ಮಡಿಕೇರಿ, ಜೂ. 27: ಜುಲೈ 4ರವರೆಗೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನ 2ರ ತನಕ ಮಾತ್ರ ನಡೆಸುವಂತೆ ನಿನ್ನೆ ದಿನ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕೈಗೊಂಡಿದ್ದ ನಿರ್ಣಯಕ್ಕೆ ಜಿಲ್ಲೆಯ ಬಹುತೇಕ ಪಟ್ಟಣಗಳು ಸ್ಪಂದಿಸಿದ ವಾದರೂ, ವೀರಾಜಪೇಟೆ ಮತ್ತು ಗೋಣಿಕೊಪ್ಪ ಪಟ್ಟಣಗಳಲ್ಲಿ ಚೇಂಬರ್ ತೀರ್ಮಾನವನ್ನು ವಿರೋಧಿಸಿ ವ್ಯಾಪಾರ ವಹಿವಾಟು ಗಳು ಎಂದಿನಂತೆ ಮುಂದುವರೆದವು. ಮಡಿಕೇರಿ ಚೇಂಬರ್ ಮಧ್ಯಾಹ್ನ 12 ಗಂಟೆಯವರೆಗೂ ನಿಗಧಿಪಡಿಸಿದ್ದ ಅವಧಿಗೆ ಅಂಗಡಿ ಮುಂಗಟ್ಟುಗಳು ಮುಚ್ಚದೆ ಮಧ್ಯಾಹ್ನ 2ರ ಬಳಿಕ ವ್ಯಾಪಾರ ಸ್ಥಗಿತಗೊಳಿಸಿದವು. 4-5 ಅಂಗಡಿಗಳು ಮಾತ್ರ ವಹಿವಾಟು ಗಳನ್ನು ಮುಂದುವರಿಸಿದವಾದರೂ ಸಂಜೆ ವೇಳೆಗೆ ಮುಚ್ಚಲ್ಪಟ್ಟವು. ಅಗತ್ಯ ವಸ್ತುಗಳ ಅಂಗಡಿಗಳು ರಾತ್ರಿವರೆಗೂ ತೆರೆದಿದ್ದವು. ಮದ್ಯದಂಗಡಿಗಳು ಮಾತ್ರ ಮದ್ಯಪ್ರಿಯರಿಗೆ ನಿರಾಶೆ ಮಾಡಲಿಲ್ಲ.ವೀರಾಜಪೇಟೆ ನಗರದಲ್ಲಿ ಜಿಲ್ಲಾ ಚೇಂಬರ್ ತೀರ್ಮಾನಕ್ಕೆ ವಿರೋಧಿಸಿದ ವರ್ತಕರು ಸಭೆ ನಡೆಸಿ ವ್ಯಾಪಾರ ಮುಂದುವರಿಸಲು ತೀರ್ಮಾನಿಸಿದರು.ಗೋಣಿಕೊಪ್ಪಲಿನಲ್ಲಿ ವ್ಯಾಪಾರಕ್ಕೆ ಸಮಯ ನಿರ್ಬಂಧ ಮಾಡಿರುವ ಬಗ್ಗೆ ವ್ಯಾಪಾರಿಗಳು ಆಕ್ಷೇಪ ಪಡಿಸಿದರು. ಅಲ್ಲಿಯೂ ಸಭೆ ಸೇರಿ ಮುಂಜಾಗ್ರತಾ ಕ್ರಮವಹಿಸಿ ವ್ಯಾಪಾರಗಳನ್ನು ಮುನ್ನಡೆಸುವಂತೆ ನಿರ್ಣಯ ಕೈಗೊಳ್ಳ ಲಾಯಿತು. ಅಲ್ಲಿನ ಗ್ರಾ. ಪಂ. ಭಾನುವಾರದ ಸಂತೆಯನ್ನು ರದ್ದುಪಡಿಸಿದೆ. ವಾಣಿಜ್ಯ ನಗರಿ ಕುಶಾಲನಗರದಲ್ಲಿ

(ಮೊದಲ ಪುಟದಿಂದ) ವ್ಯಾಪಾರಿಗಳು ಮಧ್ಯಾಹ್ನ 2.30ರ ವೇಳೆಗೆ ವ್ಯವಹಾರ ಸ್ಥಗಿತಗೊಳಿಸಿದರು. ಸೋಮವಾರಪೇಟೆಯಲ್ಲಿಯೂ ಜಿಲ್ಲಾ ಚೇಂಬರ್ ತೀರ್ಮಾನದಂತೆ ಮಧ್ಯಾಹ್ನ 2 ಗಂಟೆ ನಂತರ ಸ್ವಯಂ ಪ್ರೇರಿತ ಲಾಕ್‍ಡೌನ್‍ಗೆ ವರ್ತಕರು ಕೈ ಜೋಡಿಸಿದರು. ಸಿದ್ದಾಪುರದಲ್ಲಿ ಸಂಜೆ 4ರವರೆಗೂ ವ್ಯಾಪಾರ ಮುಂದುವರೆದರೆ, ಸುಂಟಿಕೊಪ್ಪದಲ್ಲಿ ಮಿಶ್ರಪ್ರತಿಕ್ರಿಯೆ ಕಂಡು ಬಂದಿತು. ನಾಪೋಕ್ಲಿನಲ್ಲಿ ಸೋಮವಾರದ ಸಂತೆ ರದ್ದುಗೊಂಡಿದ್ದು, ವ್ಯಾಪಾ ರೋದ್ಯಮ ಮಧ್ಯಾಹ್ನ 2 ಗಂಟೆ ತನಕ ಮಾತ್ರ ಮುಂದು ವರಿಸಲು ತೀರ್ಮಾನಿಸಲಾಗಿದೆ. ಶನಿವಾರಸಂತೆ ಯಲ್ಲಿ ಶನಿವಾರದಂದು ಸಂತೆ ನಡೆಯಲಿಲ್ಲ.

ಚೆಟ್ಟಳ್ಳಿಯಲ್ಲಿ ಭಾನುವಾರ ಅಂಗಡಿ ಮುಂಗಟ್ಟು ತೆರೆಯಲು ತೀರ್ಮಾನಿಸಲಾಗಿದೆ. ಪೊನ್ನಂಪೇಟೆ ಯಲ್ಲಿ 2 ಗಂಟೆಯ ನಂತರ ಭಾಗಶಃ ಬಂದ್ ಆಗಿತ್ತು.

ವೀರಾಜಪೇಟೆ

ವೀರಾಜಪೇಟೆ ನಗರದ ವರ್ತಕರು ವೀರಾಜಪೇಟೆ ಪುರ ಭವನದಲ್ಲಿ ಸಭೆ ಸೇರಿ ಜಿಲ್ಲಾ ಚೆÉೀಂಬರ್ ಆಫ್ ಕಾಮರ್ಸ್‍ನ ಬಂದ್ ಕರೆಗೆ ವಿರೋಧ ವ್ಯಕ್ತಪಡಿಸಿದರು.

ಸಭೆಯಲ್ಲಿ ಸರ್ಕಾರದ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಿಕೊಂಡು ವ್ಯಾಪಾರ ವಹಿವಾಟು ನಡೆಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಕೆಲವು ವರ್ತಕರು ನಗರದಲ್ಲಿ ಚೆÉೀಂಬರ್ ಆಫ್ ಕಾಮರ್ಸ್ ನಿಷ್ಕ್ರಿಯಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಆದಷ್ಟು ಬೇಗನೆ ನೂತನ ವರ್ತಕರ ಸಂಘವನ್ನು ಸ್ಥಾಪಿಸಿ ಎಂದು ತಿಳಿಸಿದರು.

ಪಟ್ಟಣ ಪಂಚಾಯತಿ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಅಧÀ್ಯಕ್ಷತೆ ವಹಿಸಿದ್ದರು. ಕೊಲತಂಡ ಬೋಪಯ್ಯ, ಮೈನುದ್ದಿನ್, ಮತೀನ್, ಸಲಾಂ, ಸಿ.ಕೆ. ಪ್ರತ್ವಿನಾಥ್, ರವೂಪ್, ಉಮ್ಮರ್, ಡಿ.ಪಿ. ರಾಜೇಶ್, ಮಹಮ್ಮದ್ ರಾಪಿ, ಮಾಜಿ ಪಟ್ಟಣ ಪಂಚಾಯಿತಿ ಅಧÀ್ಯಕ್ಷ ವಿ.ಕೆ. ಸತೀಶ್, ಸೇರಿದಂತೆ ನಗರದ ಬಹುತೇಕ ವರ್ತಕರು ಭಾಗವಹಿಸಿದ್ದರು.

ಗೋಣಿಕೊಪ್ಪ

ಗೋಣಿಕೊಪ್ಪ ಪಟ್ಟಣದಲ್ಲಿ ವ್ಯಾಪಾರ ನಡೆಸಲು ಸಮಯದ ನಿರ್ಬಂಧ ಮಾಡುವುದು ಬೇಡ ಎಂಬ ನಿರ್ಧಾರವನ್ನು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ನಿರ್ಧಾರ ತೆಗೆದುಕೊಂಡಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ದಿನದ ಅರ್ಧ ದಿನ ಮಾತ್ರ ಅಂಗಡಿ ತೆರೆಯುವಂತೆ ನಿರ್ಧರಿಸಿದ್ದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ಧಾರದ ವಿಚಾರದಲ್ಲಿ ವ್ಯಾಪಾರಿ ಹಾಗೂ ಗ್ರಾಹಕರಲ್ಲಿನ ಗೊಂದಲ ಬಗ್ಗೆ ಇಲ್ಲಿನ ಚೇಂಬರ್ ಆಫ್ ಕಾಮರ್ಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.

ಕೊರೊನಾ ಮುಂದಿನ ದಿನಗಳಲ್ಲೂ ಹೆಚ್ಚಾಗುವ ಸಾಧ್ಯತೆ ಹೆಚ್ಚಿದ್ದರೂ ಕೂಡ, ಜನರು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ಬದುಕಬೇಕಿದೆ. ಅಂಗಡಿ, ಮಳಿಗೆ ಮುಚ್ಚುವುದರಿಂದ ವೈರಸ್ ನಿಯಂತ್ರಣ ಅಸಾಧ್ಯ. ಈ ನಿಟ್ಟಿನಲ್ಲಿ ದಿನವಿಡೀ ವ್ಯಾಪಾರ ನಡೆಸಲು ಯಾವುದೇ ಸಮಯದ ಮಿತಿ ಬೇಡ ಎಂಬ ಸಲಹೆಗಳನ್ನು ವ್ಯಾಪಾರಿಗಳು ನೀಡಿದರು. ಇದರಂತೆ ನಿರ್ಣಯ ತೆಗೆದುಕೊಳ್ಳಲಾಯಿತು.

ವ್ಯಾಪಾರ ಕೇಂದ್ರಗಳಲ್ಲಿ ಮುಂಜಾಗೃತಾ ಕ್ರಮಕೈಗೊಳ್ಳುವುದು, ಅವಶ್ಯವಿದ್ದಲ್ಲಿ ಮಾತ್ರ ಮಳಿಗೆಯ ಒಳ ಪ್ರವೇಶಕ್ಕೆ ಅವಕಾಶ ನೀಡುವುದನ್ನು ಪಾಲಿಸುವಂತೆ ವ್ಯಾಪಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಯಿತು.

ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಪಟ್ಟಣ ವ್ಯಾಪ್ತಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುವುದು, ಸ್ವಚ್ಛತೆ ಕಾಪಾಡಿಕೊಳ್ಳಲು ಮನವಿ ಮಾಡಿಕೊಳ್ಳುವಂತೆ ನಿರ್ಧರಿಸಲಾಯಿತು. ಸೀಲ್‍ಡೌನ್ ಅನಿವಾರ್ಯತೆ ಬಂದಾಗ ಜಿಲ್ಲಾಡಳಿತದೊಂದಿಗೆ ಸ್ಪಂಧಿಸುವಂತೆ ನಿರ್ಧಾರ ತೆಗೆದುಕೊಳ್ಳಲಾಯಿತು.

ಹಿರಿಯ ವರ್ತಕರಾದ ಅಜಿತ್ ಅಯ್ಯಪ್ಪ, ಕೊಲ್ಲೀರ ಉಮೇಶ್, ಕಿರಿಯಮಾಡ ಅರುಣ್ ಪೂಣಚ್ಚ, ಪ್ರಭಾಕರ್ ನೆಲ್ಲಿತ್ತಾಯ ಸಲಹೆ ನೀಡಿದರು.

ಸಭೆಯಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ಕಾಶಿ, ಜಿಲ್ಲಾ ಚೇಂಬರ್ ಉಪಾಧ್ಯಕ್ಷ ಕೇಶವ್ ಕಾಮತ್, ಮಾಜಿ ಅಧ್ಯಕ್ಷ ಬಿ. ಎನ್. ಪ್ರಕಾಶ್ ಇದ್ದರು.

ಕುಶಾಲನಗರ

ಕುಶಾಲನಗರ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನ 2.30 ರ ತನಕ ಮಾತ್ರ ತೆರೆದಿದ್ದವು. ಬೆಳಿಗ್ಗೆ 6 ಗಂಟೆಯಿಂದ ವಹಿವಾಟು ಮಾಡಿದ ವ್ಯಾಪಾರಿಗಳು ಚೇಂಬರ್ ಆಫ್ ಕಾಮರ್ಸ್ ಮನವಿಗೆ ಸ್ಪಂದಿಸಿದ್ದು ಕಂಡುಬಂತು.

ಲಾಡ್ಜ್‍ಗಳು, ಸ್ಥಳೀಯ ಗ್ಯಾರೆಜ್‍ಗಳು, ಸೆಲೂನ್ ಸೇರಿದಂತೆ ಕೆಲವು ಅಂಗಡಿ ಮುಂಗಟ್ಟುಗಳು ಕಳೆದ ಎರಡು ದಿನಗಳಿಂದ ಸ್ವಯಂ ಪ್ರೇರಿತವಾಗಿ ಮುಚ್ಚಿದ್ದ ದೃಶ್ಯ ಗೋಚರಿಸಿದೆ.

ಉಳಿದಂತೆ ರಸ್ತೆ ಬದಿಯ ಕೆಲವು ತರಕಾರಿ ಅಂಗಡಿಗಳು ಮಾತ್ರ ಎಂದಿನಂತೆ ವ್ಯಾಪಾರ ವಹಿವಾಟು ಮಾಡುತ್ತಿದ್ದವು. ಕುಶಾಲನಗರ ಪಟ್ಟಣದ ಬಾರ್ ಮತ್ತು ವೈನ್ಸ್‍ಗಳು ತಮ್ಮ ವಹಿವಾಟನ್ನು ಮುಂದುವರೆಸಿದ್ದು ಕಂಡುಬಂದಿದೆ.

ಸೋಮವಾರಪೇಟೆ

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿರುವ ಹಿನ್ನೆಲೆ, ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದ್ದ ಸ್ವಯಂಪ್ರೇರಿತ ಲಾಕ್‍ಡೌನ್ ಇಂದಿನಿಂದ ಜಾರಿಗೆ ಬಂದಿದೆ.

ನಿನ್ನೆ ದಿನ ಚೇಂಬರ್ ಕಚೇರಿಯಲ್ಲಿ ಅಧ್ಯಕ್ಷ ಮನುಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಒಂದು ವಾರಗಳ ಕಾಲ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಿ, ಮಧ್ಯಾಹ್ನ ನಂತರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು.

ಅದರಂತೆ ಇಂದು ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ವಹಿವಾಟು ನಡೆಸಿ, ನಂತರ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಸ್ವಯಂಪ್ರೇರಿತ ಸೀಲ್‍ಡೌನ್‍ಗೆ ಸಹಕರಿಸಿದರು. ಪಟ್ಟಣದಲ್ಲಿ ಮೆಡಿಕಲ್ ಅಂಗಡಿಗಳು ತೆರೆದಿದ್ದರೆ, ಮದ್ಯದಂಗಡಿಗಳು ಸಂಜೆಯವರೆಗೂ ಬಂದ್ ಆಗಿರಲಿಲ್ಲ.

ಮಧ್ಯಾಹ್ನದ ನಂತರವೂ ಸಹ ಬೆರಳೆಣಿಕೆಯಷ್ಟು ಆಟೋಗಳು ಪಟ್ಟಣದಲ್ಲಿ ಕಂಡುಬಂದವು. ಕೆಎಸ್‍ಆರ್‍ಟಿಸಿ ಬಸ್‍ಗಳು ಎಂದಿನಂತೆ ಸಂಚರಿಸಿದರೆ, ಸಾರ್ವಜನಿಕರ ವಾಹನಗಳ ಓಡಾಟ ಮಧ್ಯಾಹ್ನದ ನಂತರ ಇಳಿಮುಖಗೊಂಡಿತು.

ಸುಂಟಿಕೊಪ್ಪ

ಜಿಲ್ಲಾ ಚೇಂಬರ್ ಆಫ್ ಕಾರ್ಮಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಂಟಿಕೊಪ್ಪ ಸ್ಥಾನೀಯ ಚೇಂಬರ್ ಆಫ್ ಕಾಮರ್ಸ್ ಸೂಚಿಸಿದರೂ ಭಾಗಶಃ ಅಂಗಡಿಗಳು ಮುಚ್ಚಿದ್ದು ಮತ್ತೆ ಕೆಲವು ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು. ಶನಿವಾರ ಪಟ್ಟಣದಲ್ಲಿ ಜನ ದಟ್ಟಣೆಯಿಂದ ಕೂಡಿ ಇರುತ್ತಿದ್ದು, ಮಧ್ಯಾಹ್ನ 2 ಗಂಟೆಯಾಗುತ್ತಲೇ ಕೆಲವು ಅಂಗಡಿ ಮುಗ್ಗಟುಗಳು ಮುಚ್ಚುತ್ತಿದ್ದು ಜನತೆ ಮನೆಗಳತ್ತ ಮುಖ ಮಾಡಿದರು. ವಾಹನ ಎಂದಿನಂತೆ ಸಂಚರಿಸುತ್ತಿದ್ದವು.

ಸಿದ್ದಾಪುರ ಸಂತೆ ರದ್ದು

ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 4 ಗಂಟೆಗಳವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿದ್ದಾಪುರ ಚೇಂಬರ್ ಆಫ್ ಕಾಮರ್ಸ್‍ನ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ತಿಳಿಸಿದ್ದಾರೆ. ಸಿದ್ದಾಪುರದಲ್ಲಿ ವರ್ತಕರ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಅವರು ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ತೋಟ ಕಾರ್ಮಿಕರು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಅವರುಗಳು ಕೆಲಸ ಬಿಟ್ಟು ಅಪರಾಹ್ನ ನಂತರ ಪಟ್ಟಣಕ್ಕೆ ಬರಬೇಕಾಗುತ್ತದೆ. ಪಟ್ಟಣಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಬರುತ್ತಿದ್ದಾರೆ. ಇದರಿಂದಾಗಿ ಸಿದ್ದಾಪುರದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 4 ಗಂಟೆಗಳವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈ ತೀರ್ಮಾನವು ಜುಲೈ 4 ರವರೆಗೆ ಇದ್ದು ಮುಂದಿನ ದಿನಗಳಲ್ಲಿ ಅಗತ್ಯವಿದ್ದಲ್ಲಿ ಮತ್ತೆ ಸಮಯವನ್ನು ಬದಲಾವಣೆ ಮಾಡಲಾಗುವುದೆಂದರು. ಈ ಸಂದರ್ಭದಲ್ಲಿ ಸ್ಥಾನೀಯ ಸಮಿತಿಯ ಉಪಾಧ್ಯಕ್ಷ ರವೂಫ್ ಹಾಜಿ, ಕಾರ್ಯದರ್ಶಿ ರೋಹಿತ್, ಜಿಲ್ಲಾ ನಿರ್ದೇಶಕ ಜೋಸೆಫ್ ಶ್ಯಾಂ , ಪದಾಧಿಕಾರಿಗಳಾದ ರಾಜೇಂದ್ರ ಸಿಂಗ್ , ಬಾಹುಲಾಲ್, ಬಿಜೋಯ್, ರಿಸ್ವಾದ್ , ದಿನೇಶ್ ರಾತೂರ್ ಇನ್ನಿತರರು ಹಾಜರಿದ್ದರು.

ಸಿದ್ದಾಪುರದಲ್ಲಿ ಭಾನುವಾರದಂದು ನಡೆಯಬೇಕಾಗಿದ್ದ ಸಂತೆಯನ್ನು ರದ್ದುಪಡಿಸಿರುವ ಬಗ್ಗೆ ಹಾಗೂ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸಿದ್ದಾಪುರ ಗ್ರಾಮ ಪಂಚಾಯಿತಿ ಪಿ.ಡಿ.ಓ ವಿಶ್ವನಾಥ್ ನೇತೃತ್ವದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನದಲ್ಲಿ ಪ್ರಚಾರ ನಡೆಸಲಾಯಿತು. ಈ ಕುರಿತು ಮಾತನಾಡಿದ ಅವರು ಸಂತೆ ರದ್ದಾದ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದ್ದು, ಅಂಗಡಿಗೆ ಸಾಮಗ್ರಿಗಳನ್ನು ಖರೀದಿಸಲು ಬರುವವರು ಸ್ಯಾನಿಟೈಸರ್ ಬಳಸಿಕೊಂಡು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಕರೆ ನೀಡಿದರು.

ನಾಪೋಕ್ಲು ಸಂತೆ ರದ್ದು

ಕೊರೊನಾ ಮಹಾಮಾರಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಹಾಗೂ ಸಮೀಪದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನೆÀ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾಪೆÇೀಕ್ಲುವಿನಲ್ಲಿ ಸೋಮವಾರ ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ. ಹಾಗೆಯೇ ಸೋಮವಾರದಿಂದ ಪ್ರತೀ ದಿನ ಬೆಳಿಗ್ಗೆ 6ರಿಂದ ಅಪರಾಹ್ನ 2 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ, ಸಾರ್ವಜನಿಕರ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮಯ್ಯ, ನಾಪೆÇೀಕ್ಲು ಪಟ್ಟಣದ ಸುತ್ತಮುತ್ತಲಿನ 27 ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಸಂತೆ ವ್ಯಾಪಾರಕ್ಕಾಗಿ ಎಲ್ಲರೂ ಇಲ್ಲಿಗೆ ಆಗಮಿಸುತ್ತಾರೆ. ಜನ ಜಂಗುಳಿಯನ್ನು ತಪ್ಪಿಸಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಸಂತೆಯನ್ನು ರದ್ದುಗೊಳಿಸಲಾಗಿದೆ. ಮಾರುಕಟ್ಟೆ ಆವರಣದೊಳಗೆ ಸ್ಥಳೀಯ ಹಾಗೂ ಹೊರಗಿನ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶವಿರುವದಿಲ್ಲ. ಉಳಿದಂತೆ ವಾಹನಗಳಲ್ಲಿ ತರಕಾರಿ ಮಾರಲು ಅಭ್ಯಂತರವಿಲ್ಲ. ಪಟ್ಟಣದಲ್ಲಿರುವ ಎಲ್ಲಾ ತರಕಾರಿ ಅಂಗಡಿಗಳಲ್ಲಿ ವ್ಯಾಪಾರ ನಡೆಸಬಹುದು ಎಂದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿರುವ ಕಾರಣ ಪಟ್ಟಣದಲ್ಲಿ ವಿನಾ ಕಾರಣ ಜನರ ಓಡಾಟ ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಲು ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕೆ ಪೆÇಲೀಸ್ ಇಲಾಖೆ ಸಹಕಾರ ನೀಡಬೇಕು ಎಂದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದ ಅವರು ಮಾಸ್ಕ್ ಧರಿಸದವರಿಗೆ ಪೆÇಲೀಸ್ ಇಲಾಖೆ ಮತ್ತು ಪಂಚಾಯಿತಿ ವತಿಯಿಂದ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಟಿ.ಎ.ಮಹಮ್ಮದ್, ಮಾಚೆಟ್ಟಿರ ಕುಶು ಕುಶಾಲಪ್ಪ, ಮಹಮ್ಮದ್ ಖುರೇಷಿ, ಸಾರ್ವಜನಿಕರಾದ ಕುಲ್ಲೇಟಿರ ಅರುಣ್ ಬೇಬ, ಎಂ.ಎ.ಮನ್ಸೂರ್ ಅಲಿ, ಕೇಲೇಟಿರ ದೀಪು ದೇವಯ್ಯ, ಮತ್ತಿತರರು ಇದ್ದರು.

ಶನಿವಾರಸಂತೆ ಸಂತೆ ಇಲ್ಲ

ಕೊರೊನಾ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದಂತೆ ಶನಿವಾರ ನಡೆಯಬೇಕಿದ್ದ ಸಂತೆ ರದ್ದಾಗಿದೆ.

ಸಂತೆ ವ್ಯಾಪಾರಕ್ಕೆಂದು ಬಂದ ವ್ಯಾಪಾರಿಗಳು ಸಂತೆ ಮಾರುಕಟ್ಟೆ ಹೊರಭಾಗದಲ್ಲಿ ಹಾಗೂ ಬೈಪಾಸ್ ರಸ್ತೆಯ ಎರಡೂ ಬದಿಯಲ್ಲಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ತಕ್ಷಣ ಠಾಣಾಧಿಕಾರಿ ದೇವರಾಜ್, ಸಿಬ್ಬಂದಿಗಳಾದ ಲೋಕೇಶ್, ಮುರಳಿ, ವಿವೇಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ತರಕಾರಿ ಅಂಗಡಿ, ಪ್ಲಾಸ್ಟಿಕ್ ಅಂಗಡಿ, ಹಣ್ಣಿನ ಅಂಗಡಿಗಳನ್ನು ತೆರವುಗೊಳಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಸಾರ್ವಜನಿಕರನ್ನು ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿ, ಅಂಗಡಿಗಳ ಮಾಲೀಕರಿಗೂ ಎಚ್ಚರಿಕೆ ನೀಡಿದರು.

ಚೇಂಬರ್ ಮನವಿಗೆ ಬೆಂಬಲ

ಸುಂಟಿಕೊಪ್ಪ; ಕೊಡಗಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನೆÀ್ನಲೆಯಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ತಾ. 27 ರಿಂದ ಜು. 4 ರವರೆಗೆ ಕೊಡಗಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸುವಂತೆ ಮನವಿ ಮಾಡಿತು.

ಇದಕ್ಕೆ ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದಿಂದ ಶುಕ್ರವಾರ ರಾತ್ರಿ ಅಧ್ಯಕ್ಷ ವಿ.ಎ. ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಮ್ಮ ವರ್ಕ್ ಶಾಪ್‍ಗಳನ್ನು ಮುಚ್ಚಿ ಚೇಂಬರ್ ಆಫ್ ಕಾಮರ್ಸ್ ಮನವಿಗೆ ಬೆಂಬಲ ನೀಡುವುದಾಗಿ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.

ಅದರಂತೆ ಶನಿವಾರದಿಂದ ಮುಂಜಾಗ್ರತಾ ಕ್ರಮವಾಗಿ ತಮ್ಮ ವರ್ಕ್ ಶಾಪ್‍ಗಳನ್ನು ಮುಚ್ಚಲಿದ್ದು, ವಾಹನ ಚಾಲಕರು ಸಹಕರಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಚೆಟ್ಟಳ್ಳಿ

ಚೆಟ್ಟಳ್ಳಿಯಲ್ಲಿ ಭಾನುವಾರ ಅಂಗಡಿ ತೆರೆಯಲು ವರ್ತಕರ ನಿರ್ಧಾರ. ಭಾನುವಾರ ಲಾಕ್ ಡೌನ್ ಮಾಡಿದರೆ ಕಾರ್ಮಿಕರಿಗೆ ಕಷ್ಟವಾದೀತು. ವಾರದ ಎಲ್ಲಾ ದಿನಗಳು ಬೆಳಗ್ಗೆ 6 ಗಂಟೆಯಿಂದ 2 ಗಂಟೆವರೆಗೆ ಮಾತ್ರ ವ್ಯಾಪಾರ ಮಾಡಲು ವರ್ತಕರು ತೀರ್ಮಾನಿಸಿದ್ದಾರೆ.

ಪೆÇನ್ನಂಪೇಟೆ

ಚೇಂಬರ್ ಆಫ್ ಕಾಮರ್ಸ್ ಮಧ್ಯಾಹ್ನ 2 ಗಂಟೆಯ ನಂತರ ವ್ಯಾಪಾರ ವಹಿವಾಟನ್ನು ಬಂದ್ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಪೆÇನ್ನಂಪೇಟೆಯ ಬಹುತೇಕ ವರ್ತಕರು 2 ಗಂಟೆಯ ನಂತರ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಬಂದ್ ವಿಷಯದಲ್ಲಿ ಗೊಂದಲವಿದ್ದ ಕಾರಣ ಅಲ್ಲಲ್ಲಿ ಕೆಲವು ದಿನಸಿ ಅಂಗಡಿಗಳು, ಬೇಕರಿಗಳು, ಹಣ್ಣು, ತರಕಾರಿ, ಮಾಂಸ ಮಾರಾಟದ ಅಂಗಡಿಗಳು, ವೈನ್ ಶಾಪ್‍ಗಳು ಎಂದಿನಂತೆ ತೆರೆದಿದ್ದವು. ಮೆಡಿಕಲ್ ಶಾಪ್‍ಗಳು ಕಾರ್ಯ ನಿರ್ವಹಿಸಿದವು. ಬಂದ್‍ಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಇಲ್ಲದ್ದರಿಂದ ಬಹುತೇಕ ವರ್ತಕರು ಗೊಂದಲದಲ್ಲಿದ್ದರು. ವಾಹನ ಸಂಚಾರ ಎಂದಿನಂತೆ ಇತ್ತು. 2 ಗಂಟೆಯ ನಂತರ ಪೆÇನ್ನಂಪೇಟೆ ಭಾಗಶಃ ಬಂದ್ ಆಗಿತ್ತು.