವೆಂದೂ, ಪಾಕಶ್ರಾದ್ಧವೆಂದೂ ಎರಡು ತೆರನಾದ ಶ್ರಾದ್ಧವಿದೆ. ಪಾಕಶ್ರಾದ್ಧಕ್ಕಿಂತ ನೂರು ಪಾಲು ಆಮಶ್ರಾದ್ಧ ಶ್ರೇಷ್ಠವಾದುದು. ಆಮಶ್ರಾದ್ಧವೆಂದರೆ ಬೇಯಿಸದ ಆಹಾರದಿಂದ ಅಂದರೆ ಹಸಿ ಪದಾರ್ಥಗಳನ್ನಷ್ಟೇ ಬಳಸಿ ಮಾಡುವ ಶ್ರಾದ್ಧ, ಪಾಕಶ್ರಾದ್ಧವೆಂದರೆ ಅಡುಗೆ ಮಾಡಿ, ಬೇಯಿಸಿದ ಪದಾರ್ಥಗಳನ್ನು ಬಳಸಿ ಮಾಡುವ ಶ್ರಾದ್ಧ. ಪಾಕಶ್ರಾದ್ಧವನ್ನು ಗೃಹಸ್ಥರೂ, ಆಮಶ್ರಾದ್ಧವನ್ನು ಪ್ರಯಾಣಿಕರೂ ಮಾಡುವರು. ದೇಶಾಂತರದಿಂದ ಬಂದವರು ಕ್ಷೇತ್ರಗಳಲ್ಲಿ ದಕ್ಷಿಣಾ ಸಹಿತವಾದ ಆಮ ಶ್ರಾದ್ಧವನ್ನೇ ಮಾಡಬೇಕು. ದಕ್ಷಿಣಾ ರಹಿತವಾದ ಶ್ರಾದ್ಧವು ಆಸುರೀ ಶ್ರಾದ್ಧವೆನಿಸಿಕೊಳ್ಳುತ್ತದೆ. ದಾನವಿಲ್ಲದ ಶ್ರಾದ್ಧವೂ, ಹೋಮವೂ, ಜಪವೂ ನಿಷ್ಫಲವೇ ಸರಿ. ಸಮಸ್ತವೂ ದಾನದಿಂದ ಪೂರ್ಣವಾಗುವದರಿಂದ ದಾನವು ಶ್ರೇಷ್ಠವೆನಿಸಿಕೊಂಡಿದೆ. ಅಂದರೆ, ಮಾನವ ತನ್ನ ಮತ್ತು ತನ್ನ ಕುಟುಂಬದ ಪಾಪ ಕರ್ಮಗಳನ್ನು ಕಳೆದುಕೊಳ್ಳಬೇಕಾದರೆ ಸತ್ಪಾತ್ರರಿಗೆ, ಯೋಗ್ಯತೆ, ಅರ್ಹತೆಯುಳ್ಳವರಿಗೆ ದಾನ ಮಾಡಬೇಕು. ಏಕೆಂದರೆ ಓರ್ವ ದಾನ ಮಾಡಿದ ಕೂಡಲೇ ದಾನ ನೀಡಿದವರ ಅನೇಕ ಪಾಪಗಳು ಕ್ಷೀಣಗೊಳ್ಳುತ್ತವೆ. ದಾನ ಪಡೆದವರಿಗೆ ಆ ದೋಷಗಳು ಹಸ್ತಾಂತರವಾಗುತ್ತದೆ. ದಾನ ಪಡೆದ ವ್ಯಕ್ತಿ ತನ್ನ ನಿತ್ಯ ಧಾರ್ಮಿಕ ಕಾರ್ಯಗಳಿಂದ ಆ ಪಾಪಗಳನ್ನು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದಲ್ಲಿ ದಾನ ಪಡೆದವನು ತಾನೇ ಆ ಪಾಪ ಕರ್ಮ ಫಲವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಸಾಮಾನ್ಯವಾಗಿ ವ್ರತಾನುಷ್ಠನವುಳ್ಳವರು ಮಾತ್ರವೇ ಇಂತಹ ಕ್ರಿಯಾ ದಾನ ಸ್ವೀಕರಿಸುವದನ್ನು ಕಾಣಬಹುದು. ಉಳಿದಂತೆ ಸಾಮಾನ್ಯ ಬಡ ವ್ಯಕ್ತಿಗಳಿಗೆ ನೀಡುವ ನೆರವು ಅದು ಸಹಾಯ ಹಸ್ತದ ದಾನವಷ್ಟೆ. ಇಂತಹ ನೆರವನ್ನು ಅಗತ್ಯವಿದ್ದವರಿಗೆ ನೀಡುವದರಿಂದ ನೀಡಿದ ವ್ಯಕ್ತಿಗೆ ಖಂಡಿತ ಒಳಿತಾಗುತ್ತದೆ. ಅಲ್ಲದೆ, ತಮಗೆ ಧನ, ವಸ್ತುಗಳ ಅಗತ್ಯವಿದ್ದವರು ಉಳ್ಳವರಿಂದ ಸಾಮಗ್ರಿ ನಗದು ಹಣ ಪಡೆದರೆ ಹಾಗೆ ಪಡೆದವರಿಗೆ ಕೂಡ ಯಾವದೇ ದೋಷವಿಲ್ಲ. ಅವರೂ ಕೂಡ ಸಂತೃಪ್ತಿ ಹೊಂದಿ ಜೀವನದಲ್ಲಿ ಅಭಿವೃದ್ಧಿ ಸಾಧಿಸಿಕೊಳ್ಳುತ್ತಾರೆ. ಅಲ್ಲಿ ದಾನದ ಪಾತ್ರಕ್ಕಿಂತ ನೆರವಿನ ಪಾತ್ರ ಮುಖ್ಯವೆನಿಸಿಕೊಳ್ಳುತ್ತದೆ. ಸಹಾಯ ಮಾಡಿದವರು ಮಾನವೀಯತೆಯಿಂದ, ಉದಾರತೆಯಿಂದ ನೆರವು ನೀಡಿರುತ್ತಾರೆಯೇ ಹೊರತು ತಮ್ಮ ಪಾಪಗಳನ್ನು ಕಳೆದುಕೊಳ್ಳುವ ಸಂಕಲ್ಪ ಹೊತ್ತು ನೆರವು ನೀಡಿರುವದಿಲ್ಲ. ಪಡೆದವರೂ ಕೂಡ ತಮ್ಮ ಹಾಗೂ ಕುಟುಂಬದ ನಿರ್ವಹಣೆಗೋಸ್ಕರ ಈ ನೆರವು ಪಡೆದಿರುವದರಿಂದ ಅವರಿಗೆ ಲವಲೇಷ ದೋಷವೂ ಅಂಟುವದಿಲ್ಲ. ಇನ್ನೊಂದೆಡೆ, ದಾನವಿಲ್ಲದ ಶ್ರಾದ್ಧವೂ, ಹೋಮವೂ, ಜಪವೂ ನಿಷ್ಫಲವೆನಿಸಿ ಕೊಳ್ಳುತ್ತದೆ. ಸಮಸ್ತವೂ ದಾನದಿಂದ ಪೂರ್ಣವಾಗುವದರಿಂದ ದಾನವು ಶ್ರೇಷ್ಠವಾಗಿರುತ್ತದೆ. ಒಂದು ಹಿಡಿ ಅನ್ನವನ್ನು ದಾನ ಮಾಡಿದರೂ ಸ್ವರ್ಗಫಲ ಸಿಗುವದು. ಲೋಕದಲ್ಲಿ ಪಾಪ-ಪುಣ್ಯಗಳ ಫಲವು ಪ್ರತ್ಯಕ್ಷವಾಗಿ ಕಂಡುಬರುತ್ತದೆ. ಪಾಪ-ಪುಣ್ಯಗಳ ಪರಿಣಾಮವಾಗಿ ದೇವತೆಗಳು, ದಾನವರು, ಮಾನವರು, ತಿರ್ಯಗ್ಜಂತುಗಳು (ತಿರುಗಾಡುವ ಪ್ರಾಣಿಗಳು), ಹುಳುಗಳು, ಪಕ್ಷಿಗಳು ಎಂದು ನಾನಾ ಯೋನಿಗಳಲ್ಲಿ ಜನಿಸುತ್ತಾರೆ. ನಾನಾ ವ್ಯಾಧಿಗಳ ಬಾಧೆ ತಲೆದೋರುತ್ತದೆ. ಮರಣವು ಅನಿವಾರ್ಯ. ಅದಕ್ಕಿಂತ ಮುನ್ನ ಬಾಲ ವೃದ್ಧತ್ವ ದೋಷವೂ, ಮೂಢತನವೂ, ಕುಂಟತನವೂ ಉಂಟಾಗಬಹುದು. ಒಂದೆಡೆ ಶ್ರೀಮಂತಿಕೆ, ಮತ್ತೊಂದೆಡೆ ಬಡತನ, ಅದೇ ರೀತಿ ಒಂದೆಡೆ ಪಾಂಡಿತ್ಯ, ಮತ್ತೊಂದೆಡೆ ಮೂಕತನ ಇದೆಲ್ಲ ಬರುತ್ತದೆ. ಈ ಕರ್ಮಭೂಮಿಯಲ್ಲಿ ನ್ಯಾಯ ಮಾರ್ಗದಿಂದ ಗಳಿಸಿದ ಸಂಪತ್ತನ್ನು ಸತ್ಪಾತ್ರದಲ್ಲಿ ದಾನ ಮಾಡುವವರೇ ಧನ್ಯರು. ಅವರೇ ಆತ್ಮಹಿತವನ್ನು ಸಾಧಿಸಿಕೊಳ್ಳುತ್ತಾರೆ. ತಾವು ಶ್ರಮಪಟ್ಟುಗಳಿಸಿದ ಸ್ವಲ್ಪ ದ್ರವ್ಯವನ್ನಾಗಲೀ, ಅಧಿಕ ದ್ರವ್ಯವನ್ನಾಗಲೀ, ಯೋಗ್ಯರಿಗೆ, ಅಗತ್ಯವುಳ್ಳವರಿಗೆÉ ಶ್ರದ್ಧೆಯಿಂದ ಕೊಟ್ಟರೆ ನೀಡಿದವರಿಗೆ ಹೆಚ್ಚಾದ ಫಲವು ಸಿಗುವದೆಂದು ಹೇಳುವರು. ಅನ್ನದಾನವು ದಾನಗಳ ಪೈಕಿ ಉತ್ತಮ ವಾದುದು. ಅನ್ನದಾನಿಯು ಮಾನವನಿಗೆ ಪ್ರೀತಿಯನ್ನುಂಟು ಮಾಡುತ್ತದೆ. ಅನ್ನದಾನಿಯು ಸರ್ವದಾನಿಯೆಂದೆನಿಸಿಕೊಳ್ಳು ತ್ತಾನೆ. ಜಲದಾನ ನೀಡಿದರೆ ಕೂಡ ಪ್ರತಿಫಲವಿದೆ. ಅದೇ ರೀತಿ, ಚಿನ್ನ, ಹಣ, ಆಭರಣ, ಗೋವು, ಧಾನ್ಯ, ಮನೆ, ರಥ, ಕುದುರೆ, ವಸ್ತ್ರ, ಭೂಮಿ- ಹೀಗೆ ವಿವಿಧ ರೀತಿಯ ದಾನಗಳನ್ನೂ ಶಕ್ತ್ಯಾನುಸಾರ ಮಾಡಬಹುದು. ಅದರಂತೆ ತನ್ನ ಪುತ್ರಿಯನ್ನು ವಿವಾಹ ಮಾಡಿ ಕೊಡುವದು ಕೂಡ ಕನ್ಯಾದಾನ ಎನಿಸುತ್ತದೆ. ವಿದ್ಯೆಯನ್ನು ಹೇಳಿ ಕೊಡುವದು ವಿದ್ಯಾದಾನ ಎಂದು ಕರೆಸಿಕೊಂಡಿದೆ. ಮಂತ್ರೋಪದೇಶವೂ ಮಂತ್ರದಾನವಾಗಿದೆ. ಮತ್ತೊಬ್ಬರಿಗೆ ಔಷಧಿಯನ್ನು ತೆಗೆದುಕೊಡುವದೂ ಔಷಧ ದಾನವೆನಿಸುತ್ತದೆ. ಕೊಡೆ, ಚಾಮರ, ಆಸನ, ಹಾಸಿಗೆ, ತಾಂಬೂಲ, ಹೂಮಾಲೆ, ಬೀಸಣಿಗೆ, ಕೃಷ್ಣಾಜಿನ, ಯಜ್ಞೋಪವೀತ ಇಂತಹುಗಳನ್ನು ಕೂಡ ಶ್ರಾದ್ಧ, ಹೋಮ, ಹವನ, ವಿಶೇಷ ಪೂಜೆಗಳ ಸಂದರ್ಭ ದಾನ ನೀಡಿ ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಾರೆ. ಕಾವೇರಿ ಕ್ಷೇತ್ರದಲ್ಲಿ ನಡೆಸುವ ಶ್ರಾದ್ಧಾದಿ ವಿವಿಧ ರೀತಿಯ ಧಾರ್ಮಿಕ ಪ್ರಕ್ರಿಯೆ ಸಂದರ್ಭ ವೇದಜ್ಞರಿಗೆ ನೀಡುವ ದಾನವೂ ನೀಡಿದವರಿಗೆ ಕ್ಷೇತ್ರದ ಸರ್ವತೀರ್ಥ ಫಲವನ್ನು ಒದಗಿಸುತ್ತದೆ.

ಗಂಗಾ ಗೋದಾವರೀ ಪುಣ್ಯಾ ಯಮುನಾ ನರ್ಮದಾ ನದೀ

ಸರಸ್ವತೀ ಕೃಷ್ಣವೇಣೀ ಗಂಡಕೀ ಹರಿವಲ್ಲಭಾ

ತಾಮ್ರಪರ್ಣೀ ಪಯೋಷ್ಣೀಚ ಸರಯೂ ತುಂಗಭದ್ರಿಕಾ

ಘೃತಮಾಲಾ ವೇಗವತೀ ಕಪಿಲಾ ಛೇದಕಾ ಸ್ಮøತಾ

ಇತ್ಯಾದ್ಯಾ ನಮ್ನಗಾಃ ಪುಣ್ಯಾಃ ಪೂರ್ವಾಪರ ಸಮುದ್ರಗಾಃ

ಸಾನ್ನಿಧ್ಯಂ ಕುರ್ವತೇ ತತ್ರ ಕಾವೇರ್ಯಾಂ ಸ್ವಾತ್ಮಶುದ್ಧಯೇ

ಗಂಗೆ, ಗೋದಾವರಿ, ಯಮುನೆ, ನರ್ಮದೆ, ಸರಸ್ವತಿ, ಕೃಷ್ಣವೇಣಿ (ಕೃಷ್ಣಾನದಿ), ಗಂಡಕಿ (ಗಂಗೆಯ ಉಪನದಿ),ಘೃತಮಾಲೆ ಹಾಗೂ ತಾಮ್ರಪರ್ಣಿ (ತಮಿಳ್ನಾಡು), ಪಯೋಷ್ಣಿ(ವಿದರ್ಭ), ಸರಯೂ, ತುಂಗಭದ್ರೆ, ವೇಗವತಿ (ಆಂಧ್ರ),ಕಪಿಲೆ (ಕಾವೇರಿಯ ಉಪನದಿ) ಛೇದಕೆ (ಸಿಂಧು) ಮೊದಲಾದ ಪೂರ್ವ, ಪಶ್ಚಿಮ ಸಮುದ್ರಗಳಿಗೆ ಸೇರುವ ನದಿಗಳು ತಮ್ಮ ಪರಿಶುದ್ಧಿಗಾಗಿ ಕಾವೇರಿಯಲ್ಲಿ ಸನ್ನಿಹಿತ ವಾಗಿರುವವು. ವಿವಿಧ ಸಂಕ್ರಮಣ ಕಾಲ ಗಳು, ದಕ್ಷಿಣಾಯನ ಮತ್ತು ಉತ್ತರಾಯಣ ಗಳು, ಪುಣ್ಯ ನಕ್ಷತ್ರಗಳಿಂದ ಕೂಡಿದ ತಿಥಿಗಳು, ಏಕಾದಶಿ ಮತ್ತು ಅಮಾವಾಸ್ಯೆಯ ದಿನಗಳು, ಸೂರ್ಯನು ರಾಹುವಿನಿಂದ ಹಿಡಿಯಲ್ಪಟ್ಟ ಗ್ರಹಣ ಕಾಲಗಳಲ್ಲಿಯೂ, ಅಲ್ಲದೆ, ಸೂರ್ಯನು ಆಶ್ವಯುಜ ಮಾಸದಲ್ಲಿರುವಾಗಲೂ, ಆಯಾ ಸಂದರ್ಭದ ಒಂದು ತಿಂಗಳ ಕಾಲ ಕಾವೇರಿಯಲ್ಲಿ ಸ್ನಾನ-ದಾನ ಮಾಡುವದು ಪಾಪಕ್ಷಯಕರವಾದ ಕಾಲ ಎಂದು ಹೇಳಲ್ಪಟ್ಟಿದೆ. ಸ್ನಾನ ಸಂದರ್ಭ ಈ ಸ್ತೋತ್ರವನ್ನು ಪಠಿಸಬೇಕು

ಜಯ ದೇವ ಮಹಾದೇವ ನೀಲಕಂಠ ಮಹೇಶ್ವರ

ಜಯ ಭೂತೇಶ ಕಾಲೇಶ ಜಯ ಶರ್ವ ಶಿವಾವ್ಯಯ

ಜಯ ಭಸ್ಮ ಪ್ರದಿಗ್ಧಾಂಗ ಜಯ ಚಂದ್ರ ವಿಭೂಷಣ

ಜಯೋಮಾಂಗಾರ್ಧದೇಹೇಶ ಜಯಗಂಗಾಜಲಾಶ್ರಯ

ಜಯಕಲ್ಯಾಣದೇಷ್ಟಾನಾಂ ಜಯಭಕ್ತಾರ್ತಿನಾಶನ

ಜಯ ವಿಶ್ವಪತೇ ಶಂಭೋ ಜಯ ನಾಗ ವಿಭೂಷಣ

ನಮಸ್ಸÀಹಸ್ರಶಿರಸೇ ಸಹಸ್ರಚರಣಾಯಚ

ನಮಸ್ಸಹಸ್ರಹಸ್ತಾಯ ಸಹಸ್ರಾಕ್ಷ ನಮೋಸ್ತುತೇ

ಏಕಾದ್ಯನಂತಾತೀತಾಯ ನಮಸ್ಸರ್ವಾಂತರಾತ್ಮನೇ

ಶಿವಾಯೇಶಾಯ ಶರ್ವಾಯ ಶಂಕರಾಯ ನಮೋಸ್ತುತೇ

ರುದ್ರಾಯೋಗ್ರಾಯ ಭೀಮಾಯ ಶಾಶ್ವತಾಯಾಮೃತಾಯಚ

ಭರ್ಗಾಯೋಂಕಾರರೂಪಾಯ ವಾಸುದೇವಾಯತೇ ನಮಃ

ಸದ್ಯೋಜಾತಾಯ ಶಾಂತಾಯ ಸಚ್ಚಿದಾನಂದ ಮೂರ್ತಯೇ

ಮಹಾವಾಕ್ಯಾರ್ಥ ತತ್ವಾಯ ನಮಃ ಪಂಚಾಕ್ಷರಾತ್ಮನೇ

ನಮೋ ನಮಃ ಪಾಪಹರಾಯ ಶಂಭವೇ ನಮೋ ನಮಶ್ಚಂದ್ರಕಲಾಧರಾಯ

ನಮೋ ನಮಃ ಸರ್ವ ಹೃದಿಸ್ಥಿತಾಯ ನಮೋ ನಮೋ ವೇದ ವಿಭೂಷಣಾಯ

ಸ್ತೋತ್ರೇಣಾನೇನ ಯೇರ್ಚಂತಿ ಭಕ್ತಿತಃ ಪುರುಷೋತ್ತಮಂ

ದಿವ್ಯರೂಪಾಃ ಪರಂ ಲೋಕಂ ಯಾಂತಿ ತೇ ಪುಣ್ಯ ಕೃತ್ತಮಃ

ಶಿವಃ ಸ್ಥಾಣುರುಮಾಪರ್ಣಾಹಾಹಾಹೀಹೀತಿವಾದಿನಃ

ಮಾಹಾತ್ಮ್ಯಂ ಭುವನೇ ತೇಷಾಂ ಕೋನು ವರ್ಣಯಿತುಂ ಕ್ಷಮಃ

ಪೂಜ್ಯನೇ ಮಹಾದೇವನೆ, ಕಪ್ಪಾದ ಕತ್ತುಳ್ಳವನೇ ಮಹೇಶ್ವರನೇ ನಿನಗೆ ಜಯವಾಗಲಿ. ಪ್ರಾಣಿಗಳ ಒಡೆಯನೇ ಕಾಲಾಧಿಪನೆ ಜಯವಾಗಲಿ. ಶರ್ವನೇ ಶಿವನೇ ನಾಶರಹಿತನೇ ಜಯವಾಗಲಿ. ಭಸ್ಮದಿಂದ ಬಳಿಯಲ್ಪಟ್ಟ ಶರೀರವುಳ್ಳವನೇ ಚಂದ್ರಾಭರಣನೇ ಪಾರ್ವತಿಯ ದೇಹಾರ್ಧದ ಒಡೆಯನೇ ಗಂಗಾಜಲಕ್ಕೆ ಆಧಾರಭೂತನೇ ಭಕ್ತರಿಗೆ ಕ್ಷೇಮದಾಯಕನೇ ಭಕ್ತರ ಕಷ್ಟ ನಿವಾರಕನೇ ನಿನಗೆ ಜಯವಾಗಲಿ. ಪ್ರಪಂಚದ ಒಡೆಯನೇ ಶಂಭುವೇ ಸರ್ಪಭೂಷಣನೇ ನಿನಗೆ ಜಯವಾಗಲಿ. ಸಾವಿರ ತಲೆಗಳುಳ್ಳವನೇ ನಿನಗೆ ನಮಸ್ಕಾರವು. ಸಹಸ್ರ ಕಾಲುಗಳುಳ್ಳವನೂ ಸಹಸ್ರ ಕೈ ಕಣ್ಣುಗಳುಳ್ಳವನೂ ಆದ ನಿನಗೆ ನಮಸ್ಕಾರವು. ಏಕತೆಯಿಂದ ಪ್ರಾರಂಭ ಗೊಂಡು ಅನಂತವನ್ನೂ ಮೀರಿದ ಮತ್ತು ಸರ್ವಾಂತರ್ಯಾಮಿ ಯಾದ ನಿನಗೆ ನಮಸ್ಕಾರವು. ಶಿವನಿಗೂ ಈಶನಿಗೂ ಶರ್ವನಿಗೂ ಶಂಕರನಿಗೂ ನಮಸ್ಕಾರವು. ರುದ್ರನೂ ಉಗ್ರನೂ ಭೀಮನೂ ಶಾಶ್ವತನೂ ಅಮೃತನೂ ಭರ್ಗನೂ ಓಂಕಾರರೂಪನೂ ವಾಸುದೇವನೂ ಆದ ನಿನಗೆ ನಮಸ್ಕಾರವು. ಸದ್ಯೋಜಾತನೂ ಶಾಂತನೂ ಸಚ್ಚಿದಾನಂದ ಸ್ವರೂಪಿಯೂ ಮಹಾ ವಾಕ್ಯಾರ್ಥ ತತ್ತ್ವಸ್ವರೂಪನೂ ಪಂಚಾಕ್ಷರೀ ಮಂತ್ರಸ್ವರೂಪಿಯೂ ಆದ ನಿನಗೆ ನಮಸ್ಕಾರವು. ಪಾಪ ಪರಿಹಾರಕನಾದ ಶಂಭುವಿಗೆ ನಮೋನಮಃ. ವೇದಭೂಷಣನಿಗೆ ನಮೋನಮಃ. ಈ ಸ್ತೋತ್ರದಿಂದ ಯಾರು ಪುರುಷೋತ್ತಮನಾದ ಈಶ್ವರನನ್ನು ಭಕ್ತಿಯಿಂದ ಪೂಜಿಸುವರೋ ಅವರು ಅತಿ ಪುಣ್ಯಶಾಲಿಗಳಾಗಿ ದಿವ್ಯರೂಪವನ್ನು ಧರಿಸಿ ಉತ್ತಮ ಲೋಕವನ್ನು ಹೊಂದುವರು. ಶಿವೇಶ್ವರ ಲಕ್ಷ್ಮೀ ಪಾರ್ವತೀ ಸ್ವರೂಪಳಾದ ಹಾಹಾಹೀಹೀ ಎಂಬ ಬೀಜಾಕ್ಷರಗಳನ್ನು ಹೇಳುವ ಮಾನವರೇ ಧನ್ಯರು.

(ನವಮೋಧ್ಯಾಯ ಮುಗಿಯಿತು. ಕೃಪೆ: ಶ್ರೀ ಸ್ಕಾಂದ ಪುರಣಾಂತರ್ಗತ ಶ್ರೀ ಕಾವೇರೀ ಮಾಹಾತ್ಮೈ. ಅನುವಾದಕರು: ದಿ.ಟಿ.ಪಿ ನಾರಾಯಣಾಚಾರ್ಯರು)