ಕುಶಾಲನಗರ, ಜೂ. 28: ಕುಶಾಲನಗರ ಸರಕಾರಿ ಆರೋಗ್ಯ ಸಮುದಾಯ ಕೇಂದ್ರವನ್ನು ಕೂಡಲೆ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಮೂಲಕ ಈ ಭಾಗದ ರೋಗಿಗಳಿಗೆ ಉತ್ತಮ ಸೇವೆ ಕಲ್ಪಿಸಬೇಕಾಗಿದೆ. ದಿನನಿತ್ಯ ಸರಾಸರಿ 300 ಕ್ಕಿಂತಲೂ ಅಧಿಕ ಹೊರ ರೋಗಿಗಳು ಮತ್ತು 50 ಕ್ಕೂ ಅಧಿಕ ಒಳರೋಗಿಗಳು ಆಸ್ಪತ್ರೆಗೆ ದಾಖಲಾಗು ತ್ತಿದ್ದು ಹಲವು ಸೌಕರ್ಯಗಳ ಕೊರತೆ ಯಿಂದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಪರದಾಡುವ ಸ್ಥಿತಿ ಸೃಷ್ಟಿಯಾಗುತ್ತಿದೆ.

ಕುಶಾಲನಗರದ ವ್ಯಾಪ್ತಿಯ ಸುಂಟಿಕೊಪ್ಪ, ಪಿರಿಯಾಪಟ್ಟಣ, ಕೊಣನೂರು ಭಾಗಗಳ ರೋಗಿಗಳು ಈ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದು ರೋಗಿಗಳ ಒತ್ತಡ ದಿನೇ ದಿನೇ ಏರಿಕೆ ಯಾಗುತ್ತಿದೆ. ಪ್ರಸಕ್ತ ಇರುವ ವೈದ್ಯರು ಮತ್ತು ಸಿಬ್ಬಂದಿ ನಿತ್ಯ ಹರಸಾಹಸ ಪಡಬೇಕಾದ ಪರಿಸ್ಥಿತಿ ಕಾಣಬಹುದು.

50 ಹಾಸಿಗೆಗಳುಳ್ಳ ಆಸ್ಪತ್ರೆಯಲ್ಲಿ ಕೇವಲ 5 ಜನ ವೈದ್ಯರುಗಳು ನಿಭಾಯಿಸಬೇಕಾಗಿದೆ. ಆಸ್ಪತ್ರೆಯಲ್ಲಿ ಪ್ರಸಕ್ತ 4 ಖಾಯಂ ವೈದ್ಯರಿದ್ದು ಇಬ್ಬರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಕೊರೊನಾ ಕೇಂದ್ರ ಹಾಗೂ ಪರೀಕ್ಷಾ ಕೇಂದ್ರಗಳಿಗೂ ನಿಯೋಜನೆ ಮಾಡುತ್ತಿರುವ ಹಿನೆÀ್ನಲೆಯಲ್ಲಿ ರೋಗಿಗಳಿಗೆ ಕೂಡ ಇದರಿಂದ ಅನಾನುಕೂಲವಾಗುತ್ತಿದೆ.

ಎಲ್ಲೆಡೆಯಿಂದ ಸಕ್ಕರೆ ಖಾಯಿಲೆ, ಬಿಪಿ, ಜ್ವರ, ಹೆರಿಗೆ ಮತ್ತಿತರ ರೋಗಿಗಳು ಬರುತ್ತಿದ್ದು, ಹೆದ್ದಾರಿಯಲ್ಲಿ ಉಂಟಾಗುತ್ತಿರುವ ಅಪಘಾತಗಳಿಂದ ಗಾಯಾಳುಗಳು ಕೂಡ ಆಸ್ಪತ್ರೆಯಲ್ಲಿ ತುಂಬಿರುವ ದೃಶ್ಯ ಸಾಮಾನ್ಯವಾಗಿದೆ. ಸಂಜೆಯಾಯಿತೆಂದರೆ ಈ ಆರೋಗ್ಯ ಕೇಂದ್ರದಲ್ಲಿ ಅಪಘಾತಕ್ಕೆ ಒಳಗಾಗಿ ತೀವ್ರ ಗಾಯಗಳಿಂದ ಚಿಕಿತ್ಸೆಗೆ ಒಳಗಾಗುತ್ತಿರುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ.

ಈ ಒತ್ತಡದ ನಡುವೆ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಮಡಿಕೇರಿಗೆ ಅಥವಾ ದೂರದ ಆಸ್ಪತ್ರೆಗಳಿಗೆ ಸಾಗಿಸಬೇಕಾದ ಪ್ರಮೇಯವೂ ಉಂಟಾಗುತ್ತಿದೆ.

ಮಕ್ಕಳ ತಜ್ಞರು, ಮೂಳೆ ತಜ್ಞರು, ಇಎನ್‍ಟಿ ಮತ್ತು ಅನಸ್ತೇಶಿಯ ವಿಭಾಗ ಗಳಿಗೆ ತಜ್ಞರ ನೇಮಕ ಮಾಡಬೇಕಾ ಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.