ಮಡಿಕೇರಿ, ಜೂ. 28: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಆತಂಕ ನಡುವೆ ಚೇಂಬರ್ ಆಫ್ ಕಾಮರ್ಸ್‍ನಿಂದ ಭಾನುವಾರದ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವಂತೆ ನಿರ್ಧಾರ ಕೈಗೊಂಡಿದ್ದ ಹಿನ್ನೆಲೆ ಇಂದು ಬಹುತೇಕ ಕಡೆಗಳಲ್ಲಿ ವ್ಯಾಪಾರ ಮಳಿಗೆಗಳು ಬಾಗಿಲು ಮುಚ್ಚಲ್ಪಟ್ಟಿದ್ದು, ಜನಜೀವನ ಸ್ತಬ್ಧಗೊಂಡಿದ್ದ ಅನುಭವವಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೂಡ ಮದ್ಯ- ಮಾಂಸ ಮಳಿಗೆಗಳ ಹೊರತು ಬಹುತೇಕ ಬಂದ್ ಆಗಿತ್ತು. ಸಂಪೂರ್ಣ ಬಂದ್ ಎದುರಾಯಿತು.ಸಿದ್ದಾಪುರದಲ್ಲಿ ಅಲ್ಪ ಮಳಿಗೆಗಳು ತೆರದುಕೊಂಡಿದ್ದರೂ, ಜನಜಂಗುಳಿ, ವಾಹನ ಓಡಾಟ ಕಡಿಮೆಯಿತ್ತು. ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕು ಕೇಂದ್ರ, ಕೊಡ್ಲಿಪೇಟೆ, ಶನಿವಾರಸಂತೆ, ಕುಶಾಲನಗರ ಇತರ ಭಾಗಗಳಲ್ಲಿ ಶೇ.90ಕ್ಕೂ ಅಧಿಕ ಮಂದಿ ವ್ಯಾಪಾರ ಸ್ಥಗಿತಗೊಳಿಸಿದ್ದು, ಕೆಲವು ವಾಹನಗಳ ಸಂಚಾರ ಗೋಚರಿಸಿತು.ಸಿದ್ದಾಪುರ ಸಂತೆ ರದ್ದು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದಾಪುರದ ಸಂತೆ ಭಾನುವಾರದಂದು ರದ್ದುಗೊಳಿಸ ಲಾಗಿತ್ತು. ಸಂತೆ ಮಾರುಕಟ್ಟೆಗೆ ಬೀಗ ಹಾಕಲಾಗಿತ್ತು. ಆದರೆ ಸಿದ್ದಾಪುರದ ಸುತ್ತಮುತ್ತಲಿನ ಕಾರ್ಮಿಕರಿಗೆ ಸಂತೆ ರದ್ದಾಗಿರುವ ಮಾಹಿತಿ ತಿಳಿಯದೆ ಸಂತೆಗೆಂದು ಬಂದವರು ಮಾರುಕಟ್ಟೆ ಬಳಿ ತೆರಳಿ ಹಿಂತಿರುಗಿ ಬರುವ ದೃಶ್ಯ ಕಂಡುಬಂದಿತು. ಮಾರುಕಟ್ಟೆ ಮುಚ್ಚಿದ ಹಿನ್ನೆಲೆಯಲ್ಲಿ ಕುರಿ ಮರಿಗಳು ಮೇಯುತ್ತಿದ್ದವು. ಸಂತೆ ರದ್ದಾದ ಹಿನ್ನೆಲೆಯಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಜನಸಂದಣಿ ಕಂಡುಬಂದಿತ್ತು. ಕೆಲವು ತರಕಾರಿ ವ್ಯಾಪಾರಿಗಳು ದುಬಾರಿ ಬೆಲೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಸಿದ್ದಾಪುರದ ಪಿಡಿಒ ಭೇಟಿ ನೀಡಿ ರಸ್ತೆಬದಿಯಲ್ಲಿ ಹಾಗೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡದಂತೆ ಸೂಚನೆ ನೀಡಿದರು. ಬೆರಳೆಣಿಕೆಯ ಬಸ್ಸುಗಳು ಸಂಚರಿಸುತ್ತಿತ್ತು, ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ಕುಶಾಲನಗರದಲ್ಲಿ ಸ್ಥಗಿತ

ಚೇಂಬರ್ ಆಫ್ ಕಾಮರ್ಸ್ ನೀಡಿದ ಭಾನುವಾರದ ಬಂದ್ ಕರೆಗೆ ಸ್ಪಂದಿಸಿ ಕುಶಾಲನಗರ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು. ಪಟ್ಟಣದ ಹೃದಯ ಭಾಗದ ಮೊಬೈಲ್ ಕಂಪನಿಯ ಮಳಿಗೆ ಹಾಗೂ ಮದ್ಯದ ಅಂಗಡಿಗಳು, ಬಾರ್‍ಗಳು ಸ್ಪಂದನ ನೀಡದಿರುವ ಬಗ್ಗೆ ಚೇಂಬರ್ ಪದಾಧಿಕಾರಿಗಳು

(ಮೊದಲ ಪುಟದಿಂದ) ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು.

ಸೋಮವಾರಪೇಟೆ

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿರುವ ಹಿನ್ನೆಲೆ, ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದ್ದ ಸ್ವಯಂಪ್ರೇರಿತ ಲಾಕ್‍ಡೌನ್ ನಿನ್ನೆಯಿಂದ ಜಾರಿಗೆ ಬಂದಿದ್ದು, ಇಂದು ಮದ್ಯ ಮತ್ತು ಮಾಂಸದಂಗಡಿಗಳನ್ನು ಹೊರತುಪಡಿಸಿ ಮಧ್ಯಾಹ್ನದ ನಂತರ ಪಟ್ಟಣದಲ್ಲಿ ಸಂಪೂರ್ಣ ಲಾಕ್‍ಡೌನ್ ಕಂಡುಬಂತು.

ಒಂದು ವಾರಗಳ ಕಾಲ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಿ, ಮಧ್ಯಾಹ್ನ ನಂತರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಬಗ್ಗೆ ಚೇಂಬರ್ ಆಫ್ ಕಾಮರ್ಸ್ ತೀರ್ಮಾನ ಕೈಗೊಂಡಿದ್ದು, ಅದರಂತೆ ದಿನಸಿ ಸೇರಿದಂತೆ ಇತರ ಅಂಗಡಿಗಳು ಬಂದ್ ಆದರೂ, ಮಾಂಸ ಹಾಗೂ ಮದ್ಯ ಮಾರಾಟ ಮಳಿಗೆಗಳು ತೆರೆದಿದ್ದವು.

ಮಧ್ಯಾಹ್ನ 2 ಗಂಟೆಯಾದರೂ ಸಂಪೂರ್ಣವಾಗಿ ಮಾಂಸ ಮಾರಾಟವಾಗದೇ ಇದ್ದುದರಿಂದ, ಉಳಿಕೆಯಾದ ಮಾಂಸವನ್ನು ಮಾರಾಟ ಮಾಡಲು ಸಂಜೆಯವರೆಗೂ ಕಾಯುವಂತಾಯಿತು. ಇನ್ನು ಪಟ್ಟಣದ ಮದ್ಯದಂಗಡಿಗಳು ರಾತ್ರಿಯವರೆಗೂ ತೆರೆದು, ಮದ್ಯಪಾನಿಗಳ ಆಗಮನವನ್ನು ಎದುರು ನೋಡುತ್ತಿದ್ದವು.

ಕಳೆದ ಲಾಕ್‍ಡೌನ್ ಸಂದರ್ಭವೇ ಮದ್ಯ ಮಾರಾಟಗಾರರು ಹೆಚ್ಚಿನ ನಷ್ಟ ಅನುಭವಿಸಿದ್ದೇವೆ. ಮದ್ಯದಂಗಡಿಗಳನ್ನು ನಡೆಸುವದೇ ಕಷ್ಟಕರವಾಗಿದೆ. ಪರವಾನಗಿ ನವೀಕರಣ ಸೇರಿದಂತೆ ಅಂಗಡಿಗಳ ನಿರ್ವಹಣೆಗೆ ವಾರ್ಷಿಕ ಲಕ್ಷಾಂತರ ಹಣ ವ್ಯಯಿಸಬೇಕಿದೆ. ಅಂಗಡಿಯಲ್ಲಿ ಮದ್ಯದ ಸಂಗ್ರಹ ಅಧಿಕವಿದ್ದು, ಮಾರಾಟವಾಗದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಮದ್ಯ ಮಾರಾಟ ಮಾಡುತ್ತಿದ್ದೇವೆ. ಪಾರ್ಸೆಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಪಟ್ಟಣದ ಬಾರ್‍ವೊಂದರ ಮಾಲೀಕರು ಅಭಿಪ್ರಾಯಿಸಿದ್ದಾರೆ.

ಮಧ್ಯಾಹ್ನ ನಂತರ ಪಟ್ಟಣದಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್ ಆಗಿದ್ದರಿಂದ ಜನ ಸಂಚಾರವಿಲ್ಲದೇ ಪಟ್ಟಣ ಬಿಕೋ ಎನ್ನುತ್ತಿತ್ತು. ಸಂಜೆ ವೇಳೆ ಒಂದಿಷ್ಟು ಮದ್ಯಪ್ರೇಮಿಗಳು ಪಟ್ಟಣಕ್ಕೆ ಆಗಮಿಸಿ, ಮದ್ಯ ಖರೀದಿಸಿ ಮನೆಗೆ ತೆರಳಿದರು.

ಸುಂಟಿಕೊಪ್ಪ

ಸುಂಟಿಕೊಪ್ಪ ಸಂತೆ ವ್ಯಾಪಾರ ಬಂದ್ ಆಗಿದ್ದರೂ ಎಂದಿನಂತೆ ದಿನಸಿ ಅಂಗಡಿ ತರಕಾರಿ ಅಂಗಡಿ, ವ್ಯಾಪಾರ ನಡೆಯಿತು. ಕೊರೊನಾ ಭೀತಿಯಿಂದ ಜನರ ಓಡಾಟ ವಿರಳವಾಗಿತ್ತು ವಾಹನ ಸಂಚಾರ ಎಂದಿನಂತೆ ಇತ್ತು. ಚೇಂಬರ್ ಆಫ್ ಕಾಮರ್ಸ್ ಹಾಗೂ ವಿವಿಧ ಸಂಘ ಸಂಸ್ಥೆ ಕೋರಿಕೆ ಮೇರೆಗೆ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಸೂಚನೆಯನ್ನು ನೀಡಿತ್ತು. ಅಪರಾಹ್ನ 2 ಗಂಟೆಯ ನಂತರ ಸಂಪೂರ್ಣ ಮುಚ್ಚಿದ್ದವು.

ಭಾನುವಾರದ ಸಂತೆ ರದ್ದುಗೊಂಡಿದ್ದರೂ ಬೆಳಿಗ್ಗಿನಿಂದಲೇ ಪಟ್ಟಣದಲ್ಲಿ ಆಸ್ಸಾಂ, ಉತ್ತರ ಪ್ರದೇಶ, ಬಿಹಾರ ಹಾಗೂ ಸ್ಥಳೀಯ ಜನತೆಯು ಸೇರಿದಂತೆ ವಿವಿಧೆಡೆಯ ಕಾರ್ಮಿಕರು ಮನೆಗೆ ದಿನಸಿ ತರಕಾರಿ ಸಾಮಗ್ರಿಗಳನ್ನು ಖರೀದಿಸುವಲ್ಲಿ ಜನ ದಟ್ಟಣೆಯು ಕಂಡು ಬಂತು. ಚೇಂಬರ್ ಆಫ್ ಕಾಮರ್ಸ್ ಕರೆಕೊಟ್ಟರೂ ಸಹ ತರಕಾರಿ ದರ ಏರಿಸಿದ್ದು ಗ್ರಾಹಕರಿಗೆ ಬಿಸಿ ತಟ್ಟಿತು. ಸೆಲೂನ್ ಅಂಗಡಿಗಳು ಸವಿತ ಸಮಾಜದ ಆದೇಶದಂತೆ ಮುಚ್ಚಿದ್ದವು. ಕುರಿ,ಕೋಳಿ, ಹಂದಿ ಮಾಂಸ ವ್ಯಾಪಾರ ಎಂದಿನಂತೆ ನಡೆಯಿತು. ಹೊಟೇಲ್‍ಗಳಲ್ಲಿ ವ್ಯಾಪಾರ ಕ್ಷೀಣಿಸಿದ್ದು ಹೊಟೇಲ್ ಮಾಲೀಕರಿಗೆ ತಲೆ ಬಿಸಿಕಾಡಿತು.

ಸುಂಟಿಕೊಪ್ಪ ಸ್ಥಾನೀಯ ಸಮಿತಿ ಚೇಂಬರ್ ಆಫ್ ಕಾರ್ಮಸ್ ವಿವಿಧ ಸಂಯುಕ್ತಾಶ್ರಯದಲ್ಲಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಸಮಿತಿಯ ಅಧ್ಯಕ್ಷ ಡಿ.ನರಸಿಂಹ ಅಧÀ್ಯಕ್ಷತೆಯಲ್ಲಿ ನಡೆಸಲಾಯಿತು. ಕೆಲವು ನ್ಯೂನತೆಗಳ ಬಗ್ಗೆ ವಿವಿಧ ಸಂಘ ಸಂಸ್ಥೆ ಹಾಗೂ ವ್ಯಾಪಾರಿಗಳು ಚರ್ಚಿಸಿದರು.

ಈ ಸಭೆಯಲ್ಲಿ ಹಿರಿಯ ನಾಗರಿಕರಾದ ಎಂ.ಎ.ವಸಂತ, ವರ್ಕ್‍ಶಾಫ್ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಪಿ.ಆರ್.ಸುನಿಲ್‍ಕುಮಾರ್, ಸ್ಥಾನೀಯ ಸಮಿತಿ ಕಾರ್ಯದರ್ಶಿ ಗಂಗಾಧರ ರೈ, ಖಜಾಂಜಿ ಸತೀಶ್ ಶೇಟ್, ಸಹ ಕಾರ್ಯದರ್ಶಿ ಬಿ.ಡಿ.ರಾಜು ರೈ, ಆಶೋಕ್ ಶೇಟ್, ಕೆ.ಎಚ್.ಶಿವಣ್ಣ, ವಹೀದ್‍ಜಾನ್, ಜಾಯಿದ್ ಆಹ್ಮದ್, ಕೆ.ಎಸ್.ಅನಿಲ್ ಕುಮಾರ್, ರಂಜೀತ್ ಕುಮಾರ್, ವಿಲಿಯಂ, ಎಂ. ಉಸ್ಮಾನ್ ಮತ್ತಿತರರು ಇದ್ದರು.